Advertisement

ಮಲೆನಾಡಲ್ಲಿ ಮುಂಗಾರು ಚುರುಕು

10:36 AM Jul 20, 2017 | |

ಶಿವಮೊಗ್ಗ: ಮಲೆನಾಡು ಹಾಗೂ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಮುಂಗಾರು ಚುರುಕುಗೊಂಡಿದ್ದು, ಬುಧವಾರ ಕೂಡ ಧಾರಾಕಾರ ಮಳೆಯಾಗಿದೆ. ಸತತ ಮಳೆಯಿಂದ ನದಿಗಳ ನೀರಿನ ಮಟ್ಟ ಏರುತ್ತಿದ್ದು, ಪ್ರಮುಖ ಜಲಾಶಯಗಳ ಒಳಹರಿವು ಹೆಚ್ಚಿದೆ. ಮಾಣಿಯಲ್ಲಿ ಅತ್ಯಧಿಕ 210 ಮಿಮೀ ಮಳೆಯಾಗಿದೆ.

Advertisement

ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದ ಶಿವಮೊಗ್ಗ- ಸಾಗರ ನಡುವಿನ ರಾಷ್ಟ್ರೀಯ ಹೆದ್ದಾರಿ 206ರ ತುಪ್ಪೂರು ಗ್ರಾಮದಲ್ಲಿ ಬೃಹದಾಕಾರದ ಮರ ಹೆದ್ದಾರಿ ಮೇಲೆ ಉರುಳಿ ಬಿದ್ದು ವಾಹನ ಸಂಚಾರಕ್ಕೆ ತೀವ್ರ ಅಡೆತಡೆ ಉಂಟಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ರಸ್ತೆಯ ಮೇಲೆ ಬಿದ್ದಿದ್ದ ಮರವನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮರ ಬಿದ್ದಿದ್ದರಿಂದ ಸುಮಾರು 1 ಗಂಟೆಗೂ ಅಧಿಕ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಹರಿವಿನಲ್ಲಿ ಹೆಚ್ಚಳ: ಕಳೆದ ಮೂರ್‍ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಪ್ರಮುಖ ನದಿಗಳಾದ ಶರಾವತಿ, ತುಂಗಾ, ಭದ್ರಾ, ಕುಮದ್ವತಿ, ದಂಡಾವತಿ ಮೈದುಂಬಿ ಹರಿಯಲಾರಂಭಿಸಿದೆ. ಶರಾವತಿ ಹಾಗೂ ತುಂಗಾ ನದಿಯ ಹರಿವಿನಲ್ಲಿ ಹೆಚ್ಚಳ ಕಂಡುಬಂದಿದೆ. ಇದೇ ರೀತಿ ಮಳೆ ಮುಂದುವರಿದರೆ ಈ ಎರಡು ನದಿ ಪಾತ್ರಗಳ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಆತಂಕ ಎದುರಾಗಿದೆ. ಬಿರುಸುಗೊಂಡ ಕೃಷಿ ಚಟುವಟಿಕೆ: ಜಿಲ್ಲಾದ್ಯಂತ ಕೃಷಿ ಚಟುವಟಿಕೆ ಬಿರುಸುಗೊಂಡಿವೆ. ಮಳೆ
ಕೊರತೆಯಿಂದ ಸಂಪೂರ್ಣ ನಿಂತಿದ್ದ ಭತ್ತ ಬಿತ್ತನೆ ಹಾಗೂ ನಾಟಿ ಕಾರ್ಯ ಚುರುಕುಗೊಂಡಿದೆ. ಉತ್ತಮಳೆಯಾಗುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದೆ.

ಮಳೆ ವಿವರ: ಬುಧವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗದಲ್ಲಿ 19.8 ಮಿ.ಮೀ., ಭದ್ರಾವತಿ 
25 ಮಿ.ಮೀ., ಬಿ.ಆರ್‌.ಪಿ. 7 ಮಿ.ಮೀ., ತೀರ್ಥಹಳ್ಳಿ 85.8 ಮಿ.ಮೀ., ಶಿಕಾರಿಪುರ 28.8 ಮಿ.ಮೀ., ಸಾಗರ 55 ಮಿ.ಮೀ., ಸೊರಬ 20 ಮಿ.ಮೀ., ಹೊಸನಗರದಲ್ಲಿ 110.2 ಮಿ.ಮೀ. ವರ್ಷಧಾರೆಯಾಗಿದೆ. 

ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ವರ್ಷಧಾರೆಯ ಅಬ್ಬರ ಜೋರಾಗಿದೆ. ಮಾಣಿಯಲ್ಲಿ 210 ಮಿ.ಮೀ., ಯಡೂರಿನಲ್ಲಿ 178 ಮಿ.ಮೀ., ಹುಲಿಕಲ್‌ನಲ್ಲಿ 143 ಮಿ.ಮೀ., ಮಾಸ್ತಿಕಟ್ಟೆಯಲ್ಲಿ 173 ಮಿ.ಮೀ., ಆಗುಂಬೆಯಲ್ಲಿ 74.5 ಮಿ.ಮೀ. ಹಾಗೂ ಲಿಂಗನಮಕ್ಕಿಯಲ್ಲಿ 124 ಮಿ.ಮೀ. ಮಳೆಯಾಗಿದೆ. 

Advertisement

ನೀರಿನ ಮಟ್ಟ: ಲಿಂಗನಮಕ್ಕಿ ಜಲಾನಯನ  ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಶರಾವತಿ ನದಿ ನೀರಿನ ಹರಿವಿನಲ್ಲಿ ಹೆಚ್ಚಳ ಕಂಡುಬಂದಿದೆ. ರಾಜ್ಯದ ಪ್ರಮುಖ ಜಲವಿದ್ಯುತ್‌ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂನ ಒಳಹರಿವಿನಲ್ಲಿ ಹೆಚ್ಚಳವಾಗಿದೆ. ಬುಧವಾರ ಬೆಳಗ್ಗೆಯ ಮಾಹಿತಿಯಂತೆ 30,062ಕ್ಯೂಸೆಕ್‌ ಒಳಹರಿವಿದ್ದು, 425.57 ಕ್ಯೂಸೆಕ್‌ ಹೊರಹರಿವಿದೆ.
ಡ್ಯಾಂನ ನೀರಿನ ಮಟ್ಟ 1768.80 (ಗರಿಷ್ಠ ಮಟ್ಟ : 1819) ಅಡಿಯಿದೆ. ಭದ್ರಾ ಡ್ಯಾಂನ ಒಳಹರಿವು 7685 ಕ್ಯೂಸೆಕ್‌ ಇದ್ದು, 151 ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. 129.10 (ಗರಿಷ್ಠ ಮಟ್ಟ: 186) ಅಡಿ ನೀರು ಸಂಗ್ರಹವಾಗಿದೆ. ತುಂಗಾ ಡ್ಯಾಂ ಈಗಾಗಲೇ ಗರಿಷ್ಠ ಮಟ್ಟವಾದ 588.24 ಅಡಿ ತಲುಪಿದೆ. ಪ್ರಸ್ತುತ 12,821 ಕ್ಯೂಸೆಕ್‌ ಒಳಹರಿವಿದ್ದು, 11,246 ಕ್ಯೂಸೆಕ್‌ ನೀರನ್ನು ಹೊರ
ಬಿಡಲಾಗುತ್ತಿದೆ. ಮಾಣಿ ಡ್ಯಾಂನ ನೀರಿನ ಮಟ್ಟ 1911.57 (ಗರಿಷ್ಠ ಮಟ್ಟ : 1952) ಅಡಿಯಿದೆ. 6663 ಕ್ಯೂಸೆಕ್‌ ಒಳಹರಿವಿದ್ದು, ಹೊರಹರಿವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. 

ಶಿವಮೊಗ್ಗದಲ್ಲೂ ಉತ್ತಮ ಮಳೆ: ಶಿವಮೊಗ್ಗ ನಗರದಲ್ಲಿ ಕಳೆದೆರೆಡು ದಿನಗಳಿಂದ ಬೀಳುತ್ತಿರುವ ಮಳೆ ಬುಧವಾರ ಕೂಡ ಮುಂದುವರಿದಿದೆ. ತುಂಗಾ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರ ಬಿಟ್ಟಿರುವುದರಿಂದ ನಗರದ ಮೂಲಕ ಹಾದು ಹೋಗಿರುವ ತುಂಗಾ ನದಿಯು ಮೈದುಂಬಿ ಹರಿಯಲಾರಂಭಿಸಿದೆ. ಕೋರ್ಪಳಯ್ಯನ ಛತ್ರದ ಬಳಿಯಿರುವ, ಮಂಟಪ ಮುಳುಗುವ
ಹಂತಕ್ಕೆ ತಲುಪಿದೆ. ಮೈದುಂಬಿ ಹರಿಯುತ್ತಿರುವ ತುಂಗೆಯನ್ನು ನೋಡಲು ಜನರು ನೂರಾರು ಸಂಖ್ಯೆಯಲ್ಲಿ ಆಗಮಿಸತೊಡಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next