Advertisement

ಮೂರು ದಿನದಲ್ಲಿ ಉತ್ತಮ ಮುಂಗಾರು ಮಳೆ: ಮಹೇಶ

10:05 AM Jun 09, 2020 | Suhan S |

ಬಾಗಲಕೋಟೆ: ಪ್ರಸಕ್ತ ವರ್ಷದಲ್ಲಿ ಮುಂಗಾರು ಮಳೆಯು ವಾಡಿಕೆಯಂತೆ ಜೂ.1 ರಂದು ಕೇರಳ ರಾಜ್ಯವನ್ನು ಪ್ರವೇಶಿಸಿದ್ದು, ಮುಂಗಾರು ಈಗಾಗಲೇ ಕರ್ನಾಟಕದ ಕರಾವಳಿ ಪ್ರದೇಶದ ಕಾರವಾರವನ್ನು ಪ್ರವೇಶಿಸಿದೆ.

Advertisement

ಮುಂದಿನ ಜೂ.10, 11ರವರೆಗೆ ಕರ್ನಾಟಕದ ಉತ್ತರ ಒಣ ವಲಯದಲ್ಲಿ ಬರುವ ಬಾಗಲಕೋಟೆ ಜಿಲ್ಲೆಗೆ ಪ್ರವೇಶಿಸಲಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ಘಟಕದ ವಿಷಯ ತಜ್ಞ ಮಹೇಶ ಹರೋಲಿ ತಿಳಿಸಿದ್ದಾರೆ. ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಈ ವರ್ಷದ ಮುಂಗಾರಿನಲ್ಲಿ ವಾಡಿಕೆಯಷ್ಟು ಮಳೆಯಾಗಲಿದ್ದು, ರೈತರು ಆತಂಕ ಪಡಬೇಡಿ. ಪ್ರಸ್ತುತ ವರ್ಷದಲ್ಲಿ ಎಲ್ನಿನೊಸದರನ್‌ ಆಸಿಲೇಶನ್‌ ಪ್ರಕ್ರಿಯೆಯು ಹಾಗೂ ಇಂಡಿಯನ್‌ ಒಷಿಯನ್‌ ಡೈಪೋಲ್‌ ಪ್ರಕ್ರಿಯೆಯು ತಟಸ್ಥವಾಗಿರುವುದರ ಜತೆಗೆ ಹಿಂದೂ ಮಹಾಸಾಗರ ಹಾಗೂ ಫೆಸಿಪಿಕ್‌ ಮಹಾಸಾಗರದ ಮೇಲ್ಮೆ ಉಷ್ಣಾಂಶ ಪೂರಕವಾಗಿರುವುದರಿಂದ ಉತ್ತಮ ಮುಂಗಾರಿನ ನಿರೀಕ್ಷೆಯಿದೆ ಎಂದಿದ್ದಾರೆ.

ಕಳೆದ ನಾಲ್ಕೈದು ದಿನಗಳ ಹಿಂದೆ ಅರಬ್ಬಿ ಸಮುದ್ರದಲ್ಲಿ ಉಂಟಾಗಿದ್ದ ಸೈಕ್ಲೋನ್‌ ನಿಸರ್ಗದ ಪ್ರಭಾವದಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಇದನ್ನೇ ಅನೇಕರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಸೈಕ್ಲೋನ್‌ ನಿಂದಾಗಿ ಮುಂಗಾರು ವಿಸ್ತರಿಸಲು ಸ್ವಲ್ಪ ಹಿನ್ನಡೆ ಉಂಟಾಗಿದೆ. ಜಿಲ್ಲೆಯಲ್ಲಿ ಮುಂಗಾರಿಗೂ ಮುನ್ನ ಮಳೆಯಾಗಿರುವುದರಿಂದ ರೈತರು ತಡಮಾಡದೆ ಭೂಮಿ ಸಿದ್ದಪಡಿಸಿಕೊಂಡು ಬಿತ್ತನೆ ಕಾರ್ಯವನ್ನು ತ್ವರಿತವಾಗಿ ಮುಗಿಸಬೇಕು. ರೈತರು ಕೀಟ ಹಾಗೂ ರೋಗಗಳ ನಿರ್ವಹಣೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ರೈತರು ಹವಾಮಾನ ಮುನ್ಸೂಚನೆ ಆಧರಿಸಿ ಕೃಷಿ ಚಟುವಟಿಕೆ ಮಾಡುವುದು ಅವಶ್ಯವಾಗಿರುವುದರಿಂದ ಮೇಘಧೂತ ಮೊಬೈಲ್‌ ಆಪ್‌ ಸೇವೆ ಸದುಪಯೋಗ ಪಡಿಸಿಕೊಳ್ಳಬೇಕು. ಆಸಕ್ತ ರೈತರು ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ಘಟಕಕ್ಕೆ ಭೇಟಿ ನೀಡಿ ತಮ್ಮ ಹೆಸರು ಮತ್ತು ಮೊಬೈಲ್‌ ನಂಬರ್‌ ನಮೂದಿಸಿದರೆ ವಾರಕ್ಕೆ ಎರಡು ಬಾರಿ (ಪ್ರತಿ ಮಂಗಳವಾರ ಮತ್ತು ಶುಕ್ರವಾರ) ಜಿಲ್ಲಾ ಕೃಷಿ ಹವಾಮಾನ ಘಟಕದಿಂದ ಭಾರತ ಹವಾಮಾನ ಇಲಾಖೆ ನೀಡುವ ಮುಂದಿನ 5 ದಿನಗಳ ಹವಾಮಾನ ಮುನ್ಸೂಚನೆ ರವಾನಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂ: 08354-295543ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next