ಹೊಸದಿಲ್ಲಿ : ಹತ್ತು ದಿನ ತಡವಾಗಿ ಆರಂಭಗೊಂಡು ಕಳೆದ ಜೂನ್ ತಿಂಗಳು ಪೂರ್ತಿ ದುರ್ಬಲವಾಗಿದ್ದ ನೈಋತ್ಯ ಮಾನ್ಸೂನ್ ಈಗ ಜುಲೈ ತಿಂಗಳಲ್ಲಿ ತನ್ನ ಪೂರ್ಣ ಶಕ್ತಿಯನ್ನು ಮರಳಿ ಪಡೆದುಕೊಂಡಿದೆ. ಆ ಪ್ರಕಾರ ದೇಶಾದ್ಯಂತ ಈಗ ಮುಂಗಾರು ಮಳೆ ಬಿರುಸಿನಿಂದ ವ್ಯಾಪಿಸಿಕೊಳ್ಳುತ್ತಿದೆ.
ಮುಂಗಾರು ಮಾರುತ ಪ್ರಕೃತ ಗುಜರಾತ್, ರಾಜಸ್ಥಾನ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಹರಿಯಾಣ, ಚಂಡೀಗಢ, ದಿಲ್ಲಿ ಮತ್ತು ಹಿಮಾಚಲ ಪ್ರದೇಶ ಮೂಲಕ ಸಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮಹಾರಾಷ್ಟ್ರದ ಆದ್ಯಂತ ಮುಂದಿನ 24 ತಾಸುಗಳಲ್ಲಿ ಜಡಿ ಮಳೆ ಆಗಲಿದ್ದು ಪ್ರವಾಹದಂತಹ ಪರಿಸ್ಥಿತಿ ಉದ್ಭವವಾಗಲಿದೆ ಎಂದು ಖಾಸಗಿ ಹವಾಮಾನ ಅಂದಾಜು ಸಂಸ್ಥೆ ಸ್ಕೈ ಮೆಟ್ ಎಚ್ಚರಿಕೆ ನೀಡಿದೆ.
ಮುಂಬಯಿಯಲ್ಲಿ ಮುಂದಿನ 24 ತಾಸುಗಳಲ್ಲಿ ಭಾರೀ ಮಳೆ ಆಗಲಿದೆ. ಇದೇ ರೀತಿಯ ಜಡಿಮಳೆ ಕೊಂಕಣ್, ಗೋವಾ, ಅಸ್ಸಾ, ಮೇಘಾಲಯ, ಒಡಿಶಾ, ಜಾರ್ಖಂಡ್, ಬಿಹಾರ, ಛತ್ತೀಸ್‌ಗಢ ಮತ್ತು ಗುಜರಾತ್ ನಲ್ಲಿ ಮುಂದಿನ 24 ತಾಸುಗಳಲ್ಲಿ ಆಗಲಿದೆ.
ಈ ವಾರಾಂತ್ಯ ಪಂಜಾಬ್, ಹರಿಯಾಣ, ಚಂಡೀಗಢ, ದಿಲ್ಲಿ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಮಳೆ ತೀವ್ರಗೊಳ್ಳಲಿದ್ದು ಹೆಚ್ಚಿನ ಪ್ರಮಾಣದಲ್ಲಿ ಸುರಿಯಲಿದೆ.
ಮಾತ್ರವಲ್ಲದೆ ಆರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ, ಒಡಿಶಾ, ಪಶ್ಚಿಮ ಬಂಗಾಲ ಮತ್ತು ಸಿಕ್ಕಿಂ ನಲ್ಲಿ ವ್ಯಾಪಕ ಹಾಗೂ ತೀವ್ರ ಮಟ್ಟದಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.