Advertisement

ಮಳೆಗಾಲ ಎದುರಿಸಲು ಮಾನ್ಸೂನ್‌ ಗ್ಯಾಂಗ್‌ ಸಿದ್ಧ

11:26 PM Jun 03, 2020 | Sriram |

ಉಡುಪಿ: ಮಳೆಗಾಲದಲ್ಲಿ ವಿದ್ಯುತ್‌ ಪೂರೈಕೆ ಸವಾಲಿನ ಕೆಲಸ ವಾಗಿದ್ದು, ಜಿಲ್ಲೆಯ ಮೆಸ್ಕಾಂ ಅಧಿಕಾರಿಗಳು ಹಾಗೂ ಸಿಬಂದಿ ಮಳೆಗಾಲವನ್ನು ಎದುರಿಸಲು ಅಗತ್ಯವಿರುವ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ.

Advertisement

ಪ್ರತಿ ವರ್ಷ ಎಪ್ರಿಲ್‌ ಕೊನೆಯಲ್ಲಿ ಮಳೆಗಾಲದ ಸಿದ್ಧತೆಗಳು ಪೂರ್ಣ ಗೊಳಿಸಲಾಗುತ್ತಿತ್ತು. ಆದರೆ ಈ ಬಾರಿ ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಮೇ ತಿಂಗಳ ಕೊನೆಯಲ್ಲಿ ಸಿದ್ಧತೆಗಳನ್ನು ಪ್ರಾರಂಭಿಸಲಾಗಿದೆ. ಉಡುಪಿ ಮೆಸ್ಕಾಂ ವೃತ್ತದ ವ್ಯಾಪ್ತಿಯಲ್ಲಿ ಉಡುಪಿ ನಗರ, ಮಣಿಪಾಲ, ಕಾಪು, ಕಾರ್ಕಳ, ಹೆಬ್ರಿ, ಬ್ರಹ್ಮಾವರ, ಕುಂದಾಪುರ, ಬೈಂದೂರು, ತಲ್ಲೂರು, ಕೋಟ ಉಪವಿಭಾಗಗಳಿದ್ದು, ಮೆಸ್ಕಾಂ ಸಿಬಂದಿ ವಿದ್ಯುತ್‌ ಕಂಬಗಳ ದುರಸ್ತಿ ಕಾರ್ಯ, ಹಾನಿ ಸಂಭವಿಸಿದಾಗ ಮರು ಸಂಪರ್ಕಕ್ಕೆ ಬೇಕಾದ ಸಾಮಗ್ರಿ ಸಿದ್ಧಪಡಿಸುತ್ತಿದ್ದಾರೆ.

“ಗ್ಯಾಂಗ್‌’ ಕಾರ್ಯಪ್ರವೃತ್ತ
ಪ್ರತಿ ವರ್ಷ ಮೇ ತಿಂಗಳಲ್ಲಿ ಮೆಸ್ಕಾಂ ವಿದ್ಯುತ್‌ ತಂತಿ ಬೀಳುವ ಸ್ಥಿತಿಯಲ್ಲಿರುವುದನ್ನು ಸರಿಪಡಿಸುವುದು, ಅದಕ್ಕೆ ತಾಗಿಕೊಂಡಿರುವ ಎಲ್ಲ ಮರಗಳ ರೆಂಬೆಗಳನ್ನು ತೆರವುಗೊಳಿಸಲಾಗುತ್ತದೆ. ಅದಕ್ಕಾಗಿ ಹೆಚ್ಚಿನ ಸಿಬಂದಿ ಆವಶ್ಯಕತೆ ಹಿನ್ನೆಲೆಯಲ್ಲಿ, ಮುಖ್ಯ ಮೆಸ್ಕಾಂ ಕೇಂದ್ರ ಕಚೇರಿಯಿಂದ ಉಡುಪಿ ವಿಭಾಗಕ್ಕೆ 78, ಕುಂದಾಪುರ ವಿಭಾಗಕ್ಕೆ 46 ಸೇರಿದಂತೆ ಉಡುಪಿ ವೃತ್ತಕ್ಕೆ 124 ಗ್ಯಾಂಗ್‌ಮೆನ್‌ನೀಡಲಾಗಿದೆ.

ಪ್ರಸ್ತುತ ಜಿಲ್ಲೆಯಲ್ಲಿ 700ಕ್ಕೂ ಅಧಿಕ ಲೈನ್‌ಮೆನ್‌ ಇದ್ದಾರೆ. ಈ ಮಾನ್ಸೂನ್‌ ಗ್ಯಾಂಗ್‌ಮನ್‌ಗಳು ಗುತ್ತಿಗೆ ಆಧಾರದ ಮೇಲೆ 3 ತಿಂಗಳು ಮಾತ್ರ ಕೆಲಸ ಮಾಡಲಿದ್ದಾರೆ.

ಮೆಸ್ಕಾಂಗೆ 6.46 ಕೋಟಿ ರೂ. ನಷ್ಟ
2019-20ನೇ ಸಾಲಿನಲ್ಲಿ ಸುರಿದ ಮಳೆಗೆ ಉಡುಪಿ ವಿಭಾಗದಲ್ಲಿ 2,830 ಕಂಬಗಳು, 617 ಟ್ರಾನ್ಸ್‌ ಫಾರ್ಮರ್‌, 79.8 ಕಿ.ಮೀ. ಉದ್ದದ ವಿದ್ಯುತ್‌ ತಂತಿ ಹಾಗೂ ಕುಂದಾಪುರ ವಿಭಾಗದಲ್ಲಿ 1,595 ಕಂಬಗಳು, 272 ಟ್ರಾನ್ಸ್‌ಫಾರ್ಮರ್‌ಗಳು, 37.2 ಕಿ.ಮೀ. ಉದ್ದದ ವಿದ್ಯುತ್‌ ತಂತಿ ಸೇರಿದಂತೆ ಒಟ್ಟು 6.46 ಕೋ.ರೂ. ನಷ್ಟ ಉಂಟಾಗಿತ್ತು. 2018-19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 4,428 ಕಂಬಗಳು, 821 ಟ್ರಾನ್ಸ್‌ ಫಾರ್ಮರ್‌, 104 ಕಿ.ಮೀ. ಉದ್ದದ ವಿದ್ಯುತ್‌ ತಂತಿ ಸೇರಿದಂತೆ ಒಟ್ಟು 6.25 ಕೋ.ರೂ. ನಷ್ಟ ಉಂಟಾಗಿತ್ತು. 2020ನೇ ಸಾಲಿನ ಮೇ ಅಂತ್ಯದವರೆಗೆ 530 ಕಂಬಗಳು, 71 ಟ್ರಾನ್ಸ್‌ಫಾರ್ಮರ್‌ಗಳು, 12 ಕಿ.ಮೀ. ಉದ್ದದ ವಿದ್ಯುತ್‌ ತಂತಿ ಹಾಳಾಗಿದ್ದು, ಇದರ ಮೌಲ್ಯ 69 ಲಕ್ಷ ರೂ. ಎಂದು ಮೆಸ್ಕಾಂ ತಿಳಿಸಿದೆ.

Advertisement

ಲಾಕ್‌ಡೌನ್‌ನಿಂದ ಹಿನ್ನಡೆ
ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಳೆಗಾಲದ ಪೂರ್ವ ಸಿದ್ಧತೆ ಕೆಲಸಕ್ಕೆ ಹಿನ್ನಡೆಯಾಗಿತ್ತು. ವಿಭಾಗದ ಲೈನ್‌ಮನ್‌ಗಳೊಂದಿಗೆ ಮಾನ್ಸೂನ್‌ ಗ್ಯಾಂಗ್‌ಮೆನ್‌ಕರ್ತವ್ಯ ನಿರ್ವಹಿಸಲಿದ್ದಾರೆ.
-ನರಸಿಂಹ ಪಂಡಿತ್‌,
ಮೆಸ್ಕಾಂ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next