Advertisement

ಜೂನ್‌ ಮೊದಲ ವಾರವೇ ರಾಜ್ಯಕ್ಕೆ ಮುಂಗಾರು? ಮುಂದಿನ 5 ದಿನಗಳ ಕಾಲ ರಾಜ್ಯಾದ್ಯಂತ ಮಳೆ

11:53 PM May 19, 2024 | Team Udayavani |

ಬೆಂಗಳೂರು: ಕರ್ನಾಟಕಕ್ಕೆ ಜೂನ್‌ ಮೊದಲನೇ ವಾರದಲ್ಲಿ ಮುಂಗಾರು ಪ್ರವೇಶವಾಗುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆಯ ತಜ್ಞರು ಹೇಳಿದ್ದಾರೆ.

Advertisement

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಜೂನ್‌ ಮೊದಲ ವಾರದಲ್ಲಿ ಅಂದರೆ ಅಂದಾಜು ಜೂ.5ರಂದು ರಾಜ್ಯವನ್ನು ಪ್ರವೇಶಿಸುವ ಸಾಧ್ಯತೆಗಳಿವೆ.

ಸಾಮಾನ್ಯವಾಗಿ ಜೂನ್‌ 7-8ರಂದು ಮುಂಗಾರು ರಾಜ್ಯಕ್ಕೆ ಪ್ರವೇಶವಾಗುತ್ತದೆ. ಈ ಬಾರಿ ಒಂದೆರಡು ದಿನ ಮೊದಲೇ ರಾಜ್ಯದಲ್ಲಿ ಮುಂಗಾರು ಮಳೆ ಸುರಿಯುವ ಬಹುತೇಕ ಸಾಧ್ಯತೆಗಳು ಕಂಡು ಬಂದಿದೆ. ಕಳೆದ ವರ್ಷ ರಾಜ್ಯದಲ್ಲಿ ಬರ ಉಂಟಾಗಿದ್ದ ಹಿನ್ನೆಲೆಯಲ್ಲಿ ಮೇ ಅಂತ್ಯಕ್ಕೆ ಮುಂಗಾರು ಪ್ರವೇಶ ವಾಗಿ ಬಳಿಕ ಮಳೆಯ ಪ್ರಮಾಣ ಕಡಿಮೆಯಾಗಿತ್ತು. ಈ ಬಾರಿ ವಾಡಿಕೆಯಷ್ಟು ಮಳೆ ಸುರಿಯುವ ಸಾಧ್ಯತೆಗಳಿವೆ. ಸುಮಾರು ಮೇ 22ರಂದು ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿ ಮಳೆಯಾಗುವ ಸಾಧ್ಯತೆಗಳಿವೆ. ಮುಂದಿನ 5 ದಿನಗಳ ಕಾಲ ರಾಜ್ಯಾದ್ಯಂತ ಉತ್ತಮ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ತಜ್ಞರು ತಿಳಿಸಿದ್ದಾರೆ.

ರಾಜ್ಯದಲ್ಲಿ ಮಳೆಯಾಗುತ್ತಿರುವುದು ಯಾಕೆ?
ತಮಿಳುನಾಡಿನಲ್ಲಿ ಸರ್ಕ್ನೂಲೇಶನ್‌ 1.5 ಹಾಗೂ 4 ಕಿ.ಮೀ. ಎತ್ತರದಲ್ಲಿ ಇದೆ. ಕರ್ನಾಟಕದ ಒಳನಾಡಿನಲ್ಲಿ 0.9 ಎತ್ತರದ ವರೆಗೆ ಟ್ರಫ್ ಇದೆ. ಇದರ ಪ್ರಭಾವದಿಂದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮೇ 23ರ ವರೆಗೆ ಭಾರೀ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಮೇ 23ರ ವರೆಗೆ ಭಾರೀ ಮಳೆಯಾಗುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಉತ್ತರ ಕನ್ನಡ, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು, ಚಿಕ್ಕಬಳ್ಳಾಪುರ, ದಾವಣಗೆರೆ ಜಿಲ್ಲೆಗಳಿಗೆ ಹಳದಿ ಅಲರ್ಟ್‌ ಘೋಷಿಸಲಾಗಿದೆ. ಕರ್ನಾಟಕದ ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಇಂದು ಎಲ್ಲೆಲ್ಲಿ ಮಳೆ?
ಮೇ 20ರಂದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ. ಕೊಡಗು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಗಾಳಿಯೊಂದಿಗೆ (40-50 ಕಿ.ಮೀ) ಮಳೆಯಾಗಲಿದೆ. ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Advertisement

ಮೀನುಗಾರರಿಗೆ ಎಚ್ಚರಿಕೆ
0.4 – 1.1 ಮೀ. ಎತ್ತರ ಹೊಂದಿರುವ ಹೆಚ್ಚಿನ ಅವಧಿಯ (15-18 ಸೆಕೆಂಡ್‌) ಅಲೆಗಳ ಉಬ್ಬರವಿಳಿತದ ಪರಿಣಾಮ ಸಮುದ್ರ ತೀರದ ಸಮೀಪದಲ್ಲಿ ಪ್ರಕ್ಷುಬ್ಧವಾಗಿರುವ ಸಾಧ್ಯತಗೆಳಿವೆ. ಪ್ರಸ್ತುತ ವೇಗವು 12-46 ಸೆಕೆಂಡ್‌ನ‌ ನಡುವೆ ಬದಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next