ರಾಯಚೂರು: ವೈಜ್ಞಾನಿಕ ಯುಗದಲ್ಲಿ ಗ್ರಾಮೀಣ ಭಾಗದಲ್ಲೂ ಸಾಂಪ್ರದಾಯಿಕ ಕ್ರೀಡೆಗಳು ಮರೆಯಾಗುತ್ತಿರುವ ಇಂಥ ಸನ್ನಿವೇಶದಲ್ಲಿ ಮುಂಗಾರು ಸಾಂಸ್ಕೃತಿಕ ಹಬ್ಬದ ಮೂಲಕ ರೈತರಲ್ಲಿ ಹೊಸ ಚೈತನ್ಯ ತುಂಬುವ ಕೆಲಸ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಶ್ಲಾಘಿಸಿದರು.
ನಗರದ ಎಪಿಎಂಸಿಯಲ್ಲಿ ಮುನ್ನೂರುಕಾಪು ಸಮಾಜದಿಂದ ಹಮ್ಮಿಕೊಂಡ ಎರಡನೇ ದಿನದ ಸಾಂಸ್ಕೃತಿಕ ಹಬ್ಬದ ಕಾರ್ಯಕ್ರಮ ಹಾಗೂ 2 ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆಗೆ ಚಾಲನೆ ನೀಡಿ ಪೂಜ್ಯರು ಆಶೀರ್ವಚನ ನೀಡಿದರು.
ಐತಿಹಾಸಿಕ, ಸಾಂಸ್ಕೃತಿಕ, ಶೈಕ್ಷಣಿಕ ನಗರಿ ರಾಯಚೂರಿನಲ್ಲಿ ಮುಂಗಾರು ಹಬ್ಬದ ನಿಮಿತ್ತ ಗ್ರಾಮೀಣ ಸೊಗಡನ್ನು ಬಿಂಬಿಸುವ ಕ್ರೀಡೆಗಳು, ದೇಶದ ಸಾಂಪ್ರದಾಯಿಕ ಕಲೆಗಳನ್ನು ಪ್ರದರ್ಶಿಸುತ್ತಿರುವುದು ಸಂತಸದ ವಿಚಾರ. ಎಲ್ಲವೂ ತಂತ್ರಜ್ಞಾನ, ತಾಂತ್ರಿಕತೆಯಿಂದ ಕೂಡಿರುವ ಬದುಕಿನಲ್ಲಿ ಇಂದಿನ ಮಕ್ಕಳಿಗೆ ದೈಹಿಕ, ಮಾನಸಿಕ ಸಾಮರ್ಥಯ ವೃದ್ಧಿಗೆ ಅಗತ್ಯ ಆಟ-ಪಾಠಗಳೇ ಇಲ್ಲದಾಗಿದೆ. ಮೊಬೈಲ್‌ಗಳ ಹಾವಳಿಯಲ್ಲಿ ಹಿಂದಿನ ಸಂಸ್ಕೃತಿ, ಕಲೆಗಳನ್ನು ಪರಿಚಯಿಸುವ ಕೆಲಸವನ್ನು 18 ವರ್ಷಗಳಿಂದ ಮುನ್ನೂರು ಕಾಪು ಸಮಾಜ ಮಾಡುತ್ತಿರುವುದು ಮಾದರಿ ಕಾರ್ಯ ಎಂದರು. ಇಡೀ ವರ್ಷ ಮಳೆ, ಗಾಳಿ, ಬಿಸಿಲನ್ನು ಲೆಕ್ಕಿಸದೇ ಕೃಷಿ ಚಟುವಟಿಕೆಯಲ್ಲಿ ಮಗ್ನರಾಗುವ ರೈತರಿಗೆ ಇಂತಹ ಉತ್ಸವಗಳು ಹೊಸ ಚೈತನ್ಯ ತುಂಬಲಿವೆ. ಅವರಲ್ಲಿರುವ ಶಕ್ತಿ, ಸಾಮರ್ಥ್ಯ ಅನಾವರಣಕ್ಕೆ ಪೂರಕವಾಗಿವೆ. ಇಡೀ ದೇಶಕ್ಕೆ ಅನ್ನ ನೀಡುವ ರೈತರು ಸಹ ಕಾಮಧೇನುವಿಗೆ ಸಮ. ಆದ್ದರಿಂದ ಈ ಮುಂಗಾರು ಹಬ್ಬವನ್ನು ಕಾಮಧೇನು ಉತ್ಸವವೆಂದು ಕರೆಯಬಹುದು. ಎಲ್ಲೆಡೆ ಮಳೆ-ಬೆಳೆ ಚೆನ್ನಾಗಿ ಆಗಲಿ, ಜನರು ಸುಖ-ಶಾಂತಿ ನೆಮ್ಮದಿಯ ಬದುಕನ್ನು ಬಾಳುವಂತೆ ರಾಯರು ಅನುಗ್ರಹ ನೀಡಲಿ ಎಂದು ಆಶಿಸಿದರು.
ಹಬ್ಬದ ರೂವಾರಿ ಎ.ಪಾಪಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಮುನ್ನೂರುಕಾಪು ಸಮಾಜದ ಜಿಲ್ಲಾಧ್ಯಕ್ಷ ಬೆಲ್ಲಂ ನರಸರೆಡ್ಡಿ, ಮುಖಂಡರಾದ ಗಿರೀಶ ಕನಕವೀಡು, ಎನ್.ಕೇಶವರೆಡ್ಡಿ, ಪುಂಡ್ಲ ನರಸರೆಡ್ಡಿ, ಯು.ದೊಡ್ಡ ಮಲ್ಲೇಶ, ರಾಳ್ಳ ತಿಮ್ಮಾರೆಡ್ಡಿ, ಎಂ.ನಾಗರೆಡ್ಡಿ, ಆಂಜಿನೇಯ್ಯ ಸೇರಿ ಸಮಾಜದ ಹಿರಿಯರು, ಯುವಕರು, ನಗರದ ನಿವಾಸಿಗಳು ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶೀಘ್ರ ರೈತರ ಸಾಲ ಮನ್ನಾ ಮಾಡಬೇಕು. ರೈತರ ಸಾಲ ಮನ್ನಾ ಮಾಡುವುದಾಗಿ ಅವರು ಭರವಸೆ ನೀಡಿದ್ದು, ಆದಷ್ಟು ಬೇಗ ಸಾಲ ಮನ್ನಾ ಮಾಡಿದಲ್ಲಿ ರೈತರಿಗೆ ಒಳ್ಳೆಯದಾಗಲಿದೆ.
ಶ್ರೀ ಸುಬುಧೇಂದ್ರ ತೀರ್ಥರು, ಮಂತ್ರಾಲಯ ಮಠ