ಇಂಡಿ: ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಇಂಡಿ ತಾಲೂಕಿನಲ್ಲಿ ಸತತವಾಗಿ ಮೂರು ವರ್ಷಗಳ ಕಾಲ ಮುಂಗಾರು ಮಳೆ ಸಂಪೂರ್ಣ ವಿಫಲವಾಗಿ, ತಾಲೂಕು ಸತತ ಬರಗಾಲಕ್ಕೆ ತುತ್ತಾಗುತ್ತಿದೆ. ಈ ಬಾರಿಯೂ ಮತ್ತೆ ಬರಗಾಲ ಆವರಿಸಿದ್ದು ಸಂಕಷ್ಟದಲ್ಲಿ ರೈತರು ಕಾಲ ನೂಕುವಂತಾಗಿದೆ.
ಗ್ರಾಮೀಣ ಭಾಗದಲ್ಲಿ ಕೆರೆಗಳು, ತೆರೆದ ಬಾವಿಗಳು, ಕೊಳವೆ ಬಾವಿಗಳು, ಹಳ್ಳಗಳು ಬತ್ತಿ ಹೋಗಿದ್ದು ರೈತರನ್ನು ಆತಂಕಕ್ಕೆ ಈಡು ಮಾಡಿವೆ.
ಸತತ ಬರಗಾಲ ಹಾಗೂ ಈ ಬಾರಿ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆ ಆಗಿರುವುದರಿಂದ ತಾಲೂಕಿನಲ್ಲಿ ನಿಂಬೆ ಬೆಳೆಗಾರರು, ದಾಳಿಂಬೆ, ದ್ರಾಕ್ಷಿ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ.
ಸಣ್ಣ ಮತ್ತು ಅತಿ ಸಣ್ಣ ರೈತರು ತಮ್ಮ ಬದುಕು ಸಾಗಿಸಲು ನಿಂಬೆ ಬೆಳೆಯನ್ನೇ ಅವಲಂಬಿಸಿದ್ದಾರೆ. ತಾಲೂಕಿನಾದ್ಯಂತ ಸುಮಾರ 7 ಸಾವಿರ ಹೆಕ್ಟೇರ್ ಪ್ರದೇಶ. ಈ ಬಾರಿ ನಿಂಬೆ ಬೆಳೆಯ ನಾಶವಾಗಿದೆ. ನಿಂಬೆ ಬೆಳೆಗಾರರು ಟ್ಯಾಂಕರ್ ಮೊರೆ ಹೋಗಿದ್ದು, ಟ್ಯಾಂಕರ್‌ಗಳಿಗೆ ಸುಮಾರು 1200-2000 ವರೆಗೆ ಹಣ ಪಾವತಿಸಿ ಗಿಡಗಳಿಗೆ ನೀರು ಉಣಿಸುತ್ತಿದ್ದಾರೆ. ಶೇಕಡ 80 ರಷ್ಟು ಗಿಡಗಳು ಒಣಗಿದ್ದು ಹತ್ತಾರು ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ್ದ ನಿಂಬೆ ಗಿಡಗಳು ಕೆಲವೆಡೆ ಸಂಪೂರ್ಣವಾಗಿ ಒಣಗಿ ಹೋಗಿವೆ.
ಸಾಲ ಮಾಡಿ ಟ್ಯಾಂಕರ್ ನೀರು ಪೂರೈಸಿದರೂ ಗಿಡಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ಕಾರ ನಿಂಬೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ತಕ್ಷಣ ಎಲ್ಲಾ ಬೆಳೆಗಾರರಿಗೂ ಯೋಗ್ಯವಾದ ಪರಿಹಾರ ನೀಡಬೇಕು ಎಂಬುದು ರೈತರ ಆಗ್ರಹವಾಗಿದೆ.
ತಾಲೂಕಿನಲ್ಲಿ 4635 ಹೆಕ್ಟರ್ ನಿಂಬೆ, 3306 ಹೆಕ್ಟರ್ ದ್ರಾಕ್ಷಿ,2683 ಹೆಕ್ಟರ್ ದಾಳಿಂಬೆ, 227 ಹೆಕ್ಟರ್ ಬಾರಿಕಾಯಿ, 18 ಹೆಕ್ಟರ್ ಚಿಕ್ಕು, 86 ಹೆಕ್ಟರ್ ಸೀತಾಫಲ, 469 ಹೆಕ್ಟರ್ ಬಾಳೆ, ತರಕಾರಿ ಬಿತ್ತನೆಯಾಗಿದೆ. ಇದರಲ್ಲಿ ಶೇಕಡ 60ರಷ್ಟು ತೋಟಗಾರಿಕೆ ಬೆಳೆಗಳು ನಾಶವಾಗಿವೆ. –
ಎಚ್.ಎಚ್.ಪಾಟೀಲ. ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ
ಬೆಳೆಗಳಿಗೆ ಜೀವಕ್ಕೆ ಆಸರೆಯಾಗಬಹುದಾದ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆಗಳಿಗೂ ಸಹ ಅಲ್ಪ-ಸ್ವಲ್ಪ ನೀರು ಬಿಡುವುದರಿಂದ ಕೆಲ ಗ್ರಾಮಗಳಿಗೆ ಅನುಕೂಲವಾಗಿದೆ. ಆದರೆ ಇನ್ನೂ ಕೆಲ ಗ್ರಾಮಗಳಲ್ಲಿ ಜನ ಜಾನುವಾರುಗಳ ಸ್ಥಿತಿ ದೇವರೇ ಬಲ್ಲ ಎಂಬಂತಾಗಿದೆ. –
ಮಲ್ಲಿಕಾರ್ಜುನ ಹೊಸಮನಿ. ಆಳೂರ ಗ್ರಾಮದ ರೈತ
ನೀರಿನ ಕೊರತೆಯಿಂದಾಗಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಲಾಯಿತು. ಆದರೆ ಕಳೆದ ಆರು ತಿಂಗಳಲ್ಲಿ ಮಳೆಯಾಗದ ಕಾರಣ ಕೊಳವೆ ಬಾವಿಗಳು ಬತ್ತಿದ್ದು ನೀರಿಗಾಗಿ ಪರಿತಪಿಸುವಂತಾಗಿದೆ. ಸರಕಾರ ರೈತರ ಸಹಾಯಕ್ಕೆ ಬರಬೇಕು. –
ಶಂಕರ ಜಮಾದಾರ, ಹಿರೇರೂಗಿ ರೈತ.
ಎರಡು ಬೋರವೆಲ್ಲ ಕೊರೆಸಿದರೂ ನೀರು ಸಿಗಲಿಲ್ಲ. ಗಿಡಗಳಿಗಾಗಿ ಎರಡು ಲಕ್ಷ ರೂಪಾಯಿ ಖರ್ಚು ಮಾಡಿದ್ದು, ಟ್ಯಾಂಕರ್ ಮೂಲಕ ನೀರುಣಿಸಿದರೂ ಗಿಡಗಳು ಒಣಗಿ ಹೋಗುತ್ತಿವೆ, ನಮ್ಮ ಗೋಳು ಯಾರಿಗೆ ಹೇಳಬೇಕು? –
ಹೂವಣ್ಣ ಗಡೆಪ್ಪ ಬೇವನೂರ. ಆಳೂರ ರೈತ.
– ಯಲಗೊಂಡ ಬೇವನೂರ