ಬೆಂಗಳೂರು: ರಾಜ್ಯ ಕರಾವಳಿಗೆ ಶುಕ್ರವಾರ ಮುಂಗಾರು ಪ್ರವೇಶಿಸಿದೆ. ಆದರೆ, ಮುಂಗಾರು ಮಾರುತಗಳು ಕ್ಷೀಣಿಸಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಮಳೆಯಾಗಿಲ್ಲ. ಮುಂದಿನ ಕೆಲವೇ ದಿನಗಳಲ್ಲಿ ಮುಂಗಾರು ಬಲಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಈ ಮಧ್ಯೆ, ಶುಕ್ರವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಕೊಲ್ಲೂರಿನಲ್ಲಿ ರಾಜ್ಯದಲ್ಲಿಯೇ ಅಧಿಕ, 13 ಸೆಂ.ಮೀ.ಮಳೆ ಸುರಿಯಿತು. ಈ ಮಧ್ಯೆ, ಉಡುಪಿ ಸಮೀಪ ಮಾಸ್ತಿಕಟ್ಟೆಯಿಂದ ಹೊಸಂಗಡಿ ಕಡೆಗೆ ಘಾಟಿಯ ರಸ್ತೆಯಲ್ಲಿ ಚಲಿಸುತ್ತಿದ್ದ ಬೊಲೆರೋ ವಾಹನದ ಮೇಲೆ ಮರ ಬಿದ್ದು, ವಾಹನ ಜಖಂಗೊಂಡಿದೆ.
ಆದರೆ, ಯಾರಿಗೂ ಅಪಾಯವಾಗಿಲ್ಲ. ಉಡುಪಿ ಜಿಲ್ಲೆ ಅಮಾಸೆಬೈಲು ಗ್ರಾ.ಪಂ.ವ್ಯಾಪ್ತಿಯ ತೊಂಬಟ್ಟು ರತ್ನಾವತಿ ಶೆಟ್ಟಿ ಎಂಬುವರ ಮನೆಗೆ ಸಿಡಿಲು ಬಡಿದು, ವಿದ್ಯುತ್ ಉಪಕರಣಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಗುರುವಾರ ರಾತ್ರಿ ಎಲ್ಲರೂ ನಿದ್ದೆಯಲ್ಲಿರುವಾಗ ಸಿಡಿಲು ಬಡಿಯಿತು.
ಇದೇ ವೇಳೆ, ಗಾಳಿ ಮಳೆಯಿಂದ ಮೂರ್‍ನಾಲ್ಕು ದಿನಗಳಲ್ಲಿ ತೀರಕ್ಕೆ ಅಪ್ಪಳಿಸುತ್ತಿದ್ದ ಅಲೆಗಳ ರೌದ್ರಾವತಾರ ಶುಕ್ರವಾರ ಶಾಂತಗೊಂಡಿದೆ. ಆದರೆ, ಸಮುದ್ರ ಮಾತ್ರ ಇನ್ನೂ ಪ್ರಕ್ಷುಬ್ಧವಾಗಿದ್ದು, ದೋಣಿಗಳು ಕಡಲಿಗೆ ಇಳಿದಿಲ್ಲ.
ಮುಂಗಾರು ಮಾರುತಗಳು ಚುರುಕಾಗಿಲ್ಲದ ಕಾರಣದಿಂದ ಇನ್ನೂ ಎರಡು ದಿನಗಳು ಹೆಚ್ಚಿನ ಮಳೆಯಿರುವುದಿಲ್ಲ. ಎರಡು ದಿನಗಳ ನಂತರ ಮುಂಗಾರು ಚುರುಕುಗೊಳ್ಳುವ ಸಾಧ್ಯತೆಯಿದ್ದು, ಹೆಚ್ಚಿನ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ಪ್ರಕೃತಿ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಸುನೀಲ್ ಗವಾಸ್ಕರ್ ತಿಳಿಸಿದರು.