Advertisement
ಸಾಮಾನ್ಯವಾಗಿ ಮೇ ಅಂತ್ಯದ ವೇಳೆಗೆ ಬೇಸಾಯಕ್ಕೆ ಪೂರಕ ಚಟುವಟಿಕೆ ಆರಂಭವಾಗಿ ಜೂನ್ ಮಧ್ಯಾಂತರದಲ್ಲಿ ನಾಟಿ ನಡೆಯುತ್ತಿತ್ತು. ಆದರೆ ಈ ವರ್ಷ ಅವೆಲ್ಲವೂ ಅದಲು ಬದಲು. ಪೂರಕ ಕೆಲಸ ಆರಂಭವಾಗಿದ್ದು ಜೂನ್ 15ರ ಬಳಿಕ. ಜುಲೈ ಎರಡನೇ ವಾರದಲ್ಲಿ ಸುರಿದ ಧಾರಾಕಾರ ಮಳೆ, ನೆರೆಯ ಕಾರಣದಿಂದ ಕೆಲವೆಡೆ ಕೃಷಿಕರ ನೇಜಿ, ಬಿತ್ತಿದ ಬೀಜ ನೀರು ಪಾಲಾಗಿತ್ತು. ಅಂತಹ ರೈತರು ಮತ್ತೆ “ಆರಂಭ’ ಮಾಡುವಂತಾಗಿತ್ತು. ಅಷ್ಟೆಲ್ಲ ಆಗುವಾಗ ನಿರೀಕ್ಷಿತ ಮಳೆ ಸುರಿಯದೆ ಕೆರೆ, ಬಾವಿಗಳಿಂದ ಗದ್ದೆಗಳಿಗೆ ನೀರು ಹಾಯಿಸಿ ಬೆಳೆಯನ್ನು ರಕ್ಷಿಸುವ ಪರಿಸ್ಥಿತಿ ಎದುರಾಗಿತ್ತು. ಈ ಎಲ್ಲ ಕಾರಣಗಳಿಂದ ಕಟಾವು ಪ್ರಕ್ರಿಯೆಯೂ ವಿಳಂಬವಾಗಿದೆ.
ಈ ಬಾರಿ ಬೆಳೆ ಚೆನ್ನಾಗಿ ಬಂದಿದ್ದು, ದೊಡ್ಡ ಮಟ್ಟದಲ್ಲಿ ರೋಗಗಳು ಕಾಡಿಲ್ಲ ಎಂಬ ಅಭಿಪ್ರಾಯವಿದೆ. ಮಳೆಯಿಂದಾಗಿ ಹಾನಿಗೀಡಾದ ಕೆಲವು ಪ್ರದೇಶಗಳಲ್ಲಿ ಎರಡೆರಡು ಬಾರಿ ಬಿತ್ತನೆ ಕಾರ್ಯಗಳು ನಡೆದಿದ್ದು, ಇಂತಹ ಸ್ಥಳಗಳಲ್ಲಿ ಈಗಷ್ಟೇ ಪೈರು ಕಾಳುಕಟ್ಟುತ್ತಿವೆ. ಇದರಿಂದಾಗಿ ಕೆಲವೆಡೆ ಕಟಾವಿಗೆ ಇನ್ನೂ ಕನಿಷ್ಠ ಒಂದೂವರೆಯಿಂದ ಎರಡು ತಿಂಗಳು ಕಾಯಬೇಕಿದೆ. ಬಹುಶಃ ಡಿಸೆಂಬರ್ ಅಂತ್ಯದ ವೇಳೆಗೆ ಕಟಾವು ಮುಗಿಯಬಹುದು ಎನ್ನುತ್ತಾರೆ ಕುಪ್ಪೆ ಪದವಿನ ಕೃಷಿಕ ಮನೋಹರ ಶೆಟ್ಟಿ ನಡಿಕಂಬಳ ಗುತ್ತು. ಸರಕಾರ ಭತ್ತಕ್ಕೆ ರೈತರಿಗೆ ಉತ್ತಮ ಬೆಂಬಲ ಬೆಲೆಯನ್ನು ಘೋಷಿಸಬೇಕು ಎಂಬುದು ಅವರ ಒತ್ತಾಯ. ಮಳೆ ಬಂದರೆ ಸಂಕಷ್ಟ
ಈ ಬಾರಿ ಮುಂಗಾರಿನಲ್ಲಿ ನಿರೀಕ್ಷಿತ ಮಳೆಯಾಗಿಲ್ಲ. ಹಿಂಗಾರು ಮಳೆಯಾದರೂ ನಿರೀಕ್ಷೆಯಂತೆ ಸುರಿದರೆ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರಕಬಹುದು. ಆದರೆ ಕಟಾವು ಸಂದರ್ಭ ಬಿರುಸಿನ ಮಳೆಯಾದರೆ ತೆನೆ ಉದುರುವುದು ಮಾತ್ರವಲ್ಲದೆ ಬೈಹುಲ್ಲು ಕೂಡ ಹಾಳಾಗುವ ಸಾಧ್ಯತೆಯಿದೆ. ಅಂದು ಸುರಿಯಬೇಕಿದ್ದ ಮಳೆ ಇಂದು ಸುರಿದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾದೀತು ಎನ್ನುವುದು ರೈತರ ಆತಂಕ.
Related Articles
Advertisement
– ಭರತ್ ಶೆಟ್ಟಿಗಾರ್