Advertisement

ಮುಂಗಾರು ಕೃಷಿ ಚಟುವಟಿಕೆ ಚುರುಕು

12:39 PM Jun 12, 2018 | |

ದಾವಣಗೆರೆ: ಪೂರ್ವ ಮುಂಗಾರು ಮತ್ತು ಮುಂಗಾರು ಹಂಗಾಮಿನ ಪ್ರಾರಂಭ ಹಂತದಲ್ಲಿ ಆದ ಮಳೆಯಿಂದ ಈವರೆಗೆ ಜಿಲ್ಲೆಯಾದ್ಯಂತ ಶೇ. 13.9ರಷ್ಟು ಬಿತ್ತನೆಯಾಗಿದೆ. ಕಳೆದ ಬಾರಿ ಪೂರ್ವ ಮುಂಗಾರು ಮತ್ತು ಮುಂಗಾರು ಆರಂಭದಲ್ಲಿ ಮಳೆ ಕೊರತೆ ಪರಿಣಾಮ ಬಿತ್ತನೆ ಕುಂಠಿತಗೊಂಡಿತ್ತು. ಈ ವರ್ಷ ಉತ್ತಮ ಮಳೆಯಿಂದಾಗಿ ಬಿತ್ತನೆ ಕಾರ್ಯ ಚುರುಕಾಗಿದೆ.

Advertisement

ದಾವಣಗೆರೆ, ಹರಪನಹಳ್ಳಿ ತಾಲೂಕಿನ ಹಲವಾರು ಪ್ರದೇಶದಲ್ಲಿ ಎಡೆಬಿಡದೆ ಮಳೆಯಾದ ಕಾರಣ ಬಿತ್ತನೆ
ಮಾಡಲಾಗುತ್ತಿಲ್ಲ. ಒಂದರೆಡು ದಿನಗಳ ಕಾಲ ಮಳೆಯು ಬಿಡುವು ಕೊಡುವುದನ್ನು ರೈತರು ಕಾಯುವಂತಾಗಿದೆ. ಹರಪನಹಳ್ಳಿಯ ಕೆಲವು ಭಾಗದಲ್ಲಿ ಅತಿಯಾದ ಮಳೆಯ ಕಾರಣ ಹುಳುಗಳ ಬಾಧೆಯೂ ಕಾಡುತ್ತಿದೆ.

ಒಟ್ಟಾರೆಯಾಗಿ ಈ ಬಾರಿ ಉತ್ತಮ ಮಳೆ ಮಾತ್ರವಲ್ಲ, ಬೆಳೆಯ ನಿರೀಕ್ಷೆ ಇದೆ. 42,268 ಹೆಕ್ಟೇರ್‌ ಬಿತ್ತನೆ: ಜಿಲ್ಲೆಯಾದ್ಯಂತ 3,22,840 ಹೆಕ್ಟೇರ್‌ ಬಿತ್ತನೆ ಪ್ರದೇಶದ ಗುರಿ ಇದೆ. ಸದ್ಯ 42,268 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ, ಜೋಳ, ಹತ್ತಿ ಇತರೆ ಬೆಳೆಗಳ ಬಿತ್ತನೆ ಆಗಿದೆ. ಹಲವು ಕಡೆ ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ. ಮುಂಗಾರು ಹಂಗಾಮಿನಲ್ಲಿ ದಾವಣಗೆರೆ ತಾಲೂಕಿನ 64 ಸಾವಿರ ಹೆಕ್ಟೇರ್‌ ಪ್ರದೇಶದ ಬಿತ್ತನೆ ಗುರಿಯಲ್ಲಿ 10,882 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಅತಿ ಹೆಚ್ಚು ನೀರಾವರಿ ಪ್ರದೇಶ ಹೊಂದಿರುವ ಹರಿಹರ ತಾಲೂಕಿನಲ್ಲಿ 32 ಸಾವಿರ ಹೆಕ್ಟೇರ್‌ನಲ್ಲಿ ಇನ್ನೂ ಬಿತ್ತನೆ ನಡೆದಿಲ್ಲ. ಆ ತಾಲೂಕಲ್ಲಿ ಭತ್ತ ಹೆಚ್ಚಾಗಿ ಬೆಳೆಯುವ ಹಿನ್ನೆಲೆಯಲ್ಲಿ ಬಿತ್ತನೆ ಕಾರ್ಯ ನಡೆದಿಲ್ಲ, ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪ್ರಾರಂಭವಾಗಲಿದೆ.

ಬರಪೀಡಿತ ಹಣೆಪಟ್ಟಿ ಹೊಂದಿರುವ ಜಗಳೂರು ತಾಲೂಕಿನಲ್ಲಿ 54 ಸಾವಿರ ಹೆಕ್ಟೇರ್‌ ಪ್ರದೇಶದ ಗುರಿಯಲ್ಲಿ ಈವರೆಗೆ
2,615 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ.  79 ಸಾವಿರ ಹೆಕ್ಟೇರ್‌ ಪ್ರದೇಶದ ಗುರಿ ಹೊಂದಿರುವ
ಹರಪನಹಳ್ಳಿ ತಾಲೂಕಿನಲ್ಲಿ 20,250 ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದೆ. ಹೊನ್ನಾಳಿ ತಾಲೂಕಿನ 48,985 ಹೆಕ್ಟೇರ್‌ನಲ್ಲಿ 8,061, ಚನ್ನಗಿರಿ 44,855 ಹೆಕ್ಟೇರ್‌ಗೆ 520 ಹೆಕ್ಟೇರ್‌ ನಲ್ಲಿ ಮಾತ್ರ ಬಿತ್ತನೆ ಕಾರ್ಯ ಮುಗಿದಿದೆ. ಒಟ್ಟಾರೆಯಾಗಿ ಈವರೆಗೆ ಶೇ. 13.9 ಪ್ರಮಾಣದಲ್ಲಿ ಬಿತ್ತನೆ ಮುಗಿದಿದೆ.

ಮೆಕ್ಕೆಜೋಳವೇ ಹೆಚ್ಚು: ರಾಜ್ಯದ ಮೆಕ್ಕೆಜೋಳ ಕಣಜ ಎಂದೇ ಗುರುತಿಸಲ್ಪಡುವ ದಾವಣಗೆರೆ ಜಿಲ್ಲೆಯಲ್ಲಿ ಈ ಸಾಲಿನ ಮುಂಗಾರು ಹಂಗಾಮಿನಲ್ಲೂ ರೈತರು ಮೆಕ್ಕೆಜೋಳವನ್ನೇ ಹೆಚ್ಚಾಗಿ ಬಿತ್ತನೆ ಮಾಡಿದ್ದಾರೆ. ಮೆಕ್ಕೆಜೋಳಕ್ಕೆ ಇನ್ನೂ ಕಾಲಾವಕಾಶ ಇದೆ. ಹಾಗಾಗಿ ಮೆಕ್ಕೆಜೋಳದ ಬಿತ್ತನೆ ಪ್ರಮಾಣ ಹೆಚ್ಚಾಗಲಿದೆ. ಅದಕ್ಕೆ ಇಂಬು ನೀಡುವಂತೆ
ಒಳ್ಳೆಯ ಮಳೆಯಾಗುತ್ತಿರುವುದು ನಿರೀಕ್ಷೆಗೆ ಕಾರಣವಾಗಿದೆ.

Advertisement

ದಾವಣಗೆರೆ ತಾಲೂಕಿನಲ್ಲಿ 32,650 ಹೆಕ್ಟೇರ್‌ನಲ್ಲಿ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳದ ಬಿತ್ತನೆ ಗುರಿ ಇದೆ. ಈಗಾಗಲೇ 10,500 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಹರಿಹರ ತಾಲೂಕಿನಲ್ಲಿ 10,295 ಹೆಕ್ಟೇರ್‌ ಗುರಿ ಇದೆ. ಅಲ್ಲಿ ಬಿತ್ತನೆಯೇ ಆಗಿಲ್ಲ. ಜಗಳೂರು ತಾಲೂಕಿನ 14,250 ಹೆಕ್ಟೇರ್‌ ಪ್ರದೇಶದ ಪೈಕಿ 2,100 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಅಂತೆಯೇ ಹರಪನಹಳ್ಳಿಯಲ್ಲಿ 40,500 ಹೆಕ್ಟೇರ್‌ಗೆ 16,600, ಹೊನ್ನಾಳಿಯಲ್ಲಿ 26,320 ಹೆಕ್ಟೇರ್‌ಗೆ 4,443, ಚನ್ನಗಿರಿಯಲ್ಲಿ 25,685 ಹೆಕ್ಟೇರ್‌ಗೆ 200 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 1,49,580 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳದ ಬಿತ್ತನೆ ಗುರಿ ಇದ್ದು 33,843 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ.

ಜೋಳ ಕಡಿಮೆ: ಹಿಂದೊಮ್ಮೆ ಅತಿ ಹೆಚ್ಚಾಗಿ ಬೆಳೆಯಲಾಗುತ್ತಿದ್ದ ಊಟದ ಜೋಳ ಬೆಳೆಯುವುದೇ ಕಡಿಮೆ ಆಗಿದೆ. ಅತಿ ಹೆಚ್ಚಿನ ಪ್ರಾಶ್ಯಸ್ತ ಪಡೆದಿದ್ದ ಜೋಳವನ್ನು ಈಗ ವಾಣಿಜ್ಯ ಕಾರಣಕ್ಕೆ ಅಕ್ಕಡಿ ಬೆಳೆಯಂತೆ ಬೆಳೆಯಲಾಗುತ್ತಿದೆ. ದಾವಣಗೆರೆ ತಾಲೂಕಿನಲ್ಲಿ 650 ಹೆಕ್ಟೇರ್‌ ಗುರಿಗೆ ಈವರೆಗೆ 125, ಜಗಳೂರುನಲ್ಲಿ 2,350 ಹೆಕ್ಟೇರ್‌
ಗೆ 25 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಹರಿಹರದಲ್ಲಿ 1 ಸಾವಿರ, ಹರಪನಹಳ್ಳಿಯಲ್ಲಿ 5 ಸಾವಿರ, ಹೊನ್ನಾಳಿಯಲ್ಲಿ 750, ಚನ್ನಗಿರಿಯಲ್ಲಿ 4,100 ಹೆಕ್ಟೇರ್‌ ಗುರಿಯಲ್ಲಿ ಈವರೆಗೆ ಒಂದು ಕಾಳು ಬಿತ್ತನೆಯೇ ಆಗಿಲ್ಲ.

ಬೆಳೆವಾರು ಲೆಕ್ಕಾಚಾರ: ಮೆಕ್ಕೆಜೋಳ, ಜೋಳ, ರಾಗಿ, ಭತ್ತ ಒಳಗೊಂಡಂತೆ 2,45,211 ಹೆಕ್ಟೇರ್‌ ಪ್ರದೇಶದಲ್ಲಿ ಏಕದಳ ಬೆಳೆಗಳ ಗುರಿ ಹೊಂದಲಾಗಿದೆ. ಈವರೆಗೆ ಜಿಲ್ಲೆಯಲ್ಲಿ 35,435 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ತೊಗರಿ, ಕಡಲೆ, ಹುರುಳಿ ಒಳಗೊಂಡಂತೆ 21,860 ಹೆಕ್ಟೇರ್‌ನಲ್ಲಿ ದ್ವಿದಳ ಧಾನ್ಯ ಬೆಳೆಯುವ ಗುರಿಯಲ್ಲಿ 2,137 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಗಿದಿದೆ. 23,099 ಹೆಕ್ಟೇರ್‌ ಪ್ರದೇಶದಲ್ಲಿ ಎಣ್ಣೆಕಾಳುಗಳ ಬಿತ್ತನೆ ಗುರಿಗೆ 3,149 ಹೆಕ್ಟೇರ್‌ ಹಾಗೂ 32,672 ಹೆಕ್ಟೇರ್‌ ಪ್ರದೇಶದಲ್ಲಿ ಹೊಂದಿದ್ದ ವಾಣಿಜ್ಯ ಬೆಳೆಗಳ ಗುರಿಯಲ್ಲಿ 1,547 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ.

ಶೇ. 53 ಮಳೆ ಜಾಸ್ತಿ: ಪೂರ್ವ ಮುಂಗಾರು ಹಾಗೂ ಮುಂಗಾರು ಒಳಗೊಂಡಂತೆ ಜಿಲ್ಲೆಯಲ್ಲಿ ಶೇ. 53 ರಷ್ಟು ಮಳೆ ಪ್ರಮಾಣ ಜಾಸ್ತಿಯಾಗಿದೆ. ಜ. 1 ರಿಂದ ಜೂ. 11ರ ವರೆಗೆ 147 ಮಿಲಿ ಮೀಟರ್‌ಗೆ 233 ಮಿಲಿ ಮೀಟರ್‌ ಮಳೆಯಾಗಿದೆ. ಏಪ್ರಿಲ್‌ನಲ್ಲಿ 36 ಮಿಲಿ ಮೀಟರ್‌ಗೆ 27 ಮಿಲಿ ಮೀಟರ್‌, ಮೇ ತಿಂಗಳಲ್ಲಿ 75 ಮಿಲಿ ಮೀಟರ್‌ಗೆ 127
ಮಿಲಿ ಮೀಟರ್‌, ಜೂನ್‌ ಮಾಹೆಯಲ್ಲಿ 30 ಮಿಲಿ ಮೀಟರ್‌ಗೆ ಈವರೆಗೆ 50 ಮಿಲಿ ಮೀಟರ್‌ ಮಳೆಯಾಗಿದೆ. ಪೂರ್ವ
ಮುಂಗಾರಿನಲ್ಲಿ 117 ಮಿಲಿ ಮೀಟರ್‌ಗೆ 183 ಮಿಲಿ ಮೀಟರ್‌ ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next