ಬೆಂಗಳೂರು: ವಾಡಿಕೆಯಂತೆ ರಾಜ್ಯಕ್ಕೆ ಗುರುವಾರ ಮುಂಗಾರು ಪ್ರವೇಶವಾಗಿದ್ದು, ಈ ವರ್ಷ ಮುಂಗಾರು ಅವಧಿಯಲ್ಲಿ ದಕ್ಷಿಣ ಭಾರತ ರಾಜ್ಯಗಳಲ್ಲಿ ಶೇ. 102ರಷ್ಟು ವಾಡಿಕೆ ಮಳೆಯಾಗಲಿದೆ.
ಜುಲೈನಲ್ಲಿ ಶೇ.104ರಷ್ಟು, ಆಗಸ್ಟ್‌ನಲ್ಲಿ ಶೇ.97ರಷ್ಟು ವಾಡಿಕೆ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜೂನ್ 1ಕ್ಕೆ ಮುಂಗಾರು ಕೇರಳವನ್ನು ಪ್ರವೇಶಿಸಿದ್ದು, ಗುರುವಾರ ರಾಜ್ಯದ ಚಾಮರಾಜನಗರ, ಹಾಸನ, ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಭಾಗದಲ್ಲಿ ಮಳೆಯಾಗಿದೆ. ಕಳೆದ ಬಾರಿ ರಾಜ್ಯದಲ್ಲಿ ಶೇ.50ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿತ್ತು. ಈ ಬಾರಿ ಶೇ. 80ರಷ್ಟು ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.
ನಿಸರ್ಗ ಚಂಡಮಾರುತ ತೀವ್ರತೆ ಕಡಿಮೆಯಾಗಿದ್ದು, ಮುಂಗಾರು ಮಳೆಯ ಪ್ರಭಾವ ಕ್ಷೀಣಿಸಿದೆ. ಇದರ ಹೊರತಾಗಿಯೂ ಕರಾವಳಿ ಮತ್ತು ಮಲೆನಾಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ತುಂತುರು ಮಳೆಯಾಗುತ್ತಿದೆ. ಇನ್ನು ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ “ಆರೆಂಜ್ ಅಲರ್ಟ್’ ಎಚ್ಚರಿಕೆಯನ್ನು ಇಲಾಖೆ ನೀಡಿದೆ.
ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಯಲ್ಲಿ ಕಾರವಾರದಲ್ಲಿ ಅತಿ ಹೆಚ್ಚು 15 ಸೆಂ.ಮೀ ಮಳೆಯಾಗಿದ್ದು, ಉತ್ತರಕನ್ನಡದ ಗೋಕರ್ಣದಲ್ಲಿ 10, ಹೊನ್ನಾವರದಲ್ಲಿ 8, ಮಂಕಿಯಲ್ಲಿ 7, ಕದ್ರಾ ಹಾಗೂ ಕೊಡಗಿನ ಭಾಗಮಂಡಲದಲ್ಲಿ ತಲಾ 6 ಸೆಂ.ಮೀ ಮಳೆಯಾಗಿರುವುದು ವರದಿಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನು ಕಳೆದ ವರ್ಷ ಜೂನ್ 8ರಂದು ಕೇರಳ ಪ್ರವೇಶಿಸಿದ್ದ ಮುಂಗಾರು, ಜೂ 14ಕ್ಕೆ ರಾಜ್ಯ ಪ್ರವೇಶಿಸಿತ್ತು. ಪ್ರಾರಂಭದಲ್ಲಿ ಅಷ್ಟೇನೂ ಮಳೆಯಾಗದಿದ್ದರೂ, ಆಗಸ್ಟ್ ಮೊದಲ ವಾರದಲ್ಲಿ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದಲ್ಲಿ ಹಲವು ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿದ್ದವು. ಈ ವರ್ಷ ಎಲ್ಲೆಲ್ಲೆ, ಯಾವ ಪ್ರಮಾಣದಲ್ಲಿ ಮಳೆ ಬೀಳಲಿದೆ ಎನ್ನುವುದರ ಮೇಲೆ ಪ್ರವಾಹ ಸೃಷ್ಟಿಯಾಗಬಹುದೇ, ಇಲ್ಲವೇ ಎನ್ನುವುದು ತಿಳಿಯಲಿದೆ.