Advertisement

ಮಾನೋ ರೈಲು ಪರಿಹಾರವಲ್ಲವೇ?

12:32 PM Mar 07, 2017 | Team Udayavani |

* ಪ್ರೊ.ಎಂ.ಎನ್‌. ಶ್ರೀಹರಿ, ನಗರ ಸಂಚಾರ ತಜ್ಞ
ಬೆಂಗಳೂರಿನಂತಹ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಮೇಲ್ಸೇತು ವೆಗಳ ಆಯಸ್ಸು ಕೇವಲ 5ರಿಂದ 10 ವರ್ಷ. ಆದ್ದರಿಂದ ಕಡಿಮೆ ವೆಚ್ಚದಲ್ಲೇ ಶಾಶ್ವತ ಪರಿಹಾರ ಕಂಡುಕೊಳ್ಳುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಮಾನೋ ರೈಲು ಸೂಕ್ತ ಪರ್ಯಾಯ ಆಗಬಲ್ಲದು. 

Advertisement

ಸುಮಾರು ಎರಡು ಸಾವಿರ ಕೋಟಿ ರೂ. ವೆಚ್ಚದಲ್ಲಿ ಚಾಲುಕ್ಯ ವೃತ್ತದಿಂದ ಹೆಬ್ಟಾಳದವರೆಗೆ ಉಕ್ಕಿನ ಸೇತುವೆಗೆ ಸರ್ಕಾರ ಉದ್ದೇಶಿಸಿತ್ತು. ಅಂದರೆ, ಒಂದು ಮೀಟರ್‌ಗೆ 2.7 ಕೋಟಿ ರೂ. ವೆಚ್ಚ ಆಗುತ್ತದೆ. ಆದರೆ, ಇದು ಮತ್ತಷ್ಟು ವಾಹನದಟ್ಟಣೆಗೆ ಅವಕಾಶ ಮಾಡಿಕೊಡುತ್ತದೆ. ಇದೇ ಜಾಗದಲ್ಲಿ ಇಷ್ಟೇ ಉದ್ದದ ಮಾರ್ಗದಲ್ಲಿ ಮಾನೋ ರೈಲನ್ನು 1,500 ಕೋಟಿ ವೆಚ್ಚದಲ್ಲಿ ನಿರ್ಮಿಸ ಬಹುದು. ಇದರಲ್ಲಿ ಒಂದು ಗಂಟೆಗೆ 18 ಸಾವಿರ ಜನರನ್ನು ಕೊಂಡೊಯ್ಯಬಹುದು. ಅಲ್ಲದೆ, ಶಾಶ್ವತ ಪರಿಹಾರವೂ ಸಿಗಲಿದೆ. 

ಮೆಟ್ರೋ ನಿರ್ಮಿಸಬಹುದಲ್ಲಾ ಎಂಬ ಪ್ರಶ್ನೆ ಉದ್ಭವಿಸಬಹುದು. ಆದರೆ, ಮೆಟ್ರೋ ಒಂದು ಕಿ.ಮೀ.ಗೆ 200 ಕೋಟಿ ವೆಚ್ಚ ಆಗುತ್ತದೆ. ಸುರಂಗ ಮಾರ್ಗವಾದರೆ, ನಿರ್ಮಾಣ ವೆಚ್ಚ 300 ಕೋಟಿ ರೂ.ಗೂ ಅಧಿಕ ವಾಗುತ್ತದೆ. ಆದರೆ, ಮೊನೊ ರೈಲು ಮಾರ್ಗ ನಿರ್ಮಾಣಕ್ಕೆ ಕಿ.ಮೀ.ಗೆ 140 ಕೋಟಿ ರೂ. ಖರ್ಚಾಗುತ್ತದೆ. ಒಂದರಿಂದ ಎರಡು ವರ್ಷಗಳಲ್ಲಿ ಈ ಯೋಜನೆಯನ್ನು ಉದ್ದೇಶಿತ ಮಾರ್ಗ ದಲ್ಲಿ ಕಾರ್ಯರೂಪಕ್ಕೆ ತರಬಹುದು. 

ಅಲ್ಲದೆ, ಈಗಾಗಲೇ ಮಾನೋರೈಲು ಯೋಜನೆಗೆ ಸಂಬಂಧಿಸಿದ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧವಿದೆ. ಹೊರವರ್ತುಲ ರಸ್ತೆಯಂತೆ “ವರ್ತುಲ ರೈಲು ಮಾರ್ಗ’ವನ್ನೂ ಈ ಡಿಪಿಆರ್‌ ಒಳಗೊಂಡಿದೆ. ಈ ಯೋಜನೆ ಅನುಷ್ಠಾನಕ್ಕೆ ಇರುವ ಅಡ ತಡೆ ಏನು? ಸೆಂಟ್ರಲ್‌ ಕಾಲೇಜಿನ ಕ್ರಿಕೆಟ್‌ ಮೈದಾನದ ಬಳಿ ಮಾನೋ ರೈಲಿನ ಮುಖ್ಯ ನಿಲ್ದಾಣ ನಿರ್ಮಿಸ ಬೇಕು. ಅಲ್ಲಿಂದ ನೇರವಾಗಿ ಏರ್‌ಪೋರ್ಟ್‌ ಮಾರ್ಗಕ್ಕೆ ಮಾನೋ ರೈಲು ಲಿಂಕ್‌ ಮಾಡಬಹುದು.  

ಇತರೆ ಪರ್ಯಾಯಗಳು: ಇದಲ್ಲದೆ, ಹೆಬ್ಟಾಳ-ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೂರ್‍ನಾಲ್ಕು ಪರ್ಯಾಯ ಮಾರ್ಗಗಳಿವೆ. ಯಶವಂತಪುರ, ಯಲಹಂಕ, ಜಿಕೆವಿಕೆ ಮಾರ್ಗವಾಗಿ ಏರ್‌ಪೋರ್ಟ್‌ ತಲುಪಬಹುದು. ಮೇಕ್ರಿ ವೃತ್ತ, ಹೆಬ್ಟಾಳದ ಮೂಲಕ ಹಾಗೂ ನಾಗವಾರ ಕೆರೆಯಿಂದ ಥಣಿಸಂದ್ರ ರಸ್ತೆ ಮೂಲ ಕವೂ ಏರ್‌ಪೋರ್ಟ್‌ಗೆ ತೆರಳ ಬಹುದು. ಕೆ.ಆರ್‌. ಪುರ ಮರ್ಗದಿಂದ ರಾಜ್ಯ ಹೆದ್ದಾರಿ-35 ರಲ್ಲಿ ಹಾದು ವಿಮಾನ ನಿಲ್ದಾಣಕ್ಕೆ ಹೋಗಬಹುದು. ಈ ಮಧ್ಯೆ ಪ್ರಸ್ತುತ ಇರುವ ಯಶವಂತಪುರ- ಚಿಕ್ಕಬಳ್ಳಾಪುರ ಮಾರ್ಗದ ಹಳಿಯ ಮೇಲೆ ರೈಲು ಓಡಿಸಲು ಸಾಧ್ಯ ವಿದೆ. ಇವುಗಳನ್ನು ವ್ಯವಸ್ಥಿತವಾಗಿ ಜಾರಿಗೊಳಿಸಬೇಕಾಗಿದೆ. 

Advertisement

ಮೆಟ್ರೋ ಲಾಬಿಗೆ ಮಾನೋ ನನೆಗುದಿಗೆ
ಸುಮಾರು 110 ಕಿ.ಮೀ. ಮಾರ್ಗದ ಮಾನೋ ರೈಲು ಯೋಜನೆಯು “ನಮ್ಮ ಮೆಟ್ರೋ’ ಲಾಬಿಯಿಂದ ನೆನೆ ಗುದಿಗೆ ಬಿದ್ದಿದೆ. ಇದಕ್ಕೆ ಮರುಚಾಲನೆ ಕೊಟ್ಟು, ಮೆಟ್ರೋ ಗೆ ಸಂಪರ್ಕ ಸೇವೆಯಾಗಿ ನಗರದಲ್ಲಿ ಜಾರಿಗೊಳಿಸಬೇಕಿದೆ. ಇದರಿಂದ ಬಹುತೇಕ ಸಂಚಾರದಟ್ಟಣೆ ತಗ್ಗಲಿದೆ. ಬಿಎಂಟಿಸಿ ಬಸ್‌ ಸಂಪರ್ಕ ಸೇವೆ ಕಲ್ಪಿಸಬಹುದು. ಆದರೆ, ಇದರಲ್ಲಿ ಹೆಚ್ಚೆಂದರೆ 60 ಜನ ಓಡಾಡುತ್ತಾರೆ. ಮಾನೋ ರೈಲಿನಲ್ಲಿ 18 ಸಾವಿರ ಜನ ಗಂಟೆಯಲ್ಲಿ ಸಂಚರಿಸಬಹುದು. 

Advertisement

Udayavani is now on Telegram. Click here to join our channel and stay updated with the latest news.

Next