ಕೂಡ್ಲಿಗಿ: ಪಟ್ಟಣದಲ್ಲೀಗ ಮಂಗಗಳದ್ದೇ ಕಾರುಬಾರು. ಮಂಗಗಳ ನಿರಂತರ ಹಾವಳಿಯಿಂದ ಸಾರ್ವಜನಿಕರು ಕಂಗಾಲಾಗಿದ್ದಾರೆ.
ಪಟ್ಟಣ ಸೇರಿದಂತೆ ಸುತ್ತಲಿನ ಹಲವು ವಾರ್ಡ್‌ಗಳಲ್ಲಿ ಇವುಗಳದ್ದೇ ಕಾರುಬಾರು ಸರ್ವೆ ಸಾಮಾನ್ಯವಾಗಿ ಬಿಟ್ಟಿದೆ. ಬಹಳ ವರ್ಷದಿಂದ ಮಂಗಗಳ 3-4 ಗುಂಪು ಬೀಡು ಬಿಟ್ಟಿದ್ದು ದಿನ ಬೆಳಗಾದರೆ ಸಾಕು ಈ ಮಂಗಗಳು ನಾನಾ ಓಣಿಗಳಲ್ಲಿ, ಮನೆಗಳ ಮೇಲೆ ಹಿಂಡು ಹಿಂಡಾಗಿ ಜಿಗಿದು ಹೆಂಚುಗಳನ್ನು ಒಡೆದು
ಚೂರು ಚೂರು ಮಾಡುತ್ತಿವೆ. ಮನೆಗಳ ಸುತ್ತಲಲ್ಲಿನ ಪೇರಲ, ಹುಣಸೆ, ಪಪ್ಪಾಯಿ ಹಣ್ಣಿನ ಮತ್ತು ಹೂವಿನ ಗಿಡಗಳನ್ನು ಹಾಗೂ ತೆಂಗಿನ ಗಿಡಗಳನ್ನು ಹಾಳು ಮಾಡುತ್ತಿವೆ ಎನ್ನುತ್ತಾರೆ ಸಾರ್ವಜನಿಕರು. ಒಂದು ಮನೆಯಿಂದ ಮತ್ತೂಂದು ಮನೆಗೆ ಜಿಗಿಯುತ್ತ ಕೇಬಲ್ ನಾಶ ಮಾಡಿ ಟೆಲಿಫೋನ್, ವಿದ್ಯುತ್ ಕಂಬದ ತಂತಿ ಮೇಲೆ ಸರ್ಕಸ್ ಮಾಡುತ್ತವೆ. ಇದರಿಂದಾಗಿ ಒಮ್ಮೊಮ್ಮೆ ವಿದ್ಯುತ್ ಹರಿಯುವಿಕೆ ನಿಂತು ಹೋಗಿ ವಿದ್ಯುತ್‌ನಿಂದಲೇ ನಡೆಯುವ ಬಹುತೇಕ ಕಾರ್ಯಗಳು ನಿಂತು ಹೋಗುತ್ತಿವೆ. ಕುಡಿಯುವ ನೀರು ಬಾರದೆ, ಗಿರಣಿ ಆರಂಭವಾಗದೆ ಜನತೆ ಪರಿತಪಿಸುವಂತಾಗುತ್ತಿದೆ.
ಬೆಳೆ ಹಾಳು ಮಾಡುವ ಮಂಗಗಳು ಮನುಷ್ಯರನ್ನೂ ಕಾಡುತ್ತಿವೆ. ಒಬ್ಬಿಬ್ಬರು ಮಹಿಳೆಯರು, ಮಕ್ಕಳು ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರೆ ಹಿಂದಿನಿಂದ ಹತ್ತಾರು ಮಂಗಗಳು ಮೈಮೇಲೆ ಬರುತ್ತಿವೆ. ರೈತರು ಕವಣೆ ಬೀಸಿದರೂ ಕಂಠ ಹರಿಯುವಂತೆ ಕೂಗಿದರೂ, ಪಟಾಕಿ ಸಿಡಿಸಿದರೂ ಕ್ಯಾರೆ ಎನ್ನದೆ ತಮ್ಮ ಚಲ್ಲಾಟ ಮುಂದುವರಿಸುತ್ತಿವೆ. ಇನ್ನಾದರೂ ಅರಣ್ಯ ಇಲಾಖೆ ಪಟ್ಟಣ ಪಂಚಾಯಿತಿ ಜಂಟಿಯಾಗಿ ವಿಶೇಷ ತಂಡ ರಚಿಸಿ ಈ ಬಗ್ಗೆ ಮುತುವರ್ಜಿ ವಹಿಸಬೇಕು. ಮಂಗಗಳನ್ನು ಹಿಡಿದು ಕಾಡಿಗೆ ಕಳಿಸುವ ಕೆಲಸ ಮಾಡಬೇಕು ಎಂದು ಜನರು ಒತ್ತಾಯಿಸಿದ್ದಾರೆ.
ಸಾಲ ಮಾಡಿ ರೈತರು ಬೋರವೆಲ್ ನಲ್ಲಿದ್ದ ಅಲ್ಪ ಸ್ವಲ್ಪ ನೀರಿನಿಂದ ತರಕಾರಿ ಬೆಳೆಯಲು ಮುಂದಾಗಿದ್ದಾರೆ. ಈಗ ಮಂಗಗಳಹಾವಳಿಯು ತರಕಾರಿ ತೋಟಗಳವರೆಗೆ ಹಬ್ಬಿದ್ದು, ಸವತೆ, ಹೀರೆ, ಬೆಂಡೆ, ಟೊಮೆಟೊ, ಬದನೆಕಾಯಿ, ಕುಂಬಳಕಾಯಿ ಇನ್ನಿತರ ಬೆಳೆಗಳನ್ನು ಮಂಗಗಳಿಂದ ರಕ್ಷಿಸುವುದು ರೈತರಿಗೆ ಸವಾಲಾಗಿದೆ. –
ತಿಂದಪ್ಪ, ರೈತ
ಪಟ್ಟಣದ ವಾರ್ಡಿನ ನಿವಾಸಿಗಳಿಗೆ ಮತ್ತು ಸುತ್ತಮುತ್ತ ಪ್ರದೇಶದಲ್ಲಿ ಈಗಾಗಲೇ ಮಂಗಗಳ ಹಾವಳಿಗೆ ಜನರು ಹೈರಾಣಾಗಿದ್ದಾರೆ. ಆದಕಾರಣ ಪಪಂ ಇಲಾಖೆ ಮತ್ತು ಅರಣ್ಯ ಇಲಾಖೆ ಸಮನ್ವಯತೆ ಸಾಧಿ ಸಿ ಮಂಗಗಳ ಹಾವಳಿಗೆ ಮುಕ್ತಿ ಕಾಣಿಸಬೇಕಿದೆ.
– ಶಿವರಾಜ್ ಪಾಲೂ¤ರ್, ಕೂಡ್ಲಿಗಿ ತಾಲೂಕು ಸ.ನೌ.ಸಂ ಅಧ್ಯಕ್ಷ
ಗಂಗಾವತಿಯಿಂದ ಮಂಗಗಳನ್ನು ಹಿಡಿಯುವ ತಜ್ಞರನ್ನು ಕೂಡ್ಲಿಗಿಗೆ ಕರೆಯಿಸುತ್ತೇವೆ. ಆ ವ್ಯಕ್ತಿಗಳ ಖರ್ಚು ವೆಚ್ಚವನ್ನು ಪಟ್ಟಣ ಪಂಚಾಯಿತಿ ಭರಿಸಬೇಕು. ಮಂಗಗಳನ್ನು ಹಿಡಿಯುವಾಗ ನಮ್ಮ ಇಲಾಖೆಯಿಂದ ಏನು ಸಹಕಾರ ಬೇಕು ನಾವು ಮಾಡುತ್ತೇವೆ. –
ರೇಣುಕಮ್ಮ. ಎ, ವಲಯ ಅರಣ್ಯಾಧಿಕಾರಿಗಳು ಕೂಡ್ಲಿಗಿ
ಮಂಗಗಳ ಹಾವಳಿ ಬಗ್ಗೆ ಗಮನಕ್ಕೆ ಬಂದಿದ್ದು, ಇದರ ಬಗ್ಗೆ ಅರಣ್ಯ ಇಲಾಖೆಗೆ ಪತ್ರವನ್ನು ಬರೆದಿದ್ದೇನೆ. ವನ್ಯಜೀವಿಗಳನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯ. ಹಾಗಾಗಿ ಜಂಟಿಯಾಗಿ ಕಾರ್ಯ ನಿರ್ವಹಿಸುತ್ತೇವೆ. ಮಂಗಗಳ ಹಾವಳಿಗೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು. –
ಪಕೃದ್ದೀನ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
-ಕೆ.ನಾಗರಾಜ್