ಆಯೋಧ್ಯಾ: ಮಂಗಳವಾರ ಸಾರ್ವಜನಿಕರ ಪ್ರವೇಶಕ್ಕೆ ಮಂದಿರ ತೆರೆದುಕೊಂಡ ದಿನವೇ, ರಾಮನ ಪರಮಭಕ್ತ ಹನುಮಂತ ಕಪಿಯ ರೂಪದಲ್ಲಿ ಬಾಲರಾಮನ ದರ್ಶನ ಪಡೆದನೇ? ಹೌದೆಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಎಕ್ಸ್ ಖಾತೆಯಲ್ಲಿ ಹೇಳಲಾಗಿದೆ. ಮಂಗಳವಾರ ಸಂಜೆ 5.50ಕ್ಕೆ ಕಪಿಯೊಂದು ದಕ್ಷಿಣದ್ವಾರದಿಂದ ದೇವಸ್ಥಾನದ ಆವರಣವನ್ನು ಪ್ರವೇಶಿಸಿದೆ. ಅದು ನಂತರ ಉತ್ಸವಮೂರ್ತಿಯ (ಹಿಂದೆ ತಾತ್ಕಾಲಿಕ ಮಂದಿರದಲ್ಲಿ ಇಡಲಾಗಿದ್ದ ರಾಮಲಲ್ಲಾನ ಪುಟ್ಟ ವಿಗ್ರಹ) ಸನಿಹ ತೆರಳಿದೆ.
ಅದರಿಂದ ಗಾಬರಿಗೊಂಡ ಸಿಬ್ಬಂದಿ ಕಪಿಯನ್ನು ಓಡಿಸಲು ನೋಡಿದ್ದಾರೆ. ಆದರೆ ಕಪಿ ಮಾತ್ರ ಶಾಂತವಾಗಿ ಹಿಂದೆ ಸರಿದು, ಉತ್ತರದ ದ್ವಾರದತ್ತ ತೆರಳಿದೆ. ಅಲ್ಲಿ ಬಾಗಿಲು ಹಾಕಿದ್ದರಿಂದ ಪೂರ್ವದ್ವಾರದಿಂದ ಹೊರಹೋಗಿದೆ. ಯಾರಿಗೂ ಏನೂ ತೊಂದರೆ ಮಾಡದೇ ಹೊರಹೋಗಿದ್ದನ್ನು ಭದ್ರತಾ ಸಿಬ್ಬಂದಿ ನೋಡಿದ್ದಾರೆಂದು ಟ್ರಸ್ಟ್ ಹೇಳಿಕೊಂಡಿದೆ.
ಹನುಮಂತ ಶ್ರೀರಾಮನ ಪರಮಭಕ್ತ. ಎಲ್ಲಿ ರಾಮನಾಮ ಸಂಕೀರ್ತನೆಯಿರುತ್ತದೋ, ಅಲ್ಲೆಲ್ಲ ಹನುಮಂತ ಇರುತ್ತಾನೆ. ಈ ಹಿನ್ನೆಲೆಯಲ್ಲಿ ಕಪಿಯ ರೂಪದಲ್ಲಿ ಹನುಮಂತನೇ ದೇಗುಲ ಪ್ರವೇಶಿಸಿದ್ದಾನೆಂದು ಎಲ್ಲರೂ ವರ್ಣಿಸುತ್ತಿದ್ದಾರೆ. ಈ ವಿಚಾರ ಜಾಲತಾಣದಲ್ಲೂ ವೈರಲ್ ಆಗಿದೆ. ಜತೆಗೆ ಘಟನೆ ಬಗ್ಗೆ ಚರ್ಚೆಯೂ ನಡೆಯುತ್ತಿದೆ.