Advertisement

ಕೈವಾರ ಬೆಟ್ಟದಲ್ಲಿ ನೀರು ಆಹಾರಕ್ಕಾಗಿ ಕೋತಿಗಳ ಪರದಾಟ

01:04 PM Mar 26, 2019 | Lakshmi GovindaRaju |

ಚಿಂತಾಮಣಿ: ಮಾನವನ ಅತಿ ದುರಾಸೆಯಿಂದಾಗಿ ಮರಗಿಡಗಳನ್ನು ನಾಶ ಮಾಡಿದ ಕಾರಣ ಹಲವು ವರ್ಷಗಳಿಂದ ಚಿಂತಾಮಣಿ ತಾಲೂಕಿನಲ್ಲಿ ಉತ್ತಮ ಮಳೆಯಾಗದ ಕಾರಣ ಹಾಗೂ ಬೇಸಿಗೆಗೆ ಮೊದಲೇ ತಾಲೂಕಿನ ಬಿಸಿಲಿನ ಬೇಗೆ ಹೆಚ್ಚಾಗಿ ಜನಜಾನುವಾರುಗಳು ಕುಡಿಯುವ ನೀರಿಗೆ ಪರಿತಪಿಸುವಂತಾಗಿರುವುದು ಒಂದೆಡೆ, ಮತ್ತೂಂದೆಡೆ ಕಾಡುಗಳಲ್ಲಿ ವಾಸಿಸುವ ಕೋತಿ ಮತ್ತಿತ್ತರ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರು ಆಹಾರ ಸಿಗದೇ ಪರದಾಡುವಂತಾಗಿದೆ.

Advertisement

ಒಣಗಿದ ಮರಗಳಲ್ಲಿ ಆಹಾರ ಹುಡುಕಾಟ: ಹಲವು ವರ್ಷಗಳಿಂದ ಉತ್ತಮ ಮಳೆಯಿಲ್ಲದ ಕಾರಣ ಕೆರೆಕುಂಟೆಗಳು ಬತ್ತಿ ಹೋಗಿದ್ದು, ದಿನೇ ದಿನೆ ಏರುತ್ತಿರುವ ಬಿಸಿಲಿನ ತಾಪಮಾನದಿಂದಾಗಿ ಮರಗಿಡಗಳು ಕೂಡ ಒಣಗಿವೆ. ತಾಲೂಕಿನ ಕೈವಾರದ ಗವಿ ನರಸಿಂಹಸ್ವಾಮಿ ದೇವಾಲಯದ ಬಳಿಯ ಬೆಟ್ಟದಲ್ಲಿ ಕೋತಿಗಳು ನೀರು ಆಹಾರಕ್ಕಾಗಿ ಪರಿತಪಿಸುವಂತಾಗಿದ್ದು, ಬೆಟ್ಟದಲ್ಲಿ ಎಲ್ಲಾ ಮರಗಿಡಗಳು ಬಿಸಿಲಿನ ತಾಪಮಾನಕ್ಕೆ ಒಣಗಿರುವ ಕಾರಣ, ಒಣಗಿದ ಮರಗಳಲ್ಲಿ ಆಹಾರಕ್ಕಾಗಿ ಕೋತಿಗಳು ಹುಡುಕಾಟ ನಡೆಸುತ್ತಿದ್ದ ದೃಶ್ಯಗಳು ನೋಡುಗರ ಮನಕುಲಕುವಂತಿದೆ.

ಕುಡಿಯುವ ನೀರಿಗೆ ಪರದಾಟ: ಕೈವಾರದ ಗವಿ ಬಳಿಯ ಬೆಟ್ಟದಲ್ಲಿ ನೂರಾರು ಸಂಖ್ಯೆಯಲ್ಲಿ ಕೋತಿಗಳು ವಾಸವಾಗಿದ್ದು, ಬೆಟ್ಟದಲ್ಲಿ ಎಲ್ಲೂ ಕೂಡ ನೀರಿನ ಸೌಲಭ್ಯವಿಲ್ಲದ ಕಾರಣ ನೀರಿಗಾಗಿ ಕೋತಿಗಳು ಪರದಾಡುವಂತಾಗಿ ಗ್ರಾಮಗಳತ್ತ ನೀರಿಗಾಗಿ ವಲಸೆ ಬರುತ್ತಿವೆ.

ರಸ್ತೆ ಬಳಿ ಆಹಾರಕ್ಕಾಗಿ ಕೋತಿಗಳು: ಬೆಟ್ಟದಲ್ಲಿ ನೀರು ಆಹಾರ ಸಿಗದ ಕಾರಣ ಕೋತಿಗಳು ಪ್ರತಿನಿತ್ಯ ಗವಿಯಿಂದ ಚಿಂತಾಮಣಿ ನಗರಕ್ಕೆ ಹೋಗುವ ರಸ್ತೆಯಲ್ಲಿ ಸಾರ್ವಜನಿಕರು ಏನಾದರೂ ತಿನ್ನಲು ಆಹಾರ ನೀಡುತ್ತಾರೆ ಎಂದು ಗುಂಪು ಗುಂಪಾಗಿ ಕೋತಿಗಳ ಹಿಂಡು ರಸ್ತೆ ಬದಿಯಲ್ಲಿ ಪ್ರತಿನಿತ್ಯ ಕಾಯುವ ದೃಶ್ಯಗಳು ನೋಡಬಹುದು.

ಸಾಯುವ ಸ್ಥಿತಿಯಲ್ಲಿ ಕೆಲ ಕೋತಿಗಳು: ಬೆಟ್ಟದಲ್ಲಿ ಎಲ್ಲಿ ಕೂಡ ಕೋತಿಗಳಿಗೆ ನೀರು ಆಹಾರ ಸಿಗದ ಕಾರಣ, ಈಗಾಗಲೇ ಹಲವು ಕೋತಿಗಳು ಆಹಾರಕ್ಕಾಗಿ ಹುಡುಕಾಟ ನಡೆಸಿ ಬಿಸಿಲಿನ ಬೇಗೆಯಿಂದ ಸುಸ್ತಾಗಿದ್ದು, ಇದೇ ರೀತಿ ನೀರು ಆಹಾರ ಸಿಗದೇ ಇದ್ದರೆ ಹಲವು ಕೋತಿಗಳು ಸಾಯುವುದು ನಿಶ್ಚಿತ.

Advertisement

ಸಾರ್ವಜನಿಕರಿಂದ ಆಹಾರ: ಕೋತಿಗಳು ಆಹಾರಕ್ಕಾಗಿ ಪ್ರತಿನಿತ್ಯ ರಸ್ತೆ ಬಳಿ ಕಾಯುತ್ತಿರುವುದನ್ನು ಅರಿತ ಕೆಲ ಸಾರ್ವಜನಿಕರು ಕೋತಿಗಳಿಗೆ ನೀರು, ಆಹಾರ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ. ತಾಲೂಕಿನಲ್ಲಿ ಸಮಾಜ ಸೇವಕರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಂಘ ಸಂಸ್ಥೆಗಳಿದ್ದು, ಮೂಕ ಪ್ರಾಣಿ ಪಕ್ಷಿಗಳಿಗೆ ಕುಡಿಯವ ನೀರು ಹಾಗೂ ಆಹಾರ ನೀಡಲು ಮುಂದಾಗಬೇಕಾಗಿದೆ.

ಶಾಶ್ವತ ನೀರಾವರಿ ಬೇಕಾಗಿದೆ: ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಯಾವುದೇ ರೀತಿಯ ನದಿ ನಾಲೆಯಿಲ್ಲದ ಕಾರಣ ಹಾಗೂ ಹಲವು ವರ್ಷಗಳಿಂದ ಉತ್ತಮ ಮಳೆಯಾಗದೇ ಕೆರೆ ಕುಂಟೆಗಳಲ್ಲಿ ಇರುವ ಅಲ್ಪಸ್ವಲ್ಪ ನೀರು ಕೂಡ ಬತ್ತಿ ಜನ ಜಾನುವಾರಗಳಿಗೆ ತೊಂದರೆಯಾಗಿದೆ.

ಎಚ್ಚರಿಕೆ: ಜಾನುವಾರುಗಳು, ಪ್ರಾಣಿ, ಪಕ್ಷಿಗಳು ಈ ಭಾಗದಲ್ಲಿ ಜೀವಂತವಾಗಿ ಉಳಿಯಬೇಕಾದರೆ ಸರ್ಕಾರ ಕೂಡಲೇ ಎಚ್ಚೆತು ಈ ಭಾಗಕ್ಕೆ ಶಾಶ್ವತವಾದ ನೀರಾವರಿ ಯೋಜನೆಗಳನ್ನು ನೀಡಬೇಕು. ಇಲ್ಲವಾದಲ್ಲಿ ಕುಡಿಯುವ ನೀರಿಗಾಗಿ ಕೋಲಾರ-ಚಿಕ್ಕಬಳ್ಳಾಪುರದ ಜನತೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ನೀರಾವರಿ ಹೋರಾಟಗಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆ ಪ್ರತಿನಿತ್ಯ ನೀರು ಆಹಾರಕ್ಕಾಗಿ ಪರದಾಡುತ್ತಿರುವ ಕೋತಿಗಳ ರಕ್ಷಣೆಗೆ ಸಂಘಸಂಸ್ಥೆಗಳು ಹಾಗೂ ಸಮಾಜ ಸೇವಕರು ಮುಂದಾಗಬೇಕಾಗಿದೆ.

ಸಮರ್ಪಕ ನೀರಿನ ಸರಬರಾಜು ಇಲ್ಲ: ಇನ್ನೂ ಮೈಲಾಪುರ ಗ್ರಾಮದ ಕೆಲವರು ಕೈವಾರದ ಗವಿ ಬಳಿಯ ಬೆಟ್ಟದಲ್ಲಿ ಕೋತಿಗಳಿಗೆ ಕುಡಿಯವ ನೀರಿನ ಅನುಕೂಲಕ್ಕಾಗಿ ಚಿಕ್ಕತೊಟ್ಟಿಗಳನ್ನು ನಿರ್ಮಿಸಿ ನೀರು ಬಿಟ್ಟಿದು, ತೊಟ್ಟಿಗಳಿಗೆ ಹಲವು ದಿನಗಳಿಂದ ನೀರು ಸರಬರಾಜು ಮಾಡದ ಕಾರಣ ಹಾಗೂ ಸ್ವತ್ಛತೆ ಮಾಡದ ಕಾರಣ ತೊಟ್ಟಿಗಳಲ್ಲಿ ನೀರು ಪಾಚಿಕಟ್ಟಿ, ದುರ್ನಾತ ಬೀರುತ್ತಿರುವುದರಿಂದ ಕೋತಿಗಳು ನೀರು ಕುಡಿಯಲು ಹಿಂಜರಿಯುತ್ತಿವೆ.

ಕೋತಿಗಳು ಕುಡಿಯುವ ನೀರಿಗಾಗಿ ಅರಣ್ಯ ಇಲಾಖೆಯಿಂದ ಬೆಟ್ಟದಲ್ಲಿ ಅಲ್ಲಲ್ಲಿ ತೊಟ್ಟಿಗಳನ್ನು ನಿರ್ಮಾಣ ಮಾಡಲಾಗಿದ್ದು. ಕುಡಿಯವ ನೀರಿನ ಅಭಾವ ಹಾಗೂ ತೊಂದರೆಯಿಂದಾಗಿ ನೀರು ಸರಬರಾಜು ಮಾಡಲಾಗುತ್ತಿದೆ. ಕೈವಾರ ಮಠದಿಂದ ಕೂಡ ಪ್ರತಿನಿತ್ಯ ಆಹಾರ ನೀಡಲಾಗುತ್ತಿದೆ.
-ಜಯಚಂದ್ರ, ವಲಯ ಉಪಆರಣ್ಯಾಧಿಕಾರಿ, ಚಿಂತಾಮಣಿ

Advertisement

Udayavani is now on Telegram. Click here to join our channel and stay updated with the latest news.

Next