ಸಾಗರ: ಮಂಗನ ಕಾಯಿಲೆ ನಿಯಂತ್ರಣಕ್ಕೆ ಬಂದಿದ್ದು, ರೋಗ ಹತೋಟಿಗೆ ಬೇಕಾದ ಅಗತ್ಯ ಕ್ರಮದ ಕುರಿತು ಕಾಲ ಕಾಲಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ನಿಗಾ ವಹಿಸಲು ಸೂಚನೆ ನೀಡಲಾಗಿದೆ ಎಂದು ಶಾಸಕ ಎಚ್. ಹಾಲಪ್ಪ ತಿಳಿಸಿದರು.
ನೂತನವಾಗಿ ಸುಮಾರು 9 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮಿನಿ ವಿಧಾನಸೌಧ ಕಾಮಗಾರಿ ನಡೆಯುವ ಸ್ಥಳವನ್ನು ಭಾನುವಾರ ಪರಿಶೀಲಿಸಿದ ಅವರು, ಕೆಎಫ್‌ಡಿಗೆ ಸಂಬಂಧಪಟ್ಟಂತೆ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕ ಇರಿಸಿಕೊಂಡಿದ್ದೇನೆ. ಮಣಿಪಾಲದಲ್ಲಿ ಜ್ವರದಿಂದ ಬಳಲುತ್ತಿರುವವರು ಗುಣಮುಖರಾಗಿದ್ದಾರೆ ಎಂದರು.
ತಾಲೂಕು ಅಲ್ಲದೆ ಬೇರೆ ಬೇರೆ ತಾಲೂಕುಗಳಲ್ಲಿ, ಜಿಲ್ಲೆಗಳಲ್ಲಿ ಮಂಗ ಸಾಯುತ್ತಿರುವ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಸಾಗರ ಕ್ಷೇತ್ರವ್ಯಾಪ್ತಿಯಲ್ಲಿ ಮಂಗನ ಕಾಯಿಲೆ ಪ್ರತಿಬಂಧಕವಾಗಿ ತೆಗೆದುಕೊಳ್ಳಬೇಕಾದ ವ್ಯಾಕ್ಸಿನೇಷನ್ ಹಾಗೂ ಡಿಎಂಪಿ ಆಯಿಲ್ ಸರಬರಾಜು ಆಗಿದ್ದು, ಅಗತ್ಯ ಇರುವ ಕಡೆಗಳಲ್ಲಿ ವ್ಯಾಕ್ಸಿನೇಷನ್ ಮಾಡಲು ಆರೋಗ್ಯ ಇಲಾಖೆ ಸಿದ್ಧವಿದೆ ಎಂದು ತಿಳಿಸಿದರು.
ಹಳೆ ತಹಶೀಲ್ದಾರ್ ಕಚೇರಿ ಶಿಥಿಲಾವಸ್ಥೆಯಲ್ಲಿರುವ ಹಿನ್ನೆಲೆಯಲ್ಲಿ ಅದನ್ನು ಕೆಡವಿದ್ದು, ಮುಂದಿನ ವಾರದಿಂದ ನೂತನ ಸುಮಾರು 9 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭಿಸಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಮುಂದಿನ ಪೀಳಿಗೆಯನ್ನು ಗಮನದಲ್ಲಿ ಇರಿಸಿಕೊಂಡು ಗುಣಮಟ್ಟದ ಕಾಮಗಾರಿ ನಡೆಸಬೇಕು. ಒಂದೊಮ್ಮೆ ಕಾಮಗಾರಿ ಕಳಪೆಯಾದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದರು.
ಸರ್ಕಾರಿ ಪಪೂ ಕಾಲೇಜು ಕಟ್ಟಡ 2.25 ಕೋಟಿ ರೂ. ವೆಚ್ಚದಲ್ಲಿ ಹಳೆ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಸಹ ಮುಂದಿನ ವಾರದಿಂದ ಪ್ರಾರಂಭವಾಗಲಿದೆ. ವಿದ್ಯಾರ್ಥಿಗಳು ಸರ್ಕಾರಿ ಪಪೂ ಕಾಲೇಜಿಗೆ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವುದರಿಂದ ಗುಣಮಟ್ಟದ
ಕಟ್ಟಡ ಹಾಗೂ ಶೈಕ್ಷಣಿಕ ಚಟುವಟಿಕೆ ಕೈಗೊಳ್ಳಲು ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಇನ್ನಷ್ಟು ಅನುದಾನ ತರುವ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಗಣಪತಿ ಕೆರೆ ಹಾಗೂ ಒಳಾಂಗಣ ರಂಗಮಂದಿರ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಸೋಮವಾರ ದೆಹಲಿಗೆ ತೆರಳಿ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಲಾಗುತ್ತಿದೆ. ಗಣಪತಿ ಕೆರೆ ಹಾಗೂ ಒಳಾಂಗಣ ರಂಗಮಂದಿರಕ್ಕೆ ಅನುದಾನ ನೀಡುವಂತೆ ಹಿಂದೆ ಭೇಟಿ ಮಾಡಿದ್ದಾಗ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು, ಅಗತ್ಯ ದಾಖಲಾತಿಗಳೊಂದಿಗೆ ಸೋಮವಾರ ಮತ್ತೂಮ್ಮೆ ಭೇಟಿಯಾಗಿ ಶೀಘ್ರ ಅನುದಾನ ಬಿಡುಗಡೆ ಮಾಡಲು
ಒತ್ತಾಯಿಸಲಾಗುತ್ತದೆ ಎಂದು ಹೇಳಿದರು.
ಬಿಜೆಪಿ ಮುಖಂಡರಾದ ದೇವೇಂದ್ರಪ್ಪ, ವಿನಾಯಕ ರಾವ್ ಮನೆಘಟ್ಟ, ಸಹಾಯಕ ಕಾರ್ಯಪಾಲಕ ಅಭಿಯಂತರ ದಿನೇಶ್, ತಹಶೀಲ್ದಾರ್ ಮಹೇಂದ್ರ ಇನ್ನಿತರರು ಇದ್ದರು.