ರಾಂಚಿ: ಸಾಮಾನ್ಯವಾಗಿ ಶಾಲೆ ಬಳಿ ಮಂಗಗಳು, ಸಿಂಗಳೀಕ ಕುಚೇಷ್ಟೆಗಳನ್ನು ಮಾಡುತ್ತವೆ. ಇದರಿಂದಾಗಿ ಶಾಲಾ ಆಡಳಿತ ಮಂಡಳಿಗೆ ಇವುಗಳನ್ನು ಓಡಿಸುವುದೇ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಆದರೆ ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯ ದನುವಾ ಗ್ರಾಮವೊಂದರಲ್ಲಿ ಈ ಸಿಂಗಳೀಕನ ನಡೆ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಇದನ್ನೂ ಓದಿ:ನ್ಯೂಜಿಲ್ಯಾಂಡ್ ವಿರುದ್ಧ ಏಕದಿನ ಸರಣಿಗೆ ತಂಡದ ಆಯ್ಕೆ: ಸಂಜು ಸ್ಯಾಮ್ಸನ್ ಗೆ ನಾಯಕತ್ವ
ಹೌದು, ದನುವಾ ಗ್ರಾಮವೊಂದರಲ್ಲಿ ಕಳೆದೊಂದು ವಾರದಿಂದ ಸಿಂಗಳೀಕ ಸರ್ಕಾರಿ ಶಾಲೆಗೆ ಪ್ರತಿನಿತ್ಯ ತಪ್ಪದೇ ಹಾಜರಾಗಿ ವಿದ್ಯಾರ್ಥಿಗಳೊಂದಿಗೆ ಪಾಠ ಕೇಳುವ ವಿಡಿಯೋ, ಫೊಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ.
ಕಳೆದೊಂದು ವಾರದಿಂದ ನಿತ್ಯ ಬೆಳಗ್ಗೆ 9 ಗಂಟೆಗೆ ಶಾಲೆ ತೆರೆಯುತ್ತಿದ್ದಂತೆ ಸಿಂಗಳೀಕ ಶಾಲಾ ಆವರಣಕ್ಕೆ ಪ್ರವೇಶಿಸುತ್ತದೆ. ಸಂಜೆ ತರಗತಿಗಳು ಮುಗಿಯುತ್ತಿದ್ದಂತೆ ಸಿಂಗಳೀಕ ಶಾಲೆಯಿಂದ ನಿರ್ಗಮಿಸುತ್ತದೆ. ಪ್ರಥಮ ಬಾರಿಗೆ ಸಿಂಗಳೀಕ ತರಗತಿಯೊಳಗೆ ಪ್ರವೇಶಿಸುವಾಗ ವಿದ್ಯಾರ್ಥಿಗಳು ಭಯಭೀತರಾದರು. ಆದರೆ ಸಿಂಗಳೀಕ ಯಾರಿಗೂ ಹಾನಿಮಾಡಿಲ್ಲ. ಅದು ಯಾವುದೇ ತರಗತಿಗೆ ಹೋದರೂ ತನ್ನ ಪಾಡಿಗೆ ಮೊದಲ ಸಾಲಿನಲ್ಲಿ ಕುಳಿತುಕೊಳ್ಳುವುದು ದೈನಂದಿನ ಅಭ್ಯಾಸವಾಗಿದೆ ಎಂದು ಶಾಲಾ ಮುಖ್ಯೋಪಾಧ್ಯಾಯ ರತನ್ ವರ್ಮ ಹೇಳಿದ್ದಾರೆ.
ಸಿಂಗಳೀಕ ಹಿಡಿಯಲು ಈಗಾಗಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ತಂಡವೊಂದು ಶಾಲೆಗೆ ಬಂದು ಸಿಂಗಳೀಕ ಹಿಡಿಯಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ ಎಂದು ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಸಕಲದೇವ್ ಯಾದವ್ ತಿಳಿಸಿದ್ದಾರೆ.