ಕುಳಗೇರಿ ಕ್ರಾಸ್: ಬಾಗಲಕೋಟೆ ಗ್ರಾಮದಲ್ಲಿ ಕೋತಿಯೊಂದು ಸಿಕ್ಕ ಸಿಕ್ಕವರ ಮೇಲೆ ಎರಗಿ ದಾಳಿ ಮಾಡಿ ಕಚ್ಚಿ ಗಾಯಗೊಳಿಸುತ್ತಿದೆ. ಕಪ್ಪು ಬಣ್ಣದ ಕೋತಿ ನಿತ್ಯ ಗ್ರಾಮಸ್ಥರ ಮನೆಗೆ ನುಗ್ಗುವುದು ಮಹಿಳೆಯರನ್ನ ಅಟ್ಟಾಡಿಸಿ ಓಡಿಸುವುದು ಸೇರಿದಂತೆ ಗ್ರಾಮದ ಮಹಿಳೆಯರ ನಿದ್ದೆ ಗೆಡಿಸಿದೆ. ಇದರಿಂದ 24 ಗಂಟೆಯೂ ಬಾಗಿಲು ಹಾಕಿಕೊಂಡು ಸದಾ ಮನೆಯಲ್ಲೇ ಉಳಿಯುವ ಪರಿಸ್ಥಿತಿ ಎದುರಾಗಿದೆ.
ತಿಂಗಳ ಹಿಂದೆ ಗ್ರಾಮಕ್ಕೆ ಬಂದಿರುವ ಈ ಕೋತಿ ಮೊದಮೊದಲು ಜನರ ಜೊತೆ ಸ್ನೇಹದಿಂದ ಇತ್ತು. ಮನುಷ್ಯನಂತೆ ಎಲ್ಲ ಕಡೆ ಸಂಚರಿಸಿ ತನಗೆ ಬೇಕಾದ ಆಹಾರವನ್ನ ಸೇವಿಸುತ್ತಿತ್ತು. ಇದಕ್ಕೆ ಮರುಳಾಗಿದ್ದ ಜನ ದೇವರಂತೆ ಅದನ್ನ ಆರಾಧನೆ ಮಾಡುತ್ತಿದ್ದರು. ಆದರೆ ಇತ್ತಿಚೆಗೆ ಹುಚ್ಚು ಹಿಡಿದ ಹಾಗೆ ವರ್ತಿಸುತ್ತಿದ್ದು ಖಾನಾಪೂರ ಎಸ್‌ಕೆ ಗ್ರಾಮದಲ್ಲಿ ಇಬ್ಬರಿಗೆ ಹಾಗೂ ಕುಳಗೇರಿ ಕ್ರಾಸಿನಲ್ಲಿ 10ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿ ಮನ ಬಂದಂತೆ ಕಚ್ಚಿದೆ. ದಿನದಿಂದ ದಿನಕ್ಕೆ ಮಂಗನ ಉಪಟಳ ಹೆಚ್ಚಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಪುರಿಷರಿಗೂ ಹೆದರದ ಕೋತಿ: ಗ್ರಾಮದಲ್ಲಿ ಪುರುಷರು ಬಡಿಗೆ ಹಿಡಿದು ಬೆದರಿಸಿದರು ಗುರ್ ಎನ್ನುವ ಕೋತಿ ಹತ್ತಾರು ಜನ ಬೆನ್ನು ಹತ್ತಿದರೂ ಬೆದರದೆ ಗುರ್ ಎಂದು ಜನರನ್ನೇ ಹೆದರಿಸುತ್ತಿದೆ. ಇನ್ನು ಮಹಿಳೆಯರನ್ನಂತು ಮನೆಯೊಳಗೆ ಹೊಕ್ಕು ಅಟ್ಟಾಡಿಸುತ್ತಿದೆ. ತಕ್ಷಣ ಕೋತಿಯನ್ನು ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡಬೇಕು ಎಂದು ಗ್ರಾಮಸ್ಥರು ಅರಣ್ಯ ಹಾಗೂ ಗ್ರಾಪಂ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಸದಸ್ಯ ಹನಮಂತ ನರಗುಂದ, ಗ್ರಾಪಂ ಪಿಡಿಒ ಎಸ್ ಜಿ ಪರಸನ್ನವರ ಹಾಗೂ ಸಿಬ್ಬಂದಿ ಸೇರಿ ಪಟಾಕಿ ಹೊಡೆದು ಕೈಯಲ್ಲಿ ಬಡಿಗೆ ಹಿಡಿದು ಓಡಿಸಿದರೂ ಹೆದರದ ಕೋತಿ ಮರಳಿ ಮೈಮೇಲೆ ಗುರ್ ಎಂದು ಎರಗುತ್ತಿದೆ. ಇದನ್ನ ಕಂಡು ಗ್ರಾಪಂ ಸಿಬ್ಬಂದಿ ವಾಪಸ್ ಹೋಗಿದ್ದು ನಾಳೆ ದಿನ ಅರಣ್ಯ ಸಿಬ್ಬಂದಿಗೆ ಕರೆತಂದು ಕೋತಿಯನ್ನು ಸೆರೆ ಹಿಡಿಯುವ ಕೆಲಸ ಮಾಡಲಾಗುತ್ತದೆ ಎಂದು ಸಾರ್ವಜನಿಕರಿಗೆ ಬರವಸೆ ನೀಡಿದ್ದಾರೆ.
ಕೋತಿಯನ್ನು ಸೆರೆಹಿಡಿಯಲು ಸುಮಾರು 6ಸಾವಿರ ರೂ ಕೇಳುತ್ತಾರೆ ನಾವು ಎಲ್ಲಿಂದ ಕೊಡಬೇಕು. ನಮ್ಮಲ್ಲಿ ಅಷ್ಟು ದುಡ್ಡು ಕರ್ಚು ಮಾಡುವ ಯಾವ ಅನುದಾನವೂ ಇಲ್ಲ. ಕಾರಣ ಈ ಖರ್ಚು ಗ್ರಾ.ಪಂ ಕೊಟ್ಟು ಕೋತಿಯನ್ನು ಸೆರೆಹಿಡಿಯುವ ಕೆಲಸ ಮಾಡಬೇಕು ಎಂದು ಬಾದಾಮಿ ವಲಯ ಅರಣ್ಯ ಅಧಿಕಾರಿ ವಿರೇಶ ಎಂದು ಕೈ ತೊಳೆದುಕೊಂಡಿದ್ದಾರೆ. ಪ್ರತಿದಿನ ಸಾರ್ವಜನಿಕರಿಗೆ ತೊಂದರೆ ಮಾಡುವ ಕೋತಿಯನ್ನು ಸೆರೆ ಹಿಡಿಯುವವರು ಯಾರು ಎಂದು ಗ್ರಾಮಸ್ಥರು ಪ್ರಶ್ನೀಸುತ್ತಿದ್ದಾರೆ. ಪ್ರಾಣಹಾನಿಯಾಗುವ ಮೊದಲು ಕೋತಿಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.
ವರದಿ ಮಹಾಂತಯ್ಯಹಿರೇಮಠ ಕುಳಗೇರಿ ಕ್ರಾಸ್