Advertisement

ನನಗೆ ಅರಿವಿಲ್ಲದಂತೆಯೇ ಮನೆಯಲ್ಲಿ ಯಾರೋ ದುಡ್ಡು ಇಟ್ಟಿದ್ದರು!

12:32 PM Aug 03, 2022 | Team Udayavani |

ನವದೆಹಲಿ: “ನಾನು ಇಲ್ಲದಿದ್ದಾಗ, ನನಗೆ ಗೊತ್ತಿಲ್ಲದಂತೆಯೇ ಯಾರೋ ನನ್ನ ಫ್ಲ್ಯಾಟ್‌ನಲ್ಲಿ ಹಣವನ್ನು ತಂದಿಟ್ಟಿದ್ದರು. ಈ ಬಗ್ಗೆ ನನಗೆ ಮಾಹಿತಿಯೇ ಇಲ್ಲ.!’

Advertisement

ಹೀಗೆಂದು ಹೇಳಿರುವುದು ಪಶ್ಚಿಮ ಬಂಗಾಳದಲ್ಲಿ ಇ.ಡಿ.ಯಿಂದ ಬಂಧನಕ್ಕೊಳಗಾದ ಉಚ್ಚಾಟಿತ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ. ಫ್ಲ್ಯಾಟ್‌ನಲ್ಲಿ 21 ಕೋಟಿ ರೂ. ನಗದು ಮತ್ತು ಕೋಟಿಗಟ್ಟಲೆ ಮೌಲ್ಯದ ಚಿನ್ನಾಭರಣ ಸಿಕ್ಕಿದ ಬಳಿಕ ಜು.23ರಂದು ಜಾರಿ ನಿರ್ದೇಶನಾಲಯವು ಪಾರ್ಥ ಹಾಗೂ ಅರ್ಪಿತಾರನ್ನು ಬಂಧಿಸಿತ್ತು. ನಂತರ, ಜು.27ರಂದು ಅರ್ಪಿತಾರ ಮತ್ತೊಂದು ಫ್ಲ್ಯಾಟ್‌ನಿಂದ 27.9 ಕೋಟಿ ರೂ. ನಗದನ್ನು ವಶಪಡಿಸಿಕೊಂಡಿತ್ತು.

ಸದ್ಯ ಇ.ಡಿ. ಕಸ್ಟಡಿಯಲ್ಲಿರುವ ಅರ್ಪಿತಾ, “ಆ ಹಣ ನನಗೆ ಸೇರಿದ್ದಲ್ಲ. ನಾನು ಅಲ್ಲಿ ಇಲ್ಲದಿದ್ದಾಗ ಯಾರೋ ತಂದಿಟ್ಟಿರಬೇಕು’ ಎಂದು ಹೇಳಿದ್ದಾರೆ. ಇದೇ ವೇಳೆ, ಶಿಕ್ಷಕರ ಅಕ್ರಮ ನೇಮಕಕ್ಕೆ ಪಡೆದ ಲಂಚದ ಮಾಹಿತಿಯನ್ನು ಒಳಗೊಂಡ 40 ಪುಟಗಳ ಡೈರಿಯೂ ಇ.ಡಿ.ಗೆ ಸಿಕ್ಕಿದೆ.

ಚಪ್ಪಲಿ ಎಸೆದ ಮಹಿಳೆ:
ಬಂಧಿತ ಪಾರ್ಥ ಚಟರ್ಜಿ ಅವರನ್ನು ಆಸ್ಪತ್ರೆಯಿಂದ ಕರೆದೊಯ್ಯುತ್ತಿದ್ದ ವೇಳೆ ಮಹಿಳೆಯೊಬ್ಬರು ಅವರ ಮೇಲೆ ಚಪ್ಪಲಿ ಎಸೆದ ಘಟನೆ ಮಂಗಳವಾರ ನಡೆದಿದೆ. ಆದರೆ, ಆ ಶೂ ಪಾರ್ಥ ಅವರ ಮೇಲೆ ಬಿದ್ದಿಲ್ಲ. “ಜನರು ಉದ್ಯೋಗವಿಲ್ಲದೇ ಅಲೆಯುತ್ತಿದ್ದರೆ, ಪಾರ್ಥ ಚಟರ್ಜಿ ಕೋಟಿಗಟ್ಟಲೆ ಆಸ್ತಿ ಮಾಡುತ್ತಾರೆ. ಜನರನ್ನು ವಂಚಿಸಿ ಎಸಿ ಕಾರಿನಲ್ಲಿ ಓಡಾಡುತ್ತಾರೆ. ಅದಕ್ಕೇ ಅವರಿಗೆ ಚಪ್ಪಲಿಯೇಟು ನೀಡಲು ಬಂದಿದ್ದೇನೆ, ನಾನು ಬರಿಗಾಲಲ್ಲೇ ಮನೆಗೆ ಹೋಗುವೆ’ ಎಂದು ಆ ಮಹಿಳೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next