Advertisement
ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ 2021-22ರಲ್ಲಿ ಒಟ್ಟು 35.40 ಕೋಟಿ ರೂ.ಗಳನ್ನು ವಿವಿಧ ಚಟುವಟಿಕೆಗಳಿಗಾಗಿ ವೆಚ್ಚ ಮಾಡಿದ್ದು, ಈ ಪೈಕಿ 30.62 ಕೋಟಿ ರೂ.ಗಳನ್ನು ಅಂದರೆ ಶೇ.87ರಷ್ಟನ್ನು ಜಾಹೀರಾತು ಮತ್ತು ಪ್ರಚಾರಕ್ಕಾಗಿ ಬಳಸಿದೆ. ಕಳೆದ ವಾರ ಭಾರತೀಯ ಚುನಾವಣಾ ಆಯೋಗವು ಬಿಡುಗಡೆ ಮಾಡಿದ್ದ ದೇಶದ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಆಡಿಟ್ ವರದಿಯಿಂದ ಈ ಮಾಹಿತಿ ತಿಳಿದುಬಂದಿದೆ.ಇನ್ನು, ಎಐಡಿಎಂಕೆ ತನ್ನ ಒಟ್ಟು ವೆಚ್ಚದ ಶೇ.78ರಷ್ಟನ್ನು ಅಂದರೆ 22.28 ಕೋಟಿ ರೂ.ಗಳನ್ನು, ಟಿಎಂಸಿ ಒಟ್ಟಾರೆ 268.33 ಕೋಟಿ ರೂ. ವೆಚ್ಚ ಮಾಡಿದ್ದು, ಆ ಪೈಕಿ ಶೇ.50ರಷ್ಟು ಅಂದರೆ 135.12 ಕೋಟಿ ರೂ.ಗಳನ್ನು ಜಾಹೀರಾತಿಗೆ ಖರ್ಚು ಮಾಡಿದೆ. ಆಪ್ ಶೇ.46ರಷ್ಟು ಮೊತ್ತವನ್ನು ಪ್ರಚಾರಕ್ಕೆ ಬಳಸಿದೆ.
ಇದೇ ವೇಳೆ, ಜಾಹೀರಾತಿಗೆಂದೇ ಮಾಡಿದ ಒಟ್ಟಾರೆ ವೆಚ್ಚವನ್ನು ಪರಿಗಣಿಸಿದರೆ, ಅತಿ ಹೆಚ್ಚು ಹಣ ವ್ಯಯಿಸಿರುವುದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ. ಪಕ್ಷವು 313.17 ಕೋಟಿ ರೂ.ಗಳನ್ನು ಜಾಹೀರಾತಿಗಾಗಿ ವೆಚ್ಚ ಮಾಡಿದೆ. ಆದರೆ, ಪಕ್ಷದ ಒಟ್ಟಾರೆ ವೆಚ್ಚದಲ್ಲಿ ಜಾಹೀರಾತಿನ ಪಾಲು ಶೇ.75ರಷ್ಟು ಮಾತ್ರ. ವಿಶೇಷವೆಂದರೆ, ಎನ್‌ಸಿಪಿ, ವೈಎಸ್ಸಾರ್ ಕಾಂಗ್ರೆಸ್ ಮತ್ತು ಸಿಪಿಐ ಜಾಹೀರಾತುಗಳಿಗಾಗಿ ಒಂದು ರೂಪಾಯಿಯನ್ನೂ ವೆಚ್ಚ ಮಾಡಿಲ್ಲ ಎಂದು ಆಡಿಟ್ ವರದಿಯಲ್ಲಿ ತಿಳಿಸಿವೆ. ಸಿಪಿಎಂ ಮತ್ತು ಕಾಂಗ್ರೆಸ್ ತಮ್ಮ ಚುನಾವಣಾ ವೆಚ್ಚವನ್ನು ವರದಿಯಲ್ಲಿ ವಿಭಾಗಿಸಿ ನೀಡಿಲ್ಲ ಎಂದು ನ್ಯೂಸ್18 ವರದಿ ಮಾಡಿದೆ.