ಮಹದೇವಪುರ: ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅವಲಹಳ್ಳಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕ್ರಿಯಾ ಯೋಜನೆಯ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷ ಮುನಿರಾಜು ಮತ್ತು ಸದಸ್ಯ ಕೆಂಪರಾಜು ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಏಕ ವಚನದಲ್ಲಿ ನಿಂದಿಸಿಕೊಂಡರು. ಸಭೆಗೆ ಕೆಲ ಇಲಾಖೆಗಳ ಅಧಿಕಾರಿಗಳು ಗೈರಾಗಿರುವುದನ್ನು ಸದಸ್ಯ ಕೆಂಪರಾಜು ಪ್ರಶ್ನಿಸಿದರು. ಈ ವೇಳೆ ವಾದಕ್ಕಿಳಿದ ಅಧ್ಯಕ್ಷರು ಮುನಿರಾಜು ಮತ್ತು ಕೆಲ ಸದಸ್ಯರು ಮಾತಿನ ಚಕಮಕಿ ನಡೆಸಿದರು.
ಇತ್ತೀಚೆಗೆ ನಡೆದ ಬಲಿಜ ಸಮಾವೇಷಕ್ಕೆ ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮುನಿರಾಜು ಅವರು ಅಧಿಕಾರಿಗಳ ಬಳಿ ಹಣ ವಸೂಲಿ ಮಾಡಿದ್ದಾರೆ ಎಂದು ಮಂಡೂರು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಕೆಂಪರಾಜು ಸಭೆಯಲ್ಲೇ ಗಂಭೀರ ಆರೋಪ ಮಾಡಿದರು. ಇದರಿಂದ ಆಕ್ರೋಶಗೊಂಡ ಮುನಿರಾಜು, “ಇಲ್ಲಸಲ್ಲದ ಆರೋಪಮಾಡುತ್ತಿದ್ದಿರ. ನಿಮ್ಮ ಮೇಲೆ ಮಾನನಷ್ಟ ಮೊಕದ್ದಮ್ಮೆ ಹೂಡುತ್ತೇನೆ,’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಕೆಂಪರಾಜು “ಅಧಿಕಾರಿಗಳಿಂದ ನೀವು ಹಣ ಪಡೆದಿರುವ ಬಗ್ಗೆ ನನ್ನ ಬಳಿ ದೂರವಾಣಿ ಸಂಭಾಷಣೆಯ ವಿವರಗಳಿವೆ. ಬೇರೆ ರೀತಿಯ ಸಾಕ್ಷಿಗಳೂ ಇವೆ. ಅವುಗಳನ್ನು ಮುಂದಿನ ಸಭೆಯಲ್ಲಿ ಬಹಿರಂಗ ಪಡಿಸುತ್ತೇನೆ,’ ಎಂದರು. ಜಿ.ಪಂ ಉಪಾಧ್ಯಕ್ಷೆ ಪಾರ್ವತಮ್ಮ ಚಂದ್ರಪ್ಪ, ಸದಸ್ಯರಾದ ಕೆ.ಗಣೇಶ್, ಕೆ.ವಿ.ಜಯರಾಮ್, ಶೇಖರ್, ವೇಧಾಶ್ರೀ ಲಕ್ಷಿರಾಯಣ್, ತಾ.ಪಂ,ಅಧ್ಯಕ್ಷರು ಉಪಾಧ್ಯಕ್ಷರು, ಸದಸ್ಯರು, ಎಲ್ಲಾ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 29 ಇಲಾಖೆಗಳ ಅಧಿಕಾರಿಗಳ ಪೈಕಿ ಹಲವು ಅಧಿಕಾರಿಗಳು ಸಭೆಗೆ ಗೈರಾಗಿದ್ದರು. ಇಲಾಖೆಗಳ ಸೌಲಭ್ಯಗಳನ್ನು ಜನರಿಗೆ ತಿಳಿಸುವಲ್ಲಿಯೂ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಈ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿದರೆ ಅಧ್ಯಕ್ಷ ಮುನಿರಾಜು ಅವರು ಅಧಿಕಾರಿಗಳ ಪರ ಮಾತನಾಡುತ್ತಾರೆ. ಅಲ್ಲದೆ ನಗರ ಜಿಲ್ಲಾ ಪಂಚಾಯಿತಿ ಸದಸ್ಯರನ್ನು ನೀನು ನಿನ್ನ ಕ್ಷೇತ್ರ ಬಗ್ಗೆ ಮಾತ್ರ ಮಾತನಾಡು ಎಂದು ತಾಕೀತು ಮಾಡುತ್ತಾರೆ. ಈ ಮೂಲಕ ಸದಸ್ಯರನ್ನು ಅವಮಾನ ಮಾಡಿದ್ದಾರೆ.
-ಕೆಂಪರಾಜು, ಜಿ.ಪಂ ಸದಸ್ಯ
ಸಮಾವೇಶದ ಹೆಸರಿನಲ್ಲಿ ನಾನು ಅಧಿಕಾರಿಗಳಿಂದ ಹಣ ವಸೂಲಿ ಮಾಡಿದ್ದೇನೆ ಎಂದು ಜಿ.ಪಂ ಸದಸ್ಯ ಕೆಂಪರಾಜು ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು. ಅವರಿಗೆ ಅಧ್ಯಕ್ಷ ಸ್ಥಾನ ತಪ್ಪಿದ್ದರಿಂದ ಮತ್ತು ಮಂಡೂರು ಪಂಚಾಯಿತಿಯಲ್ಲಿನ ಹಣ ದುರ್ಬಳಕೆ ಬಗ್ಗೆ ತನಿಖೆಗೊಳಪಡಿಸಲು ಮುಂದಾಗಿರುವುದರಿಂದ ಈ ಆರೋಪ ಮಾಡುತ್ತಿದ್ದಾರೆ. ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಹಗರಣವನ್ನು ಬಯಲಿಗೆಳೆಯುವ ಭೀತಿಯಿಂದ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಲಾಗುತ್ತಿದೆ. ಕೆಂಪರಾಜು ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ.
-ಮುನಿರಾಜ್, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ