ಮುಂಬೈ: ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ವಿಚಾರಣೆಗಾಗಿ ಅವರ ಕಸ್ಟಡಿಯನ್ನು ವಿಸ್ತರಿಸಬೇಕೆಂಬ ಜಾರಿ ನಿರ್ದೇಶನಾಲಯದ ಮನವಿಯನ್ನು ನ್ಯಾಯಾಲಯ ಇಂದು ನಿರಾಕರಿಸಿದೆ.
ಅನಿಲ್ ದೇಶ್‌ಮುಖ್ 100 ಕೋಟಿ ರೂಪಾಯಿ ವಸೂಲಿ ಮಾಡಿದ್ದಾರೆ ಎಂದು ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಆರೋಪಿಸಿದ್ದರು. 100 ಕೋಟಿ ರೂಪಾಯಿ ವಸೂಲಿ ಮಾಡಿದ್ದಾರೆಂದು ಆರೋಪಿಸಿ ಪರಂಬೀರ್ ಸಿಂಗ್ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಈ ಪ್ರಕರಣ ಮುನ್ನೆಲೆಗೆ ಬಂದಿತ್ತು. ಬಳಿಕ ಈ ಆರೋಪದ ಹಿನ್ನೆಲೆಯಲ್ಲಿ ಅನಿಲ್ ದೇಶಮುಖ್ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 2ರಂದು ಇಡಿ ಅಧಿಕಾರಿಗಳು ಅವರನ್ನು ಬಂಧಿಸಿದ್ದರು.
ತನಿಖಾ ಸಂಸ್ಥೆಯ ಕಸ್ಟಡಿಗೆ ಬದಲಾಗಿ ಅನಿಲ್ ದೇಶಮುಖ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲು ನ್ಯಾಯಾಲಯವು ಆದೇಶಿಸಿತು.
ಇದನ್ನೂ ಓದಿ:ಮುಂಬೈ ಬಿಟ್ಟು ಲಂಡನ್ ನಲ್ಲಿ ನೆಲೆಸುತ್ತಾ ಮುಕೇಶ್ ಅಂಬಾನಿ ಕುಟುಂಬ? ರಿಲಯನ್ಸ್ ಸ್ಪಷ್ಟನೆ
71 ವರ್ಷ ಪ್ರಾಯದ ಅನಿಲ್ ದೇಶ್ ಮುಖ್ ಅವರು ವಿಚಾರಣೆಯ ಸಮಯದಲ್ಲಿ ಸಹಕರಿಸುತ್ತಿಲ್ಲ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ. ದೇಶಮುಖ್ ಅವರನ್ನು ವಿಚಾರಣೆಗೆ ಒಳಪಡಿಸಲು ತನಿಖಾ ಸಂಸ್ಥೆ ನ್ಯಾಯಾಲಯಕ್ಕೆ ಹೆಚ್ಚಿನ ಸಮಯ ಕೇಳಿತ್ತು.