ಚಿಕ್ಕಮಗಳೂರು: ಮಾಡಾಳ್ ಮೇಲೆ ಲೋಕಾಯುಕ್ತ ರೈಡ್ ಮಾಡಿದ ದಿನ ಅಮಿತ್ ಶಾ ಬಂದಿದ್ದರು. ಅಮಿತ್ ಶಾಗೆ ಕಪ್ಪಕಾಣಿಕೆ ಸಲ್ಲಿಸಲು ಅರ್ಜೆಂಟಾಗಿ ದುಡ್ಡು ಒಟ್ಟು ಮಾಡಲು ಹೋಗಿ ಸಿಕ್ಕಿಬಿದ್ದಿದ್ದರು. ಹೀಗಾಗಿ ನೇರವಾಗಿ ಬಸವರಾಜ ಬೊಮ್ಮಾಯಿ, ಅಮಿತ್ ಶಾ ಅವರೇ ಹೊಣೆಗಾರರು. ಬಸವರಾಜ್ ಬೊಮ್ಮಾಯಿ ಅವರು ರಾಜೀನಾಮೆ ಕೊಡಬೇಕು ಎಂದು ಕಾಂಗ್ರೆಸ್ ಮುಖಂಡ ಬಿ.ಕೆ ಹರಿಪ್ರಸಾದ್ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ವರ್ಷದಿಂದ ಬಿಜೆಪಿ ಭ್ರಷ್ಟಾಚಾರದಲ್ಲಿ ನಿರತವಾಗಿದೆ. ಬಿಜೆಪಿಯ ವಿಜಯಸಂಕಲ್ಪ ಯಾತ್ರೆಗೆ ಭ್ರಷ್ಟೋತ್ಸವ ಯಾತ್ರೆ ಎಂದು ಹೆಸರಿಡಬೇಕು. ಯಾವ ಮುಖ ಇಟ್ಕೊಂಡು ವಿಜಯ ಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆ ಗೊತ್ತಿಲ್ಲ ಎಂದರು.
ಸರ್ಕಾರ ಎರಡು ವರ್ಷದಿಂದ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಹೇಳುತ್ತಿದ್ದೆವು. ಬಿಜೆಪಿಯವರು ಸಾಕ್ಷಿ ಕೇಳಿತ್ತಿದ್ದರು. ಬಿಜೆಪಿಯವರು ಭ್ರಷ್ಟಾಚಾರವನ್ನ ವೈಭವೀಕರಿಸುತ್ತಾರೆ. ಇವರಿಗೆ ಇನ್ನೂ ಸಾಕ್ಷಿ ಬೇಕೆಂದರೆ ಇವರೇನು ಕುರುಡರೆ ಎಂದು ಪ್ರಶ್ನಿಸಿದರು.
ಸಿ.ಟಿ.ರವಿ ವಿರುದ್ದ ವಾಗ್ದಾಳಿ ನಡೆಸಿದ ಹರಿಪ್ರಸಾದ್, ಕೆಲಸ ಮಾಡಿ ಬೆನ್ನು ತಟ್ಟಿಕೊಳ್ಳಲಿ, ಅದು ಬಿಟ್ಟು ಕೆಲಸ ಮಾಡದೇ ಬೆನ್ನು ತಟ್ಟಿಕೊಳ್ಳುವುದು ಸರಿಯಲ್ಲ. ಮೋದಿ, ಅಮಿತ್ ಶಾ ಬಲಗೈಯಾಗಿರುವ ಆಧುನಿಕ ಭಗರಥ ಎಂದೇ ಕರೆದುಕೊಳ್ಳುವ ಸಿ.ಟಿ.ರವಿ ಯಾವುದೇ ಅಭಿವೃದ್ದಿ ಕೆಲಸವನ್ನು ಮಾಡಿಲ್ಲ ಎಂದರು.