ಅಳಿಕೆ: ಧನವಿದ್ದರೆ ದೇಗುಲ ನಿರ್ಮಾಣವಾಗುವುದಿಲ್ಲ. ದೈವಬಲ ವಿರಬೇಕು. ಸಮರಸ ಭಾವವಿರಬೇಕು. ಊರ ಭಕ್ತರ ಸಹಕಾರ ಬೇಕು. ಮಾನವ ಶಕ್ತಿಯ ಒಗ್ಗಟ್ಟು ಮತ್ತು ಪರಿಶ್ರಮಕ್ಕೆ ದೈವ ಬಲ ಕೂಡಿದಾಗ ಯಶಸ್ಸು ಸಾಧ್ಯವಾಗುತ್ತದೆ. ಅದಕ್ಕೆ ಜೆಡ್ಡು ಧನ್ವಂತರಿ ಕ್ಷೇತ್ರವೇ ಸಾಕ್ಷಿ.
ಎಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿಯೂ ಧೃತಿಗೆಡದೆ ಕಾಮಗಾರಿ ಮುಂದುವರಿದಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಮಂಗಳವಾರ ಅಳಿಕೆ ಜೆಡ್ಡು ಪದ್ಮಗಿರಿ ಶ್ರೀ ಆದಿ ಧನ್ವಂತರಿ ಕ್ಷೇತ್ರದಲ್ಲಿ ನಿರ್ಮಾಣಗೊಂಡ ಶಿಲಾಮಯ ದೇವಸ್ಥಾನದಲ್ಲಿ ಶ್ರೀ ಧನ್ವಂತರಿ ದೇವರ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶ ಯಶಸ್ಸಿಗೆ ಕಾರಣವಾದ ಕಾರ್ಯಕರ್ತರ ಅಭಿನಂದನ ಸಭೆಯಲ್ಲಿ ಆಶೀರ್ವಚನ ನೀಡಿದರು.
ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಟಿ. ತಾರಾನಾಥ ಕೊಟ್ಟಾರಿ ಮಾತನಾಡಿ, ದೇವಬಲದ ಜತೆಗೆ ಗುರುಬಲ ಇದ್ದು, ಸಂಕಲ್ಪ ಶಕ್ತಿ ಇದ್ದುದು ಈ ಯಶಸ್ಸಿಗೆ ಕಾರಣವಾಗಿದೆ. ಎಲ್ಲರ ಸಮರ್ಪಣಾ ಭಾವದ ಸಂಕಲ್ಪದಿಂದಾಗಿ ಕಾರ್ಯಕ್ರಮ ಯಶಸ್ವಿಯಾಗಿದೆ. ಮುಂದಿನ ವ್ಯವಸ್ಥೆಯ ಬಗ್ಗೆ ಎಲ್ಲರ ಸಹಕಾರ ಅಗತ್ಯ ಎಂದರು.
ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ ದಂಬೆಕಾನ ಮಾತನಾಡಿ, ಎಲ್ಲರ ಸಹಕಾರದಿಂದ ಭಕ್ತಾಭಿಮಾನಿಗಳು ಪ್ರಶಂಸಿಸುವಂತಾಗಿದೆ. ಎಲ್ಲರ ಶ್ರಮದ ಫಲವಾಗಿ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.
ಕನ್ಯಾನ ಭಾರತ ಸೇವಾಶ್ರಮದ ಕಾರ್ಯದರ್ಶಿ ಎಸ್. ಈಶ್ವರ ಭಟ್, ಚಂದ್ರಶೇಖರ್, ಕೋಡಂದೂರು ಸುಬ್ರಹ್ಮಣ್ಯ ಶಾಸ್ತ್ರಿ ಅನಿಸಿಕೆ ವ್ಯಕ್ತಪಡಿಸಿದರು.ಧರ್ಮದರ್ಶಿ ನಾರಾಯಣ ಭಟ್ ಜೆಡ್ಡು ಉಪಸ್ಥಿತರಿದ್ದರು. ಡಾ| ಮನೋರಮಾ ಜಿ. ಭಟ್ ಆಶಯಗೀತೆ ಹಾಡಿದರು. ಪ್ರಧಾನ ಕಾರ್ಯದರ್ಶಿ ಡಾ| ಜೆಡ್ಡು ಗಣಪತಿ ಭಟ್ ಪ್ರಸ್ತಾವನೆಗೈದರು. ಪ್ರಚಾರ ಸಮಿತಿ ಸಂಚಾಲಕ ಸದಾಶಿವ ಅಳಿಕೆ ಕಾರ್ಯಕ್ರಮ ನಿರೂಪಿಸಿದರು.
ಆತ್ಮವಿಶ್ವಾಸ ಅಗತ್ಯ
ಆತ್ಮವಿಶ್ವಾಸದೊಂದಿಗೆ ಮುನ್ನಡೆದರೆ, ಉತ್ತಮ ಗುರಿಯಿದ್ದರೆ ಆ ಕಾರ್ಯದಲ್ಲಿ ಯಶಸ್ಸು ಲಭಿಸುತ್ತದೆ. ಸಂಪತ್ತು ಇದ್ದ ಕ್ಷಣದಲ್ಲಿ ಯಾವುದೇ ಕೆಲಸ ಆಗುವುದಿಲ್ಲ. ಆತ್ಮವಿಶ್ವಾಸ ಇದ್ದು ದೃಢತೆಯಿಂದ ಕೆಲಸ ಕಾರ್ಯಗಳು ನಡೆಯಬೇಕು. ಅದು ಇಲ್ಲಿ ಸಾಕಾರವಾಗಿದೆ.
-ಒಡಿಯೂರು ಶ್ರೀ