Advertisement

ಹಣವೇ ಮುಖ್ಯವಾಗಿದೆ…

06:00 AM Apr 16, 2018 | Team Udayavani |

“ಎರ್ಮಾಳು ಮಾಧವ ಸುವರ್ಣರಲ್ಲಿ ದುಡ್ಡಿಲ್ಲ. ಹಾಗಾಗಿ ಅವರಿಗೆ ಟಿಕೆಟ್‌ ನೀಡಲಾಗದು’ ಎಂದು ಬಿಜೆಪಿಯ ಹಿರಿಯ ನಾಯಕರು ಹೇಳಿದ್ದರಿಂದ ನಾನು ಅವಕಾಶ ವಂಚಿತನಾದೆ. ನನಗೆ ಟಿಕೆಟನ್ನು 1994ರಲ್ಲಿ ನಿರಾಕರಿಸಲಾಯಿತು. ನಾನು ಹಣಬಲವಿಲ್ಲದೇ ಚುನಾವಣೆಗೆ ಸ್ಪರ್ಧಿಸಿದವನು ಎಂದು ಮೀನುಗಾರ ಮುಖಂಡನೂ ಆಗಿರುವ ಎರ್ಮಾಳು ಮಾಧವ ಸುವರ್ಣ ಹೇಳಿದ್ದಾರೆ.

Advertisement

ಬಿಜೆಪಿಗೆ ತಾವು ನೀಡಿದ ದೇಣಿಗೆ ಏನು?
            ನಾನು 1989ರಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿದ್ದೆ. ಜನತಾದಳದಿಂದ ಭಾಸ್ಕರ ಶೆಟ್ಟಿ , ಕಾಂಗ್ರೆಸ್‌ನಿಂದ ವಸಂತ ವಿ. ಸಾಲ್ಯಾನ್‌ ಸ್ಪರ್ಧಿಸಿದ್ದರು. ಸಾಲ್ಯಾನರು 1,500 ಮತಗಳ ಅಂತರದಿಂದ ಚುನಾವಣೆಯಲ್ಲಿ ಗೆದ್ದು ಬಂದಿದ್ದರು. ನಾನು ಮೂರನೇ ಸ್ಥಾನಕ್ಕಿಳಿದಿದ್ದೆ. ಆ ವೇಳೆ ಬಿಜೆಪಿಗೆ ಕಾಪು ಕ್ಷೇತ್ರದಲ್ಲಿ ಯಾವುದೇ ಭದ್ರ ಬುನಾದಿ ಇರಲಿಲ್ಲ. ಕ್ಷೇತ್ರದ ಎಲ್ಲ 22 ಗ್ರಾಮ ಪಂಚಾಯತ್‌ಗಳಲ್ಲಿ ಬಿಜೆಪಿ ಬೂತ್‌ ಸಮಿತಿಗಳನ್ನು ನಾನೇ ರಚಿಸಿದ್ದೆ. ಒಂದು ವೇಳೆ 1994ರಲ್ಲಿ ಮತ್ತೆ ನನ್ನನ್ನು ಬಿಜೆಪಿ ಅಭ್ಯರ್ಥಿಯಾಗಿಸಿದ್ದರೆ ನಾನು ಜಯ ಗಳಿಸುತ್ತಿದ್ದೆ.

ಕ್ಷೇತ್ರದಲ್ಲಿ ಬಿಜೆಪಿಗೆ ಬಲವಿತ್ತವರು ನೀವೇ ಎನ್ನುವಿರಾ?
           ಹೌದು. ಬಿಜೆಪಿಗೆ ಜನಬಲವಿಲ್ಲದ ವೇಳೆ ಸಂಘಟನೆಗೆ ತೊಡಗಿದವನು ನಾನು. 1994ರಲ್ಲಿ ಬಿಜೆಪಿ ನಾಯಕರು ಭಾಸ್ಕರ ಮೆಂಡನ್‌ರನ್ನೇ ಕಣಕ್ಕಿಳಿಸಲು ಬಯಸಿದ್ದರು. ಆಗ ಭಾಸ್ಕರ ಮೆಂಡನ್‌ ಅವರೇ ಕಳೆದ ಬಾರಿ ಸೋತಿದ್ದ ಮಾಧವ ಸುವರ್ಣರು ಸ್ಪರ್ಧಿಸಲಿ ಎಂದಿದ್ದರು. ಆಗ ನಾಯಕರಿಂದ ಬಂದ ಉತ್ತರ ಆಲಿಸಿದ ಭಾಸ್ಕರ ಮೆಂಡನ್‌ “ನನಗೆ ರಾಜಕೀಯ ಬೇಡ. ನನ್ನ ತಮ್ಮ ಲಾಲಾಜಿಗೆ ಕೊಡಿ’ ಎಂದದ್ದರಿಂದ ಲಾಲಾಜಿ ಮೆಂಡನ್‌ ಬಿಜೆಪಿ ಅಭ್ಯರ್ಥಿಯಾದರು. ಪ್ರತಿಸ್ಪರ್ಧಿ ಕಾಂಗ್ರೆಸ್‌ನ ವಸಂತ ಸಾಲ್ಯಾನರೇ ಪುನರಪಿ ಗೆದ್ದು ಬಂದಿದ್ದರು. 

ರಾಜಕೀಯದಲ್ಲಿ ಸಕ್ರಿಯರಾಗಿದ್ದೀರಾ?
         ನನ್ನನ್ನು ಬಿಜೆಪಿ ರಾಜ್ಯ ಸಮಿತಿಗೆ ಆಯ್ಕೆ ಮಾಡುವುದಾಗಿ ಹೇಳಲಾಗಿತ್ತು. ಆದರೆ ನಾನೇ ನಿರಾಸಕ್ತನಾಗಿದ್ದೆ. ರಾಜಕೀಯ ದಲ್ಲಿನ ಆಸಕ್ತಿ ಮೊಟಕುಗೊಳಿಸಿ ಸಂಸ್ಕೃತಿಯ ಪುನರುತ್ಥಾನಕ್ಕಾಗಿ ಉಡುಪಿ ತಾಲೂಕು ಭಜನ ಮಂಡಳಿಗಳ ಒಕ್ಕೂಟದ ಕಾರ್ಯಾಧ್ಯಕ್ಷನಾಗಿ ಈಗ ಕಾರ್ಯ ನಿರ್ವಹಿಸುತ್ತಿರುವೆ. 

ಈಗಲೂ ಸ್ಪರ್ಧಾಕಾಂಕ್ಷಿಯೇ ?
        ಅವಕಾಶ ಲಭ್ಯವಾದರೆ ಸ್ಪರ್ಧಿಸುವೆ. ಆದರೆ ಕಾಲ ಮಿಂಚಿದೆ. ಕಾಪುವಿನಲ್ಲಿ ಮೊಗವೀರ ನಾಯಕರಲ್ಲಿ ಲಾಲಾಜಿಗೆ ಟಿಕೆಟ್‌ ನೀಡದಿದ್ದರೆ ನನಗೇ ನೀಡಬಹುದು ಎಂಬುದು ನನ್ನ ನಿರೀಕ್ಷೆ. ಮಲ್ಪೆಯ ಯಶ್‌ಪಾಲ್‌ ಸುವರ್ಣ ಕಾಪು ಕ್ಷೇತ್ರದಲ್ಲಿ ಸ್ಪರ್ಧಿಸುವುದು ತರವಲ್ಲ. ಏನೇ ಆದರೂ ನಾವು ಪಕ್ಷದಲ್ಲಿ ಕೇವಲ ದುಡಿಯುವವರು ಮಾತ್ರ. ಪಕ್ಷದಿಂದ ವೈಯಕ್ತಿಕವಾಗಿ ನನಗೇನೂ ಲಾಭವಾಗಿಲ್ಲ. ಅವಕಾಶಗಳನ್ನು ಕಳೆದುಕೊಂಡೆ.

Advertisement

ನಿಮ್ಮಲ್ಲಿ ಹಣವಿಲ್ಲದಿದ್ದರೆ ಹೇಗೆ ಸ್ಪರ್ಧಿಸುವಿರಿ?
      ಮೀನುಗಾರ ನಾಯಕನಾಗಿ ನನಗೂ ವರ್ಚಸ್ಸು ಇದೆ. ಹಣಬಲ ಇಲ್ಲದಿದ್ದರೂ ನಾನು ಇತರರ ಸಹಕಾರವನ್ನು ಪಡೆಯಬಲ್ಲೆ. ಈ ಬಾರಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಕಾಂಗ್ರೆಸ್‌ಗೆ ಆಡಳಿತ ವಿರೋಧಿ ಅಲೆ ಇದೆ.

– ಆರಾಮ

Advertisement

Udayavani is now on Telegram. Click here to join our channel and stay updated with the latest news.

Next