ಹುಬ್ಬಳ್ಳಿ: ಗ್ರಾಮೀಣ ಪ್ರದೇಶಗಳಲ್ಲಿ ದೇಶದ ಕಲೆ ಮತ್ತು ಸಂಸ್ಕೃತಿ ಇಂದಿಗೂ ಉಳಿದುಕೊಂಡು ಬಂದಿದ್ದು, ಇದಕ್ಕೆಲ್ಲ ಮಠಗಳೇ ಕಾರಣವೆಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧಿಧೀಶ ಉಮೇಶ ಅಡಿಗ ಹೇಳಿದರು.
ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಆಯೋಜಿಸಿರುವ ಉಚಿತ ಕಾನೂನು ನೆರವು ಕೇಂದ್ರ ರವಿವಾರ ಉದ್ಘಾಟಿಸಿ ಅವರು ಮಾತನಾಡಿದ ಅವರು, ಇಂದು ನಾವು ವಿದ್ಯೆ, ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಭೂತಪೂರ್ವ ಸಾಧನೆಗೈದಿದ್ದೇವೆ. ಸಮಾಜದಲ್ಲಿ ಸಾಕಷ್ಟು ಮುಂದೆ ಬಂದಿದ್ದೇವೆ. ಆದರು ನಿಜವಾಗಿಯೂ ನಾವು ಸಂತೋಷದಿಂದ ಬದುಕಿದ್ದೇವಾ ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.
ಶ್ರೀಮಠದಲ್ಲಿ ಕಾನೂನು ನೆರವು ಕೇಂದ್ರ ತೆರೆಯಲಾಗುತ್ತಿದ್ದು, ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು. ಭಜನಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಪ್ರತಿಭೆ ಹೊರಹಾಕಲು ಅವಕಾಶ ದೊರೆತಂತಾಗುತ್ತದೆ. ಆಕಾಶವಾಣಿಗಳಲ್ಲಿ ಭಜನಾ ಹಾಡುಗಳನ್ನು ಕೇಳಬಹುದಾಗಿದೆ. ಈಗ ರಾಜ್ಯಮಟ್ಟದ ಭಜನಾ ಸ್ಪರ್ಧೆ ಏರ್ಪಡಿಸಿರುವ ಧರ್ಮದರ್ಶಿಗಳ ಕಾರ್ಯ ಅಭಿನಂದಿಸಲೇಬೇಕು ಎಂದರು.
ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ರವೀಂದ್ರ ಡಿ. ಆರಿ ಮಾತನಾಡಿ, ವಾರದ ಎಲ್ಲಾ ದಿನಗಳಲ್ಲೂ ಉಚಿತ ಕಾನೂನು ನೆರವು ಕೇಂದ್ರ ಕಾರ್ಯ ನಿರ್ವಹಿಸಲಿದೆ. ಎರಡು ದಿನ ವಕೀಲರು ಹಾಗೂ ಉಳಿದ ದಿನಗಳಂದು ಕಾನೂನು ವಿದ್ಯಾರ್ಥಿಗಳು ಕಾನೂನು ನೆರವು ನೀಡಲಿದ್ದಾರೆ. ಯಾವುದೇ ಹಿಂಜರಿಕೆ ಭಾವನೆಯಿಲ್ಲದೇ ಮಹಿಳೆಯರು ಉಚಿತವಾಗಿ ಕಾನೂನು ನೆರವು ಪಡೆದುಕೊಳ್ಳಬಹುದು. 5 ಲಕ್ಷ ರೂ. ಆದಾಯದ ಮಿತಿ ಹೊಂದಿದ ಎಲ್ಲರೂ ಉಚಿತವಾಗಿ ಕಾನೂನು ನೆರವು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬಾಲಕರು ಕಾನೂನು ನೆರವು ಪಡೆಯಬಹುದು. ಮೊಕದ್ದಮೆಗಳಿಗೆ ವಕೀಲರನ್ನು ನೇಮಕ ಮಾಡಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಪುಷ್ಪಲತಾ ಮಾತನಾಡಿ, ಕಾನೂನು ನೆರವು ಪಡೆಯಲು ಉಚಿತ ಕಾನೂನು ನೆರವು ಕೇಂದ್ರ ಸಹಾಯಕವಾಗಲಿದೆ. ಇದೇ ಮೊದಲ ಬಾರಿಗೆ ಮಠದಲ್ಲಿ ಕಾನೂನು ನೆರವು ಕೇಂದ್ರ ಆರಂಭಿಸಲಾಗಿದೆ ಎಂದರು.
ಇದಕ್ಕೂ ಮುನ್ನ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧಿಧೀಶರು ಹುಬ್ಬಳ್ಳಿಯ ರೈಲ್ವೆ ಪೊಲೀಸ್ ಠಾಣೆಯಲ್ಲಿ ಉಚಿತ ಕಾನೂನು ನೆರವು ಕೇಂದ್ರ ಉದ್ಘಾಟಿಸಿದರು. ನ್ಯಾಯವಾದಿ ರಾಜಶೇಖರ, ಪ್ರಕಾಶ ಉಡಿಕೇರಿ, ಗಣಪತಿ ನಾಯಕ, ಮಹೇಶಪ್ಪ, ಜಗದೀಶ ಮೊದಲಾದವರಿದ್ದರು.