Advertisement

ಅಮ್ಮನ ಆಸೆ; ಮಗನ ಪ್ರಯತ್ನ ಒಂದು ವಿಚಿತ್ರ ಸಿನಿಮಾ

10:03 AM Apr 28, 2017 | |

“ನಾನು ಸುಮಾರು 80 ಸಿನಿಮಾಗಳಿಗೆ ಕೆಲಸ ಮಾಡಿದ್ದೇನೆ. ನಾನು ಕೆಲಸ ಮಾಡಿದ ಬಹುತೇಕ ಸಿನಿಮಾಗಳಿಗೆ ಒಳ್ಳೆಯ ಮೆಚ್ಚುಗೆ ಸಿಗುತ್ತಿತ್ತು. ಆದರೆ, ಎಲ್ಲೂ ನನ್ನ ಹೆಸರು ಹೊರಬರುತ್ತಿರಲಿಲ್ಲ. ಎಲ್ಲೋ ಒಂದು ಕಡೆ ನನಗೂ ಬೇಸರವಾಗುತ್ತಿತ್ತು. ಇನ್ಮುಂದೆ ಅಂತಹ ತಪ್ಪು ಮಾಡೋದಿಲ್ಲ. ನಾನು ಏನು ಅನ್ನೋದು ಈ ಸಿನ್ಮಾ ಮೂಲಕ ಗೊತ್ತಾಗುತ್ತೆ…’ 

Advertisement

ಹೀಗೆ ತುಂಬಾ ವಿಶ್ವಾಸದಿಂದ ಹೇಳಿಕೊಂಡಿದ್ದು ಸಂಗೀತ ನಿರ್ದೇಶಕ ಮ್ಯಾಥ್ಯೂಸ್‌ ಮನು. ಅವರು ಹೀಗೆ ಹೇಳಿದ್ದು, “ಕಥಾ ವಿಚಿತ್ರ’ ಚಿತ್ರದ ಆಡಿಯೋ ಬಿಡುಗಡೆಯಲ್ಲಿ. ಅವರು ಹೀಗೆ ಹೇಳ್ಳೋಕೆ ಕಾರಣ, ಅವರ ತಾಯಿಯಂತೆ. ಎಷ್ಟೋ ಸಿನಿಮಾಗಳಿಗೆ ಹಿನ್ನೆಲೆ ಸಂಗೀತ ಸೇರಿದಂತೆ ಇನ್ನಿತರೆ ಕೆಲಸ ಮಾಡಿದ್ದ ಮ್ಯಾಥ್ಯೂಸ್‌ಗೆ ಹಣ ಸಿಗುತ್ತಿತ್ತೇ ಹೊರತು, ಹೆಸರು ಸಿಗುತ್ತಿರಲಿಲ್ಲವಂತೆ. ಒಂದು
ದಿನ ಅವರ ತಾಯಿ, ನೀನು ಮಾಡಿದ ಕೆಲಸದಿಂದ ಆ ಚಿತ್ರಕ್ಕೆ ಹೆಸರು ಬಂತು, ಈ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿದೆ, ನಿನ್ನ ಹೆಸರೇ ಇಲ್ಲವಲ್ಲಾ ಅಂತ ಬೇಸರಿಸಿಕೊಂಡಿದ್ದರಂತೆ. ಮ್ಯಾಥ್ಯೂಸ್‌ ಗೂ ಒಳ್ಳೇ ಸಿನಿಮಾ ಸಿಗುವ ನಂಬಿಕೆ ಇತ್ತು. “ಕಥಾ ವಿಚಿತ್ರ’ ಆ ನಂಬಿಕೆ ಉಳಿಸಿಕೊಂಡಿದೆ. “ಈ ಸಿನಿಮಾ ಮೂಲಕ ಅಮ್ಮನ ಆಸೆ ಈಡೇರುತ್ತೆ. ಇನ್ಮುಂದೆ, ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೆ ಸ್ವತಂತ್ರ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡ್ತೀನಿ’ ಅಂದರು ಮ್ಯಾಥ್ಯೂಸ್‌.

ಅವರಿಲ್ಲಿ ಎಲ್ಲಾ ಅನುಭವಗಳನ್ನು ಬೆರೆಸಿ ಕೆಲಸ ಮಾಡಿದ್ದಾರಂತೆ. “ಇದೊಂದು ಹೊಸಬಗೆಯ ಚಿತ್ರವಾಗಲಿದೆ. ನನ್ನ ಕೆಲಸ ಎಲ್ಲರಿಗೂ ಇಷ್ಟವಾಗುವ ರೀತಿ ಮಾಡಿದ್ದೇನೆ. ಇಲ್ಲಿ ಹಾಡೇ ಇರಲಿಲ್ಲ. ಆದರೆ, ಒಂದು ಜಾಗದಲ್ಲಿ ಹಾಡು ಬೇಕು ಅನಿಸಿ, ಒಂದೇ ರಾತ್ರಿಯಲ್ಲಿ “ಕದ್ದು
ಮುಚ್ಚಿ ನೋಡುತ್ತಿರುವ’ ಹಾಡನ್ನು ನಾನೇ ಬರೆದು, ಹಾಡಿದ್ದೇನೆ. ಅದು ಎಲ್ಲರಿಗೂ ಇಷ್ಟವಾಗಿದೆ. ಸಿನಿಮಾ ಕೂಡ ಇಷ್ಟವಾಗಲಿದೆ’ ಎಂದರು ಮ್ಯಾಥ್ಯೂಸ್‌. ನಿರ್ದೇಶಕ ಅನೂಪ್‌ ಆಂಟೋನಿಗೆ ಇದು ಮೊದಲ ಚಿತ್ರ. ಅವಕಾಶ ಕೊಟ್ಟ ನಿರ್ಮಾಪಕರನ್ನು ಗುಣಗಾನ
ಮಾಡಿದ ಅನೂಪ್‌, “ಇದು ವಿಚಿತ್ರ ಕಥೆವುಳ್ಳ ಸಿನಿಮಾ. ನೋಡಿದರೆ, ಏನೆಲ್ಲಾ ವಿಚಿತ್ರಗಳು ಕಾಣಿಸಿಕೊಳ್ಳುತ್ತವೆ ಅನ್ನೋದು ಗೊತ್ತಾಗುತ್ತೆ. ಮಂಗಳೂರು, ಬೆಂಗಳೂರು ಇತರೆಡೆ ಚಿತ್ರೀಕರಣ ಮಾಡಲಾಗಿದೆ. ಮೂರು ಹಾಡುಗಳನ್ನು ಅದ್ಭುತವಾಗಿ ಕೊಟ್ಟಿದ್ದಾರೆ ಮ್ಯಾಥ್ಯೂಸ್‌. ಶಾರ್ಟ್‌ ಸಿನಿಮಾ ಬಿಟ್ಟರೆ ಬೇರೆ ಅನುಭವ ಇಲ್ಲ. ಆದರೆ, ಕಥೆಯ ಮೇಲೆ ನಂಬಿಕೆ ಇಟ್ಟು, ಸಿನಿಮಾ ಮಾಡಿದ್ದೇನೆ.
ಒಂದೊಳ್ಳೆಯ ಚಿತ್ರ ಕೊಡುತ್ತಿದ್ದೇನೆ ಎಂಬ ತೃಪ್ತಿ ಇದೆ’ ಎಂದರು ನಿರ್ದೇಶಕರು. 

ನಿರ್ಮಾಪಕ ಸುಧಾಕರ್‌, ಒಳ್ಳೆ ಯಕಥೆ ಸಿಕ್ಕರೆ ಸಿನಿಮಾ ಮಾಡಬೇಕು ಎಂಬ ಹುಡುಕಾಟದಲ್ಲಿದ್ದರಂತೆ. ಆ ಹುಡುಕಾಟದಲ್ಲಿ ಸಿಕ್ಕಿದ್ದೇ “ಕಥಾ ವಿಚಿತ್ರ’ ಕಥೆಯಂತೆ. ಇದು ಹಾರರ್‌ ಜಾನರ್‌ ಸಿನಿಮಾವಾಗಿದ್ದರೂ, ಇದುವರೆಗೆ ನೋಡಿದ ಹಾರರ್‌ ಸಿನಿಮಾಗಳಿಗಿಂತಲೂ ವಿಭಿನ್ನವಾಗಿದೆ ಎನ್ನುತ್ತಾರೆ ಸುಧಾಕರ್‌. ಹೀರೋ ಹರ್ಷವರ್ಧನ್‌ ಕೊನೆಯ ಕ್ಷಣದಲ್ಲಿ ಈ ಚಿತ್ರಕ್ಕೆ ನಾಯಕರಾದರಂತೆ. ಅವರಿಗೆ ಹೊಸತನ ಇರುವ ಪಾತ್ರ ಸಿಕ್ಕಿರವುದರಿಂದ ಈ ಚಿತ್ರ ಹೊಸ ಇಮೇಜ್‌ ಕೊಡುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಹರ್ಷವರ್ಧನ್‌.
“ಕರ್ವ’ ಮಾಡಿದ್ದ ನಾಯಕಿ ಅನುಗೆ ಥ್ರಿಲ್ಲರ್‌ ಸಸ್ಪೆನ್ಸ್‌ ಕಥೆ ಅಂದಾಗ, ಮೊದಮೊದಲು ಎಲ್ಲಾ ಕಥೆಗಳಂತೆ ಇದೂ ಇರುತ್ತೆ ಅಂದುಕೊಂಡೇ ಕಥೆ ಕೇಳಿದರಂತೆ. ಕೊನೆಗೆ ತುಂಬಾ ಕುತೂಹಲ ಮೂಡಿಸಿದ್ದರಿಂದ ಬಿಡಬಾರದು ಅಂತ ಒಪ್ಪಿಕೊಂಡರಂತೆ. ಈ ಚಿತ್ರಕ್ಕೆ ಅಭಿಲಾಶ್‌ ಛಾಯಾಗ್ರಾಹಕರು. ನಾಗೇಂದ್ರ ಅರಸ್‌ ಸಂಕಲನ ಮಾಡಿದ್ದಾರೆ. ಸಾಯಿ ಆಡಿಯೋ ಕಂಪೆನಿ ಚಿತ್ರದ ಆಡಿಯೋ 
ಹಕ್ಕು ಪಡೆದು, ಬಿಡುಗಡೆ ಮಾಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next