ಕನ್ನಡ ಚಿತ್ರರಂಗದಲ್ಲಿ ಅಮ್ಮನ ಪ್ರೀತಿ ಜಾಸ್ತಿಯಾಗಿದೆ. ಇದಕ್ಕೆ ಇತ್ತೀಚೆಗೆ ಒಂದರ ಹಿಂದೊಂದು ಉದಾಹರಣೆಗಳು ಸಿಗುತ್ತಿವೆ. ಈಗಾಗಲೇ ಚಿರಂಜೀವಿ ಸರ್ಜಾ ಅಭಿನಯದ “ಅಮ್ಮಾ ಐ ಲವ್ ಯೂ’ ಚಿತ್ರ ಬಿಡುಗಡೆಯಾಗಿ ಯಶಸ್ವಿಯಾಗಿದೆ. ಈಗ ಅಮ್ಮನ ಪಾತ್ರವನ್ನು ಪ್ರಧಾನವಾಗಿಟ್ಟುಕೊಂಡು ಇನ್ನಷ್ಟು ಚಿತ್ರಗಳು ತಯಾರಾಗುತ್ತಿವೆ.
ಈ ಸಾಲಿನಲ್ಲಿ ಪ್ರಮುಖವಾಗಿ ಸಿಗುವ ಚಿತ್ರ “ತಾಯಿಗೆ ತಕ್ಕ ಮಗ’. ಇನ್ನು ಹರಿಪ್ರಿಯಾ ಅವರ 25ನೇ ಚಿತ್ರವಾದ “ಡಾಟರ್ ಆಫ್ ಪಾರ್ವತಮ್ಮ’ದಲ್ಲೂ ತಾಯಿ ಪಾತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದೆ. ಇನ್ನು ವಿನೋದ್ ಪ್ರಭಾಕರ್ ಅಭಿನಯದ “ಫೈಟರ್’ ಚಿತ್ರದಲ್ಲೂ ನಾಯಕನ ಪಾತ್ರಕ್ಕೆ ಮಹತ್ವ ಎಷ್ಟಿದೆಯೋ, ತಾಯಿ ಪಾತ್ರಕ್ಕೂ ಅಷ್ಟೇ ಮಹತ್ವವಿದೆಯಂತೆ.
ಅದರಲ್ಲೂ ಈ ಮೂರು ಚಿತ್ರಗಳ ಪೈಕಿ ಎರಡರಲ್ಲಿ ಸುಮಲತಾ ಅಂಬರೀಶ್ ಅವರು ತಾಯಿಯಾಗಿ ನಟಿಸಿರುವುದು ವಿಶೇಷ. ಹಾಗೆ ನೋಡಿದರೆ, ಕನ್ನಡದಲ್ಲಿ ತಾಯಿಯ ಮಮತೆ, ತ್ಯಾಗ, ಪ್ರೀತಿಯನ್ನು ಎತ್ತಿಹಿಡಿಯುವಂತಹ ಹಲವು ಸಿನಿಮಾಗಳು ಬಂದಿವೆ. “ತಾಯಿ ದೇವರು’, “ತಾಯಿ ಕರುಳು’, “ತಾಯಿಯ ಮಡಿಲಲ್ಲಿ’, “ತಾಯಿಯ ಆಸೆ’, “ತಾಯಿಯ ಹೊಣೆ’, “ತಾಯಿ ಕನಸು’, “ತಾಯಿಯ ನುಡಿ’, “ಅಮ್ಮ’, “ತಾಯಿ’ ಸೇರಿದಂತೆ ಹಲವು ಚಿತ್ರಗಳು ತಾಯಿಯ ಪ್ರೀತಿ ಮತ್ತು ಮಮತೆಯ ಕುರಿತಾಗಿ ಬಿಡುಗಡೆಯಾಗಿವೆ.
ಆದರೆ, ಅದರ ನಂತರ ಒಂದು ದೊಡ್ಡ ಗ್ಯಾಪ್ ಆಗಿತ್ತು ಎಂದರೆ ತಪ್ಪಿಲ್ಲ. ಒಂದು ಹಂತದಲ್ಲಿ ತಾಯಿ ಪಾತ್ರ ಎಂದರೆ ಅದು ಶೋಪೀಸ್ ಎನ್ನುವಂತಹ ಪರಿಸ್ಥಿತಿ ಇತ್ತು. ಈ ಕುರಿತು ಕೆಲವು ಹಿರಿಯ ಪೋಷಕ ಕಲಾವಿದೆಯರು ಬಹಿರಂಗವಾಗಿಯೇ ಬೇಸರ ತೋಡಿಕೊಂಡಿದ್ದರು. ಅವಕಾಶಗಳು ಸಿಗುತ್ತಿವೆಯಾದರೂ, ಎಷ್ಟೋ ಚಿತ್ರಗಳಲ್ಲಿ ಮಾಡುವುದಕ್ಕೆ ಏನು ಕೆಲವೇ ಇರುವುದಿಲ್ಲ,
ಸುಮ್ಮನೆ ಹೀಗೆ ಬಂದು ಹಾಗೆ ಹೋಗುವುದಕ್ಕೆ ಪಾತ್ರಗಳು ಸೀಮಿತವಾಗುತ್ತಿದೆ ಎಂದು ಹೇಳಿಕೊಂಡಿದ್ದರು. ಈಗ ತಾಯಿ ಪಾತ್ರಗಳಿಗೆ ಮಹತ್ವ ಸಿಗುತ್ತಿರುವುದಷ್ಟೇ ಅಲ್ಲ, ತಾಯಿಯ ಇನ್ನೊಂದು ಮಜಲನ್ನು ತೋರಿಸಲಾಗುತ್ತಿದೆ. ಇದುವರೆಗೂ ತಾಯಿ ಎಂದರೆ ಮಮತೆ, ತ್ಯಾಗ, ಪ್ರೀತಿಗೆ ಮಾತ್ರ ಸೀಮಿತವಾಗಿತ್ತು. ಆದರೆ, ಮುಂದೆ ಬಿಡುಗಡೆಯಾಗುತ್ತಿರುವ ಚಿತ್ರಗಳಲ್ಲಿ ತಾಯಿ ಒಬ್ಬ ಹೋರಾಟಗಾರ್ತಿಯೂ ಆಗಿದ್ದಾಳೆ ಎನ್ನುವುದು ವಿಶೇಷ.
ಇಲ್ಲಿ ತಾಯಿ ಬರೀ ಮಮತಾಮಯಿಯಷ್ಟೇ ಅಲ್ಲ ಅಥವಾ ಬರೀ ಕಣ್ಣೀರು ಸುರಿಸುವುದಷ್ಟೇ ಅಲ್ಲ, ಅದರಾಚೆಗೆ ಹೋರಾಟ, ಸಂಘಟನೆ ಮಾಡುವುದರ ಜೊತೆಗೆ ಮಕ್ಕಳಿಗೆ ಸ್ಫೂರ್ತಿಯ ಸೆಲೆಯಾಗಿದ್ದಾಳೆ. ಎಲ್ಲಕ್ಕಿಂತ ಹೆಚ್ಚಾಗಿ, ಕೆಲವು ವರ್ಷಗಳಿಂದ ಚಿತ್ರದ ಶೀರ್ಷಿಕೆಗಳಿಂದ ದೂರವೇ ಉಳಿದಿದ್ದ ಅಮ್ಮ, ಈಗ ಶೀರ್ಷಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಫಾರ್ಮ್ಗೆ ಬಂದಿದ್ದಾಳೆ.