16 ಮದ್ರಾಸ್ ಯುನಿಟ್‌ನ ನಿವೃತ್ತ ಸಿಪಾಯಿ,
ಬೆಂಗಳೂರು
ಅತ್ತ ಬಾಂಗ್ಲಾ ನೆಲ ಕ್ಷುದ್ರವಾಗುತ್ತಿದ್ದಾಗ, ಇತ್ತ ವಾಯವ್ಯ ದಿಕ್ಕಿನ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿನ ಚಿತ್ರಣವೂ ಕ್ಷಣದಿಂದ ಕ್ಷಣಕ್ಕೆ ಬದಲಾಗುತ್ತಿತ್ತು. ಜಮ್ಮುವಿನ ಸಾಂಬಾ ಸೆಕ್ಟರ್‌ನ ತುದಿಯ ಅರಣ್ಯ ಪ್ರದೇಶಗಳಲ್ಲಿ ಹಳ್ಳಿಗಳಲ್ಲಿನ ಮುಗ್ಧ ಭಾರತೀಯರ ಎದೆ ಆತಂಕದಿಂದ ಢವಗುಟ್ಟುತ್ತಿತ್ತು. ಇಲ್ಲೂ ಬೃಹತ್ ಕಾಳಗ ನಡೆಸಲು ಪಾಕ್ ಸಜ್ಜಾಗಿತ್ತು. ಸಾಂಬಾದ ಆಚೆಯ ಕಾಡಿನಲ್ಲಿ ಪಾಕ್ ಸೈನಿಕರು ಶಸ್ತ್ರಾಸ್ತ್ರ- ಮದ್ದುಗುಂಡುಗಳನ್ನು ಅಡಗಿಸಿರುವ ಸಂಗತಿ ನಮ್ಮನ್ನು ತಲುಪಿತ್ತು. ಯಾವ ಕ್ಷಣದಲ್ಲಿ ತಮ್ಮ ಹಳ್ಳಿಗಳ ನೆತ್ತಿಯ ಮೇಲೆ ಫಿರಂಗಿ ಅಪ್ಪಳಿಸುವುದೋ ಎಂಬ ಚಿಂತೆ ಮುಗ್ಧ ನಾಗರಿಕರನ್ನು ಕಾಡುತ್ತಿತ್ತು.
Advertisement
ಇಂಥ ಸಂದಿಗ್ಧ ಸ್ಥಿತಿಯಲ್ಲಿ ನಮ್ಮ 16 ಮದ್ರಾಸ್ ಯುನಿಟ್‌ನ ಕಮಾಂಡರ್, ನಮಗೊಂದು ಟಾಸ್ಕ್ ವಹಿಸಿದರು. ಲಿಳಿಯಾ ಅರಣ್ಯಧಾಮದವರೆಗಿನ ಹಳ್ಳಿಜನರ ಜೀವ ಕಾಪಾಡುವ ಹೊಣೆ ನಮ್ಮದಾಗಿತ್ತು. ಸಾಂಬಾದಿಂದ ಲಿಳಿಯಾ ಕಾಡಿನವರೆಗೆ 13 ದಿನ ಕಾಲ್ನಡಿಗೆಯಲ್ಲೇ ಸಾಗುತ್ತಿದ್ದೆವು. ಈ ನಡಿಗೆ ಹಗಲಿನದ್ದಲ್ಲ. ರಾತ್ರಿ 8ರ ಮೇಲೆ ನಡೆಯಲು ಶುರುಮಾಡಿ, ಬೆಳಗಿನ ಜಾವ 5ಕ್ಕೆ ನಿಲ್ಲಿಸುತ್ತಿದ್ದೆವು. ನಮ್ಮ ಸಹಜ ಭಾಷೆಯನ್ನೇ ಮರೆತು ಕೋಡ್‌ವರ್ಡ್‌ಗಳ ಮೂಲಕವೇ ಸಂಭಾಷಿಸುತ್ತಿದ್ದೆವು. ನಾಯಿ, ಮೇಕೆ ಥರದ ಸದ್ದುಗಳ ಮೂಲಕ ಪರಸ್ಪರ ಸಂದೇಶಗಳನ್ನು ರವಾನಿಸಿಕೊಳ್ಳುತ್ತಿದ್ದೆವು.
Related Articles
Advertisement
ಅದು ಡಿಸೆಂಬರ್ 16 ರಾತ್ರಿ. ಒಂದು ಕಗ್ಗಾಡಿನಲ್ಲಿ ಕೊನೆಗೂ ಶತ್ರುಗಳು ಎದುರಾದರು. ಜೋರು ಗುಂಡಿನ ಚಕಮಕಿ. ರಾತ್ರಿ 9.30ರ ಸುಮಾರು. ನನ್ನ ಕಾಲಿಗೂ ಶತ್ರು ಬಂದೂಕಿನ ಗುಂಡು ಬಿತ್ತು. ಆದರೂ ನಮ್ಮ ಕೆಚ್ಚೆದೆಯ ಹೋರಾಟ ನಿಲ್ಲಲಿಲ್ಲ. ಶತ್ರುಗಳನ್ನು ಹಿಮ್ಮೆಟ್ಟಿಸಿದೆವು. ಮರುದಿನ ರಾತ್ರಿ ಒಂದು ಟ್ಯಾಂಕರ್ ಮೂಲಕ ನನ್ನನ್ನು ಪಠಾಣ್‌ಕೋಟ್‌ನ ಮಿಲಿಟರಿ ಆಸ್ಪತ್ರೆಗೆ ಸಾಗಿಸಲಾಯಿತು. ಶಸ್ತ್ರಚಿಕಿತ್ಸೆ ನಡೆಸಿ, ಗುಂಡು ಹೊರತೆಗೆದರು. ಮತ್ತೆರಡು ತಿಂಗಳು ಜಲಂಧರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೆ.
ಪಾಕ್ ಜತೆಗಿನ ಯುದ್ಧ ಮುಗಿದ ಮೇಲೂ ಗ್ರೆನೇಡ್ ದಾಳಿಯಿಂದ ಹುತಾತ್ಮನಾದ ನನ್ನ ಗೆಳೆಯ ನೆನಪಾಗುತ್ತಲೇ ಇದ್ದ. ಮದುವೆಯಾಗಿ ಒಂದೇ ತಿಂಗಳಲ್ಲಿ ಆತ ವೀರಮರಣ ಅಪ್ಪಿದ್ದ. ಅವನ ಮನೆಯ ಸ್ಥಿತಿ, ಪತ್ನಿಯ ಸಂಕಟ ನೆನೆದು ಕಣ್ಣೀರಿಟ್ಟಿದ್ದೆ. ಅವತ್ತೇ ನಿಶ್ಚಿಯಿಸಿಬಿಟ್ಟೆ; “ಸೈನಿಕನ ಬಾಳು ನೀರಿನ ಮೇಲಿನ ಗುಳ್ಳೆ ಥರ. ಸೇನೆಯಲ್ಲಿನ ಸೇವೆ ಮುಗಿಯುವ ತನಕ ಮದುವೆ ಆಗುವುದಿಲ್ಲ’ ಎಂದು ಶಪಥ ತೊಟ್ಟೆ. ತಾಯಿಗೂ ಹಾಗೆಯೇ ಪತ್ರ ಬರೆದು, ಅದರಂತೆಯೇ ನಡೆದುಕೊಂಡೆ.
ನಿರೂಪಣೆ: ವಾಣಿ ಭಟ್ಟ