ನರಗುಂದ: ಸಮೃದ್ಧವಾಗಿ ಬೆಳೆದು ನಿಂತ ಫಸಲು ಕೈಗೆಟುಕುವ ಹಂತದಲ್ಲಿದ್ದಾಗ ವರುಣನ ಅವಕೃಪೆಯಿಂದ ಬೇಸತ್ತ ರೈತರು ಮಳೆಯಿಂದ ಸಾಕಷ್ಟು ಹಾನಿಯಾದರೂ ಅಳಿದುಳಿದ ಬೆಳೆ ಕಟಾವು ಮಾಡಿ ರಕ್ಷಿಸಿಕೊಳ್ಳಲು ಮುಂದಾಗಿದ್ದರು. ಆದರೆ, ಮತ್ತೆ ವರುಣನ ಅವಕೃಪೆಯಿಂದಾಗಿ ಸೋತು ಹೋಗಿದ್ದಾರೆ. ಕಟಾವು ಮಾಡಿದ ಹೆಸರು ಬೆಳೆಯಲ್ಲಿ ತೇವಾಂಶವಿರುವ ಕಾರಣ ಒಣಗಿಸಲು ರೈತರು ಪರದಾಡುವಂತಾಗಿದೆ.
ಅಲ್ಪ ಅವಧಿಯಲ್ಲಿ ರೈತರಿಗೆ ಹೆಚ್ಚು ಖರ್ಚಿಲ್ಲದೇ ಆದಾಯ ಕಲ್ಪಿಸುವ ಹೆಸರು ಬೆಳೆ ರೈತನ ಹಿಂಗಾರು ಬೆಳೆಗಳಿಗೆ ಆರ್ಥಿಕ ಸಂಕಷ್ಟ ಸರಿತೂಗಿಸುವಲ್ಲಿ ಸಫಲವಾಗಿದೆ. ಆದರೆ, ಈ ಬಾರಿ ಮಳೆರಾಯನ ಅವಕೃಪೆಯಿಂದ ಹೆಸರು ಬೆಳೆಗಳು ಹಾನಿಗೀಡಾಗಿ ರೈತರು ಬಸವಳಿದು ಹೋಗಿದ್ದಾರೆ.
ಕಟಾವು ಯಂತ್ರಕ್ಕೆ ಮೊರೆ: ಕೂಲಿಕಾರರ ಸಮಸ್ಯೆಯಿಂದ ಬಳಲಿದ ತಾಲೂಕಿನ ರೈತ ಸಮುದಾಯ ಈ ಬಾರಿ ಹೆಚ್ಚಾಗಿ ಕಟಾವು ಯಂತ್ರವನ್ನೇ ಅವಲಂಬಿಸಿದ್ದಾರೆ. ಹಿಂದೆ 15 ದಿನಗಳ ಕಾಲ ಬಿಡುವಿಲ್ಲದೇ ಸುರಿದ ಮಳೆಯಿಂದ ಹೆಸರು ಬೆಳೆಗಳಿಗೆ ಸಾಕಷ್ಟು ಹಾನಿಯಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಮಳೆರಾಯ ಅಷ್ಟಿಷ್ಟು ಬಿಡುವು ನೀಡಿದ್ದರಿಂದ ರೈತರು ತಕ್ಷಣವೇ ಹೆಸರು ಬೆಳೆ ಕಟಾವಿಗೆ ಮುಂದಾಗಿದ್ದರು.
ತಾಲೂಕಿನಲ್ಲಿ ಬಹಳಷ್ಟು ರೈತರು ಈಗಾಗಲೇ ಕಟಾವು ಮಾಡಿದ್ದರೂ ತೇವಾಂಶ ಇರುವ ಹೆಸರು ಫಸಲು ರಕ್ಷಿಸಿಕೊಳ್ಳಲು ಪರದಾಡುವಂತಾಗಿದೆ. ಕಾರಣ ದಿನವಿಡೀ ಆಗಾಗ ಬಂದು ಹೋಗುವ ಮಳೆಯಿಂದಾಗಿ ಎಲ್ಲಿ ಕೈಗೆ ಬಂದ ಫಸಲು ಕಳೆದುಕೊಳ್ಳುತ್ತೇವೋ ಎಂಬ ಭೀತಿ ರೈತರನ್ನು ಕಾಡುತ್ತಿದೆ.
ಈ ಮಧ್ಯೆ ಮಾರುಕಟ್ಟೆಯಲ್ಲಿ ಕೂಡ ಕ್ವಿಂಟಲ್ ಹೆಸರು ಕಾಳಿನ ಬೆಲೆಯಲ್ಲಿ ಸಾಕಷ್ಟು ಇಳಿಮುಖವಾಗಿದ್ದರಿಂದ ಮೊದಲೇ ಮಳೆಯಿಂದ ಇಳುವರಿ ಕುಂಠಿತಗೊಂಡು ಅಷ್ಟಿಷ್ಟು ಬೆಳೆ ತೆಗೆದ ರೈತರು ಇದೀಗ ಬೆಲೆ ಕುಸಿತದಿಂದ ಸೋತು ಹೋಗಿದ್ದಾರೆ. ಹಾಗಾಗಿ, ಸರ್ಕಾರದಿಂದ ಬೆಳೆ ನಷ್ಟ ಪರಿಹಾರ ಮತ್ತು ಬೆಂಬಲ ಬೆಲೆಯಡಿ ಹೆಸರು ಖರೀದಿ ಕೇಂದ್ರ ಪ್ರಾರಂಭವಾಗುವುದೇ ಎಂಬ ನಿರೀಕ್ಷೆಯಲ್ಲಿ ಕಾಯ್ದು ಕುಳಿತಿದ್ದಾರೆ.
-ಸಿದ್ಧಲಿಂಗಯ್ಯ ಮಣ್ಣೂರಮಠ