Advertisement

ಮಸೀದಿಯಲ್ಲಿ ಹಿಂದೂ ದೇವರ ದರ್ಶನ

01:06 PM Aug 19, 2021 | Team Udayavani |

ಕೊಪ್ಪಳ: ಜಾತಿ ಜನಾಂಗದ ನಡುವೆ ನಡೆಯುವ ಒಣ ಪ್ರತಿಷ್ಠೆಗಳ ಮಧ್ಯೆಯೂ ಇಲ್ಲೊಂದು ಗ್ರಾಮದಲ್ಲಿ ಮುಸ್ಲಿಂ-ಹಿಂದೂ ಸಹೋದರರು ಭಾವೈಕ್ಯತೆಯಿಂದಲೇ ಸಹಬಾಳ್ವೆ ನಡೆಸಿ ನಾಡಿಗೆಲ್ಲ ಮಾದರಿಯಾಗಿದ್ದಾರೆ. ಇಲ್ಲಿನ ಮಸೀದಿಯಲ್ಲಿ ಹಿಂದೂ ದೇವರ ಫೋಟೋಗಳ ದರ್ಶನವೂ ಭಕ್ತರಿಗೆ ಸಿಗಲಿದೆ. ಸಹೋದರರಂತೆ ಎಲ್ಲರೂ ಮೊಹರಂ ಹಬ್ಬ ಸೇರಿ ಎಲ್ಲ ಹಬ್ಬಗಳನ್ನು ಸಂಭ್ರಮ, ಸಡಗರದಿಂದ ಆಚರಣೆ ಮಾಡುವುದು ಇಲ್ಲಿ ಮೊದಲಿಂದಲೂ ನಡೆದು ಬಂದಿದೆ.

Advertisement

ಹೌದು. ತಾಲೂಕಿನ ಮುದ್ದಾಬಳ್ಳಿ ಎನ್ನುವ ಗ್ರಾಮದ ಮಸೀದಿಯಲ್ಲಿ ಹಿಂದೂ ದೇವರ ಫೋಟೋಗಳನ್ನು ನೀವು ಕಾಣಬಹುದು. ಭಕ್ತರು ಮಸೀದಿಗೆ ಆಗಮಿಸಿದರೆ ಮೊದಲು ಹಿಂದೂ ದೇವರ ಫೋಟೋಗಳೇ ನಿಮಗೆ ದರ್ಶನ ಕೊಡಲಿವೆ. ಇದು ಇಲ್ಲಿನ ಹಿಂದೂ-ಮುಸ್ಲಿಂ ಸಹೋದರರ ಭಾವೈಕ್ಯತೆ ತೋರಿಸುತ್ತದೆ. ಗ್ರಾಮದಲ್ಲಿನ ಮಸೀದಿಯಲ್ಲಿ ಪರಮೇಶ್ವರ, ಗಣೇಶ, ಲಕ್ಷ್ಮೀ, ಸರಸ್ವತಿ, ಆಂಜನೇಯ, ಗವಿಸಿದ್ದೇಶ್ವರ ಶ್ರೀಗಳ ಫೋಟೋಗಳು ಭಕ್ತರಿಗೆ ದರ್ಶನ ಕರುಣಿಸಲಿವೆ.

ಈ ಗ್ರಾಮದಲ್ಲಿ ಇದೊಂದೇ ಮಸೀದಿಯಿದೆ. 25 ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳು ಇಲ್ಲಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿವೆ. ಇಲ್ಲಿ ಹಿಂದೂ ಜನಾಂಗ ಹೆಚ್ಚಿದ್ದರೂ ಎಲ್ಲರೂ ನಮ್ಮವರೇ ಎನ್ನುವ ಭಾವನೆ ಹಾಸು ಹೊಕ್ಕಾಗಿದೆ. ಕೆಲವು ವರ್ಷಗಳಲ್ಲಿ ಜಾತಿ ಜಾತಿಗಳ ಮಧ್ಯೆಯೂ ಸಂರ್ಷಗಳು ನಡೆಯುತ್ತಲೇ ಇವೆ. ಒಬ್ಬರು ಕಂಡರೆ ಒಬ್ಬರಿಗೆ ಆಗುವುದಿಲ್ಲ ಎನ್ನುವಂತಹ ಮನಸ್ಥಿತಿಗಳು ಇಂದು ಅಲ್ಲಲ್ಲಿ ಗೋಚರವಾಗಿ ಮರೆಯುತ್ತಿವೆ. ಈ ಮಧ್ಯೆ ಮುದ್ದಾಬಳ್ಳಿ ಗ್ರಾಮದಲ್ಲಿ ಹಲವು ಸಮಾಜದ ಜನರು ಸಹ ಬಾಳ್ವೆಯಿಂದಲೇ ಜೀವನ ಸಾಗಿಸಿ ಇಡೀ ನಾಡಿಗೆ ಮಾದರಿಯಾಗಿದ್ದಾರೆ.

ಹರಕೆ, ಸಂಕಲ್ಪ: ಇಲ್ಲಿ ಹಿಂದೂ-ಮುಸ್ಲಿಂ ಸಮುದಾಯ ಎಲ್ಲ ಹಬ್ಬ ಹರಿದಿನಗಳನ್ನು ಕೂಡಿಕೊಂಡೇ ಸಂಭ್ರಮ ಸಡಗರದಿಂದ ಆಚರಣೆ ಮಾಡುವುದು ಮೊದಲಿಂದಲೂ ನಡೆದು ಬಂದ ಸಂಪ್ರದಾಯ. ಹಿರಿಯರೂ ಅದೇ ಸಂಪ್ರದಾಯವನ್ನು ಹಾಕಿಕೊಟ್ಟು ಹೋಗಿದ್ದಾರೆ. ಮುಸ್ಲಿಂರ ಹಬ್ಬ ಮೊಹರಂನಲ್ಲಿ ಹಿಂದೂ ಯುವಕರು, ಹಿರಿಯರು ಕೂಡಿಕೊಂಡು 15 ದಿನಗಳ ಕಾಲ ಮೊಹರಂ ದೇವರ ಸ್ಥಾಪನೆ, ಮೆರವಣಿಗೆ ಹಲಗೆ ಕುಣಿತದಲ್ಲಿ ತೊಡಗುತ್ತಾರೆ. ಕೆಲವರು ಮಸೀದಿಗಳಲ್ಲಿನ ಅಲ್ಲಾಯಿ ದೇವರುಗಳಿಗೆ ಹಿಂದೂ ಜನರೂ ಹರಕೆ, ಪ್ರಾರ್ಥನೆ, ಪೂಜೆ ಸಲ್ಲಿಸುತ್ತಾರೆ.

ಇನ್ನೂ ಮುಸ್ಲಿಂ ಜನಾಂಗವೂ ಇಲ್ಲಿನ ಹಿಂದೂ ಜನಾಂಗದ ಆಂಜನೇಯ, ಈಶ್ವರ, ಮುದ್ದಾಂಬಿಕಾ ದೇವಸ್ಥಾನಗಳಿಗೆ ಭಕ್ತಿಯಿಂದಲೇ ನಡೆದುಕೊಳ್ಳುತ್ತಾರೆ. ಪೂಜೆ, ನೈವೇದ್ಯಗಳನ್ನು ಅರ್ಪಿಸುತ್ತಾರೆ. ಎಲ್ಲರೂ ನಾವೆಲ್ಲ ಒಂದೇ ಎನ್ನುವ ಭಾವನೆಯಿಂದಲೇ ಹಬ್ಬಗಳನ್ನು ಆಚರಣೆ ಮಾಡುತ್ತಾರೆ. ಒಟ್ಟಿನಲ್ಲಿ ಮುದ್ದಾಬಳ್ಳಿ ಗ್ರಾಮದಲ್ಲಿನ ಜನಾಂಗವೂ ನಾವೆಲ್ಲರೂ ಒಂದು, ಯಾವುದೇ ಜಾತಿ ಬೇಧಗಳಿಲ್ಲ. ಸಹೋದರತೆಯಿಂದ ಜೀವನ ಸಾಗಿಸುತ್ತಿದ್ದೇವೆ. ಹಿಂದೂ-ಮುಸ್ಲಿಂ ಬೇರೆಯಲ್ಲ. ರಾಮ-ರಹೀಮ್‌ ಅಲ್ಲಾ ಒಂದೇ ಎನ್ನುವ ಸಂದೇಶ ಸಾರುವ ಮೂಲಕ ಭಾವೈಕ್ಯತೆಯ ಸಂಕೇತವಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next