Advertisement

ಸ್ವಾತಂತ್ರ್ಯ ಸಂಗ್ರಾಮ: ಕಾಂಗ್ರೆಸ್‌ ಪಾತ್ರ ಹಿರಿದು

07:12 AM Sep 18, 2018 | |

ಹೊಸದಿಲ್ಲಿ: “”ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಕಾಂಗ್ರೆಸ್‌, ದೇಶಕ್ಕೆ ಅತಿ ದೊಡ್ಡ ನೇತಾರರನ್ನು ಕಾಣಿಕೆಯನ್ನಾಗಿ ನೀಡಿದೆ” ಎಂದು ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಶ್ಲಾಘಿಸಿದ್ದಾರೆ.  ಇಲ್ಲಿನ ವಿಜ್ಞಾನ ಭವನದಲ್ಲಿ ಆಯೋಜಿಸಲಾಗಿರುವ, “ಭವಿಷ್ಯದ ಭಾರತ: ಆರ್‌ಎಸ್‌ಎಸ್‌ ದೃಷ್ಟಿಕೋನದಲ್ಲಿ’ ಎಂಬ ವಿಷಯಾಧಾರಿತ ಮೂರು ದಿನಗಳ ವಿಚಾರ ಸಂಕಿರಣದ ಮೊದಲ ದಿನ ಮಾತನಾಡಿದ ಅವರು, “”ಆರ್‌ಎಸ್‌ಎಸ್‌ ಸಂಸ್ಥಾಪಕ ಹೆಡೆವಾರ್‌ ಅವರು ಕಾಂಗ್ರೆಸ್‌ನಲ್ಲಿ ಹಾಗೂ ವಿದರ್ಭ ಪ್ರಾಂತ್ಯದಲ್ಲಿ ಹಿರಿಯ ನಾಯಕ ರಾಗಿದ್ದರು. ಅವರು ಗಾಂಧೀಜಿಯವರ ಅಸಹಕಾರ ಚಳುವಳಿಯಲ್ಲೂ ಭಾಗವಹಿ ಸಿದ್ದರು. ಅವರ ರಾಷ್ಟ್ರಪ್ರೇಮದಿಂದಾಗಿಯೇ ಆರ್‌ಎಸ್‌ಎಸ್‌ ಉದಯವಾಯಿತು” ಎಂದು ನೆನೆದರು. 

Advertisement

“”ದೇಶ ಕಟ್ಟುವ ವಿಚಾರದಲ್ಲಿ ಆರ್‌ಎಸ್‌ಎಸ್‌ನ ಸ್ವಯಂ ಸೇವಕರು ಅವಿಶ್ರಾಂತವಾಗಿ ದುಡಿದಿದ್ದಾರೆ. ಆದರೆ, ಅವರ ತ್ಯಾಗ, ಶ್ರಮ ಸತತವಾಗಿ ನಿರ್ಲಕ್ಷ್ಯಕ್ಕೊಳಗಾಗಿದೆ ಮಾತ್ರವಲ್ಲ, ಸಂಘಟನೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ವಿಷಾದಿಸಿದ ಭಾಗವತ್‌, “”ಎಂತಹ ಸಂದರ್ಭದಲ್ಲೂ ನಂಬಿಕೆಯಿಡಬಹುದಾದ, ನೆಚ್ಚಿಕೊಳ್ಳ ಬಹುದಾದ ಸಂಘಟನೆ ಆರ್‌ಎಸ್‌ಎಸ್‌ ಆಗಿದ್ದು, ದೇಶದ ಯಾವುದೇ ಸಂಘಟನೆ ಇದಕ್ಕೆ ಸರಿಸಾಟಿಯಿಲ್ಲ. ಅಲ್ಲದೆ, ಈ ಸಂಘಟನೆ ಎಂದಿಗೂ ಪ್ರಚಾರಕ್ಕಾಗಿ ಕೆಲಸ ಮಾಡುವುದಿಲ್ಲ ಎಂದರು. 

ವೈವಿಧ್ಯತೆ ಗೌರವಿಸಬೇಕು: ಇದೇ ವೇಳೆ ದೇಶದ ವೈವಿಧ್ಯತೆಯನ್ನು ಗೌರವಿಸಬೇಕು ಹಾಗೂ ಅದನ್ನು ಸಂಭ್ರಮಿಸಬೇಕು ಎಂದ ಭಾಗವತ್‌, ವೈವಿಧ್ಯತೆಯನ್ನು ಆಧರಿಸಿ ಸಮಾಜ ಒಡೆಯುವ ಕೆಲಸ ಸಲ್ಲದು ಎಂದು ಕಿವಿಮಾತು ಹೇಳಿದರು. ಹಲವಾರು ಸಾಮಾಜಿಕ ಪಿಡುಗುಗಳನ್ನು ನಿವಾರಿಸಿ, ಸ್ವಾಸ್ಥ್ಯ, ಸುಧಾರಿತ ಸಮಾಜವನ್ನು ನಿರ್ಮಿಸಲು ಆರ್‌ಎಸ್‌ಎಸ್‌ ಪ್ರಯತ್ನಿಸುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next