ಕೇಪ್ ಟೌನ್: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಎರಡು ಟೆಸ್ಟ್ ಪಂದ್ಯಗಳಲ್ಲಿ 11 ವಿಕೆಟ್ ಪಡೆದಿರುವ ವೇಗಿ ಮೊಹಮ್ಮದ್ ಶಮಿ ಮಹತ್ವದ ದಾಖಲೆಯತ್ತ ಕಣ್ಣಿಟ್ಟಿದ್ದಾರೆ. ಕೇಪ್ ಟೌನ್ ನಲ್ಲಿ ಇಂದಿನಿಂದ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಪಡೆದರೆ ಶಮಿ ಹೊಸ ದಾಖಲೆ ಬರೆಯಲಿದ್ದಾರೆ.
ಜಾವಗಲ್ ಶ್ರೀನಾಥ್ ನಂತರ ದಕ್ಷಿಣ ಆಫ್ರಿಕಾ ವಿರುದ್ಧ 50 ಟೆಸ್ಟ್ ವಿಕೆಟ್‌ಗಳನ್ನು ದಾಖಲಿಸಿದ ಎರಡನೇ ಭಾರತೀಯ ವೇಗಿ ಮತ್ತು ಐದನೇ ಭಾರತೀಯ ಬೌಲರ್ ಎನಿಸಿಕೊಳ್ಳುವ ಅವಕಾಶ ಶಮಿ ಮುಂದಿದೆ.
ಮೊಹಮ್ಮದ್ ಶಮಿ ಈ ಸಾಧನೆ ಮಾಡಿದರೆ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ಹರ್ಭಜನ್ ಸಿಂಗ್ ಮತ್ತು ರವಿಚಂದ್ರನ್ ಅಶ್ವಿನ್ ಇರುವ ಪ್ರಸಿದ್ಧರ ಪಟ್ಟಿಗೆ ಸೇರಿಕೊಳ್ಳಲಿದ್ದಾರೆ.
ಇದನ್ನೂ ಓದಿ:ಐಪಿಎಲ್‌ನ ನೂತನ ತಂಡವಾದ ಅಹ್ಮದಾಬಾದ್‌ಗೆ ಹಾರ್ದಿಕ್ ಪಾಂಡ್ಯ ನಾಯಕ
ಲೆಜೆಂಡರಿ ಸ್ಪಿನ್ನರ್, ಕನ್ನಡಿಗ ಅನಿಲ್ ಕುಂಬ್ಳೆ ಅವರು ಹರಿಣಗಳ ವಿರುದ್ಧ 84 ವಿಕೆಟ್ ಪಡೆದಿದ್ದರೆ, ಹರ್ಭಜನ್ ಸಿಂಗ್ 60 ವಿಕೆಟ್, ಅಶ್ವಿನ್ 56 ಟೆಸ್ಟ್ ವಿಕೆಟ್ ಪಡೆದಿದ್ದಾರೆ.
ಕೇಪ್ ಟೌನ್ ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಇಂದು ಸರಣಿಯ ಅಂತಿಮ ಟೆಸ್ಟ್ ಪಂದ್ಯಕ್ಕೆ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗುತ್ತಿದೆ. ಸರಣಿ 1-1ರಿಂದ ಸಮಬಲ ಹೊಂದಿದ್ದು, ಇಂದಿನ ಪಂದ್ಯ ನಿರ್ಣಾಯಕವಾಗಲಿದೆ. ಬೆನ್ನು ನೋವಿನ ಕಾರಣದಿಂದ ಕಳೆದ ಪಂದ್ಯ ತಪ್ಪಿಸಿಕೊಂಡಿದ್ದ ನಾಯಕ ವಿರಾಟ್ ಕೊಹ್ಲಿ ಇಂದಿನ ಪಂದ್ಯದಲ್ಲಿ ಮರಳಿ ನಾಯಕತ್ವದ ಚುಕ್ಕಾಣಿ ಹಿಡಿಯಲಿದ್ದಾರೆ.