ಬುರ್ಖಾ ಹಾಕದೇ ಈಗಿನ ಆಧುನಿಕ ಕಾಲದ ಸ್ತ್ರೀಯರಂತೆ ಬಟ್ಟೆ ಹಾಕಿದ ಪತ್ನಿ ಹಸಿನ್ ಜಹಾನ್ ಮತ್ತು ಮಗಳ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಕ್ಕಾಗಿ ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಕೆಲವರಿಂದ ಟೀಕೆಗೆ ಗುರಿಯಾಗಿದ್ದರು. ಇದೀಗ ಮಾಜಿ ಕ್ರಿಕೆಟಿಗ ಮಹಮದ್ ಕೈಫ್ ಅವರಿಗೂ ಇದೇ ರೀತಿ ಸಾಮಾಜಿಕ ತಾಣಗಳಲ್ಲಿ ಟೀಕೆ ವ್ಯಕ್ತವಾಗಿರುವುದು ಕಂಡು ಬಂದಿದೆ.
ಸೂರ್ಯ ನಮಸ್ಕಾರ ಮಾಡುವ ಚಿತ್ರಗಳನ್ನು ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿದ ನಂತರ ವ್ಯಾಪಕ ಟೀಕೆಗಳು ಕೈಫ್ ಅವರಿಗೆ ವ್ಯಕ್ತವಾಗಿದೆ. ‘ಸೂರ್ಯ ನಮಸ್ಕಾರ ದೇಹಕ್ಕೆ ಪರಿಪೂರ್ಣ ತಾಲೀಮು, ಯಾವುದೇ ಉಪಕರಣಗಳ ಅಗತ್ಯಲ್ಲವಿದೆ ಮಾಡಬಹುದಾದ ಸಮಗ್ರ ವ್ಯಾಯಾಮ ರೂಪ’ ಎಂದು ಟ್ವೀಟ್ ಮಾಡಿದ್ದರು.
ಸೂರ್ಯ ನಮಸ್ಕಾರ ಮಾಡಲು ಇಸ್ಲಾಂನಲ್ಲಿ ಅವಕಾಶವಿಲ್ಲ ಮತ್ತು ಅದು ನಮ್ಮ ಕಾನೂನಿಗೆ ವಿರೋಧ ಎಂದು ಹಲವರು ಟ್ವೀಟ್ ಮಾಡಿ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ಭಾರೀ ಟೀಕೆಗಳಿಗೆ ಶಾಂತವಾಗಿ ಉತ್ತರಿಸಿದ ಕೈಫ್ ‘ಎಲ್ಲಾ 4 ಚಿತ್ರಗಳಲ್ಲಿಯೂ ನನ್ನ ಮನಸ್ಸಿನಲ್ಲಿ ಅಲ್ಲಹು ಇದ್ದ . ಯಾವುದೇ ವ್ಯಾಯಾಮ ಮಾಡುವುದರಿಂದ ಧರ್ಮಕ್ಕೆ ಹೇಗೆ ಅಪಚಾರವಾಗುತ್ತದೆ ಎಂದು ನನಗೆ ಗೊತ್ತಿಲ್ಲ. ಸೂರ್ಯ ನಮಸ್ಕಾರ ಅಥವಾ ಜಿಮ್ ಮಾಡುವುದರಿಂದ ಎಲ್ಲರಿಗೂ ಪ್ರಯೋಜನವಿದೆ’ ಎಂದು ಬರೆದಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಕೈಫ್ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ಕೇಶವ್ ಪ್ರಸಾದ್ ಮೌರ್ಯ ಎದುರು ಪುಲ್‌ಪುರ್ ಕ್ಷೇತ್ರದಲ್ಲಿ ಕಣಕ್ಕಿಳಿದು ಹೀನಾಯವಾಗಿ ಸೋತಿದ್ದರು. ಠೇವಣಿಯನ್ನೂ ಕಳೆದುಕೊಂಡಿದ್ದರು.