Advertisement
ನ್ಯೂ ನ್ಯೂಜಿಲೆಂಡ್‌ನ ದಕ್ಷಿಣ ದ್ವೀಪದ ಒಟಾಗೋ ಕರಾವಳಿಯಲ್ಲಿರುವ ಕೊಕೊಹೇ ಬೀಚಿನಲ್ಲಿ ದೊಡ್ಡ ದೊಡ್ಡ ಗೋಲಾಕಾರದ ಬಂಡೆಗಳಿವೆ. ಇವು ಅನಾದಿ ಕಾಲದಿಂದಲೂ ಸಂಶೋಧಕರ ಕುತೂಹಲವನ್ನು ಕೆರಳಿಸುತ್ತಿವೆ. ಈ ಬಂಡೆಗಳು ಅಸಂಖ್ಯ ಪ್ರವಾಸಿಗರನ್ನೂ ಆಕರ್ಷಿಸುತ್ತಿವೆ. ಪಕ್ಕನೆ ನೋಡಿದರೆ ಒಡೆದ ಡೈನೋಸಾರ್ ಮೊಟ್ಟೆಯಂತೆ ಕಾಣುವ ಇವು ವಿವಿಧ ಬಣ್ಣ, ಮತ್ತು ವಿನ್ಯಾಸಗಳನ್ನು ಹೊಂದಿವೆ. ಇವುಗಳ ಎದುರು ನಿಂತು ಫೋಟೋ ತೆಗೆಸಿಕೊಳ್ಳಲು ಪ್ರವಾಸಿಗರು ಇಷ್ಟಪಡುತ್ತಾರೆ. ಈ ಬಂಡೆಗಳ ಸಮೂಹ “ಮೊರಾಕಿ ಬೌಲ್ದೆರ್ಸ್’ ಎಂದೇ ಪ್ರಖ್ಯಾತಿ ಪಡೆದಿದೆ. ಬೌಲ್ದೆರ್ಸ್ ಎಂದರೆ “ಬಂಡೆ’ ಎಂದರ್ಥ.ರಚನೆ ಹೇಗಾಯ್ತು?
ಪ್ರಕೃತಿಯಲ್ಲಿ ದುಂಡಗಿರುವ ಬಂಡೆಗಳು ಸಾಮಾನ್ಯ. ಮೊರಾಕಿ ಬೌಲ್ದೆರ್ಸ್ ಬಂಡೆಗಳು ಬೃಹತ್ ಗಾತ್ರ ಮತ್ತು ವಿಭಿನ್ನವಾದ ಮೇಲ್ಮೈ ಹೊಂದಿವೆ. ಕೆಸರು, ಖನಿಜಗಳ ಸಮ್ಮಿಶ್ರಣದಿಂದ ರೂಪಿಸಲ್ಪಟ್ಟಿವೆ. ಕೆಸರಿನ ಪದರಗಳು ಒಂದರ ಜೊತೆಗೆ ಇನ್ನೊಂದು ಸೇರಿ, ಬೆರೆಯುತ್ತಾ ಬೆರೆಯುತ್ತಾ ಗಟ್ಟಿಗೊಂಡು, ಕಾಲ ಕ್ರಮೇಣ ದೊಡ್ಡ ಬಂಡೆಗಳಾಗಿವೆ. ಅವುಗಳಲಿ ಕೆಲವು ಕಡಲಕೊರೆತದಿಂದ ಟೊಳ್ಳಾಗಿವೆ. ಅದರ ಮೇಲಿನ ಗೀರು ಮತ್ತು ವಿನ್ಯಾಸಗಳಿಗೂ ಅದೇ ಕಾರಣ. ಇವುಗಳ ರಚನೆ ರೂಪುಗೊಂಡಿದ್ದು ಸುಮಾರು 60 ದಶಲಕ್ಷ ವರ್ಷಗಳ ಹಿಂದೆ ಎಂದು ನಂಬಲಾಗಿದೆ.
ಗೋಲಾಕಾರ ಹೇಗಾಯ್ತು? ಇಂದಿಗೂ ವಿಜ್ಞಾನಿಗಳನ್ನು ಕುತೂಹಲಕ್ಕೆ ತಳ್ಳಿರುವ ಸಂಗತಿ ಎಂದರೆ, ಈ ಬಂಡೆಗಳು ಗೋಲಾಕಾರವನ್ನು ಹೇಗೆ ಪಡೆದವು ಎಂಬುದು. ಸಮುದ್ರದ ಅಲೆಗಳು, ಗುರುತ್ವಾಕರ್ಷಣೆ ಮತ್ತು ವಾತಾವರಣದ ಒತ್ತಡ ಕೂಡಾ ಇದಕ್ಕೆ ಕಾರಣವಾಗಿರಬಹುದು ಎಂಬುದು ವಿಜ್ಞಾನಿಗಳ ಊಹೆ. ಅದಕ್ಕೆ ಪುರಾವೆಗಳಿನ್ನೂ ಸಿಕ್ಕಿಲ್ಲ.