ಬ್ರಿಸ್ಟಲ್: ಮೊಯಿನ್ ಅಲಿ ಅವರ ಸ್ಫೋಟಕ ಶತಕದ ನೆರವಿನಿಂದ ಇಂಗ್ಲೆಂಡ್ ತಂಡವು ದ್ವಿತೀಯ ಏಕದಿನ ಪಂದ್ಯದಲ್ಲಿ ಪ್ರವಾಸಿ ವೆಸ್ಟ್‌ಇಂಡೀಸ್ ತಂಡವನ್ನು 124 ರನ್ನುಗಳ ಭಾರೀ ಅಂತರದಿಂದ ಸೋಲಿಸಿದೆ
ಈ ಗೆಲುವಿನಿಂದ ಆತಿಥೇಯ ತಂಡ ಇನ್ನು ಎರಡು ಪಂದ್ಯ ಬಾಕಿ ಉಳಿದಿರುವಂತೆ ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಸರಣಿಯ ಒಂದು ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಸರಣಿಯ ನಾಲ್ಕನೇ ಏಕದಿನ ಲಂಡನ್‌ನ ಓವಲ್‌ನಲ್ಲಿ ಬುಧವಾರ ನಡೆಯಲಿದೆ.
ಅಲಿ ಅವರ ಶತಕದಿಂದಾಗಿ ಇಂಗ್ಲೆಂಡ್ 9 ವಿಕೆಟಿಗೆ 369 ರನ್ನುಗಳ ಬೃಹತ್ ಮೊತ್ತ ದಾಖಲಿಸಿತು. ಇದು ವೆಸ್ಟ್‌ಇಂಡೀಸ್ ವಿರುದ್ಧ ಇಂಗ್ಲೆಂಡಿನ ಗರಿಷ್ಠ ಮೊತ್ತವಾಗಿದೆ. ಇದಕ್ಕುತ್ತರವಾಗಿ ಕ್ರಿಸ್ ಗೇಲ್ ಬಿರುಸಿನ 94 ರನ್ ಸಿಡಿಸಿದರೂ ವೆಸ್ಟ್‌ಇಂಡೀಸ್ 39.1 ಓವರ್‌ಗಳಲ್ಲಿ 245 ರನ್ನಿಗೆ ಆಲೌಟಾಯಿತು. ಗೇಲ್ ಅವರನ್ನು ಅದಿಲ್ ರಶೀದ್ ರನೌಟ್ ಮಾಡಿದರೆ ಲಿಯಮ್ ಪ್ಲಂಕೆಟ್ 52 ರನ್ನಿಗೆ 5 ವಿಕೆಟ್ ಕಿತ್ತು ವಿಂಡೀಸ್ ಕುಸಿತಕ್ಕೆ ಕಾರಣರಾದರು. ಏಕದಿನ ಕ್ರಿಕೆಟ್‌ನಲ್ಲಿ ಅವರು ಮೊದಲ ಬಾರಿ ಐದು ವಿಕೆಟ್ ಕಿತ್ತ ಸಾಧನೆ ಮಾಡಿದರು.
ಅಲಿ ಸಾಹಸ
ಮೊಯಿನ್ ಅಲಿ ಅವರ ಬ್ಯಾಟಿಂಗ್ ಸಾಹಸ ಈ ಪಂದ್ಯದ ಆಕರ್ಷಣೆಯಾಗಿತ್ತು. ಕೇವಲ 53 ಎಸೆತಗಳಲ್ಲಿ ಅವರು 102 ರನ್ ಹೊಡೆದಿದ್ದರು. ಅದರಲ್ಲಿಯೂ ಎರಡನೇ ಅರ್ಧಶತಕ ಕೇವಲ 12 ಎಸೆತಗಳಲ್ಲಿ ದಾಖಲಾಗಿತ್ತು. ಇದು ವಿಶ್ವದಾಖಲೆಯ ಸಾಧನೆಯಾಗಿದೆ. 7 ಬೌಂಡರಿ ಮತ್ತು 8 ಸಿಕ್ಸರ್ ಸಿಡಿಸಿದ ಅಲಿ ಏಳನೇ ವಿಕೆಟಿಗೆ ಕ್ರಿಸ್ ವೋಕ್ಸ್ ಜತೆ 117 ರನ್ನುಗಳ ಜತೆಯಾಟ ನಡೆಸಿದ್ದರು.
ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್ 9 ವಿಕೆಟಿಗೆ 369 (ಅಲೆಕ್ಸ್ ಹೇಲ್ಸ್ 36, ಜೋ ರೂಟ್ 84, ಬೆನ್ ಸ್ಟೋಕ್ಸ್ 73, ಮೊಯಿನ್ ಅಲಿ 102, ಕ್ರಿಸ್ ವೋಕ್ಸ್ 34, ಜಾಸನ್ ಹೋಲ್ಡರ್ 81ಕ್ಕೆ 2, ಮಿಗುಯಿಲ್ ಕಮಿನ್ಸ್ 82ಕ್ಕೆ 3); ವೆಸ್ಟ್‌ಇಂಡೀಸ್ 39.1 ಓವರ್‌ಗಳಲ್ಲಿ 245 (ಕ್ರಿಸ್ ಗೇಲ್ 94, ಶೈ ಹೋಪ್ 20, ಜಾಸನ್ ಮೊಹಮ್ಮದ್ 38, ಜಾಸನ್ ಹೋಲ್ಡರ್ 34, ಲಿಯಮ್ ಪ್ಲಂಕೆಟ್ 52ಕ್ಕೆ 5, ಅದಿಲ್ ರಶೀದ್ 34ಕ್ಕೆ 3).