ಜಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾಷಣದಿಂದ ಬಡಜನರ ಹೊಟ್ಟೆ ತುಂಬುವುದಿಲ್ಲ ಎಂದು ಶಾಸಕ ಎಚ್ .ಪಿ.ರಾಜೇಶ್ ಹೇಳಿದರು.ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಜನವೇದನಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಯಾವುದೇ ಜನಪರ ಯೋಜನೆಗಳನ್ನು ಕೈಗೊಳ್ಳದೇ ಬೃಹತ್ ಉದ್ಯಮಿಗಳಿಗೆ ಅನುಕೂಲವಾಗುವಂತೆ ನೋಟು ರದ್ದು ಮಾಡಿ ಬಡಜನರನ್ನು ಬೆತ್ತಲೆಗೊಳಿಸಿದೆ ಎಂದು ದೂರಿದರು. ಜಗಳೂರು ವಿಧಾನ ಸಭಾ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿದ್ದು, ನಾನೆಂದು ಪ್ರಚಾರಕ್ಕೆ ಅಂಟಿಕೊಂಡವನಲ್ಲ.
ಅಭಿವೃದ್ಧಿಪಡಿಸುವುದು ನನ್ನ ಕರ್ತವ್ಯ. ಆದರೆ ಒಂದು ಕೆಲಸವನ್ನು ಮಾಡಿ 100 ಬಾರಿ ಪ್ರಚಾರವನ್ನು ಗಿಟ್ಟಿಸಿಕೊಳ್ಳುವ ಬಿಜೆಪಿಯ ಜಿಲ್ಲಾ ಸಂಸದರು ಸುಳ್ಳಿನ ಆರೋಪ ಮಾಡುತ್ತಿರುವುದು ಅವರಿಗೆ ಶೋಭೆಯಲ್ಲ. ಕ್ಷೇತ್ರದಲ್ಲಿ ಕೆಲಸವನ್ನು ಪರಿಶೀಲಿಸಿ ಮಾತನಾಡಲಿ ಎಂದರು.
ರೇಷ್ಮೆ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಡಿ.ಬಸವರಾಜ್, ದಾವಣಗೆರೆ ಮಾಜಿ ನಗರ ಸಭಾ ಅಧ್ಯಕ್ಷ ಕೆ.ಜಿ.ಶಿವಕುಮಾರ್ ಮಾತನಾಡಿದರು. ರಾಜ್ಯ ಎಸ್.ಟಿ.ಘಟಕದ ಉಪಾಧ್ಯಕ್ಷ ಅರಸೀಕೆರೆ ದೇವೇಂದ್ರಪ್ಪ, ಜಿಲ್ಲಾ ಎಸ್ಟಿ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಪ್ಪೇಸ್ವಾಮಿಗೌಡ,
ಜಿಪಂ ಸದಸ್ಯೆ ಉಮಾ ವೆಂಕಟೇಶ್, ಅರಸೀಕರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಮ್ಮತ್ತಹಳ್ಳಿ ಮಂಜುನಾಥ್, ಎಸ್ಸಿ ಜಿಲ್ಲಾ ಉಪಾಧ್ಯಕ್ಷ ದೇವರಾಜ್, ಜಿಲ್ಲಾ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಬಿಸ್ತುವಳ್ಳಿ ಬಾಬು, ಹಿರಿಯ ಮುಖಂಡರಾದ ಯರಬಳ್ಳಿ ಉಮಾಪತಿ, ಇಸ್ಮಾಯಿಲ್, ಬಿಳಿಚೋಡು ಕರಿಬಸಪ್ಪ, ಅಶ್ರುಪುಲ್ಲಾ, ಕೇಶವಮೂರ್ತಿ ಇತರರಿದ್ದರು.