Advertisement

Narendra Modi: ಚೀನಾ ವಿರುದ್ಧ ಮೋದಿ ಪರೋಕ್ಷ ವಾಗ್ಧಾಳಿ

10:29 PM Sep 07, 2023 | Team Udayavani |
ಜಕಾರ್ತ: ಆಸಿಯಾನ್‌ ರಾಷ್ಟ್ರಗಳ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ, ಚೀನಾ ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿದ್ದಾರೆ. “ಎಲ್ಲಾ ದೇಶಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಬಲಪಡಿಸಲು ಜಂಟಿ ಪ್ರಯತ್ನಗಳ ಅಗತ್ಯವಿದೆ. ಮುಕ್ತ ಇಂಡೋ-ಫೆಸಿಫಿಕ್‌ ಪ್ರದೇಶ ಈಗಿನ ತುರ್ತಾಗಿದೆ. ಈ ಗುರಿಯನ್ನು ತಲುಪಲು ಆಸಿಯಾನ್‌ ರಾಷ್ಟ್ರಗಳೊಂದಿಗೆ ಕೆಲಸ ಮಾಡಲು ಭಾರತ ಸಿದ್ಧವಿದೆ’ ಎಂದು ಅವರು ಪ್ರತಿಪಾದಿಸಿದರು.
ಇಂಡೋನೇಷ್ಯಾ ರಾಜಧಾನಿ ಜಕಾರ್ತದಲ್ಲಿ ನಡೆಯುತ್ತಿರುವ ಆಸಿಯಾನ್‌ ಶೃಂಗಸಭೆ ಹಾಗೂ ಪೂರ್ವ ಏಷ್ಯಾ ಶೃಂಗಸಭೆ ಉದ್ದೇಶಿಸಿ ಮೋದಿ ಮಾತನಾಡಿದರು. ಇಂಡೋ-ಫೆಸಿಫಿಕ್‌ ಪ್ರದೇಶದಲ್ಲಿ ಚೀನಾ ತನ್ನ ಕಬಂಧಬಾಹುಗಳನ್ನು ವಿಸ್ತರಿಸುತ್ತಿರುವ ಈ ಸಂದರ್ಭದಲ್ಲಿ, ಮೋದಿಯ ಈ ಹೇಳಿಕೆ ಮಹತ್ವ ಪಡೆದಿದೆ. ಇತ್ತೀಚಿಗಷ್ಟೇ ದಕ್ಷಿಣ ಚೀನಾ ಸಮುದ್ರ ಪ್ರದೇಶವನ್ನು ಒಳಗೊಂಡಂತೆ ಚೀನಾದ ನೂತನ ನಕ್ಷೆ ಕುರಿತು ಭಾರತ ಸೇರಿದಂತೆ ದಕ್ಷಿಣ ಏಷ್ಯಾದ ಹಲವು ರಾಷ್ಟ್ರಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಅಲ್ಲದೇ, ಚೀನಾ ಅತಿಕ್ರಮಣತ್ವವನ್ನು ವಿರೋಧಿಸುವುದು ಈ ಶೃಂಗಸಭೆಯ ಪ್ರಮುಖ ಅಜೆಂಡಾಗಳಲ್ಲಿ ಒಂದಾಗಿದೆ ಎಂದು ವಿಶ್ಲೇಷಿಸಲಾಗಿದೆ.
“21ನೇ ಶತಮಾನ ಏಷ್ಯಾದ್ದಾಗಿದೆ. ಇದು ನಮ್ಮೆಲ್ಲರ ಶತಮಾನವಾಗಿದೆ. ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಆಸಿಯಾನ್‌ ರಾಷ್ಟ್ರಗಳು ಜಗತ್ತಿನ ಬೆಳವಣಿಗೆಗೆ ಶ್ರಮಿಸಿವೆ. ಕೊರೊನಾ ನಂತರದ ಪರಿಸ್ಥಿತಿಯಲ್ಲಿ ನಿಯಮ ಆಧಾರಿತ ವ್ಯವಸ್ಥೆ ರೂಪಿಸಬೇಕಿದೆ. ಮನುಕುಲದ ಒಳಿತಿಗಾಗಿ ಪ್ರತಿಯೊಬ್ಬರ ಪರಿಶ್ರಮದ ಜತೆಗೆ ಅಭಿವೃದ್ಧಿಯ ಪಥದಲ್ಲಿ ಸಾಗಲು ನಿಯಮಗಳನ್ನು ಪಾಲಿಸಬೇಕಾದ ಅಗತ್ಯವಿದೆ. ಜಾಗತಿಕ ಮಟ್ಟದಲ್ಲಿ ಅಸ್ಥಿರತೆ ಇದ್ದರೂ ಆಸಿಯಾನ್‌ ರಾಷ್ಟ್ರಗಳ ಸಹಕಾರದಿಂದ ಪ್ರಗತಿ ಕಾಣಬಹುದಾಗಿದೆ’ ಎಂದು ಹೇಳಿದರು.
“ಅಂತಾರಾಷ್ಟ್ರೀಯ ಕಾನೂನುಗಳಿಗೆ ಸಂಪೂರ್ಣವಾಗಿ ಬದ್ಧವಾಗಿರುವುದು ಅತ್ಯಗತ್ಯವಾಗಿದೆ. ಜತೆಗೆ ಎಲ್ಲಾ ದೇಶಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಬಲಪಡಿಸಲು, ಪ್ರತಿಯೊಂದು ರಾಷ್ಟ್ರದ ಬದ್ಧತೆ ಮತ್ತು ಜಂಟಿ ಪ್ರಯತ್ನಗಳು ಸಹ ಅಗತ್ಯವಾಗಿದೆ’ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.  “ಈ ಹಿಂದೆ ಹೇಳಿದಂತೆ, ಇದು ಯುದ್ಧದ ಯುಗವಲ್ಲ. ಮಾತುಕತೆ ಮತ್ತು ರಾಜತಾಂತ್ರಿಕತೆ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು ಏಕೈಕ ಮಾರ್ಗವಾಗಿದೆ’ ಎಂದು ಹೇಳಿದರು.
ಮೋದಿಗೆ ಅದ್ದೂರಿ ಸ್ವಾಗತ: ಇದಕ್ಕೂ ಮುನ್ನ ಶೃಂಗಸಭೆಗೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ ನೀಡಲಾಯಿತು. ಇದೇ ವೇಳೆ “ಚಂದ್ರಯಾನ-3’ರ ಯಶಸ್ಸಿಗಾಗಿ ಭಾರತವನ್ನು ಆಸಿಯಾನ್‌ ರಾಷ್ಟ್ರಗಳ ನಾಯಕರು ಅಭಿನಂದಿಸಿದರು.
ಮಾಯೆನ್ಮಾರ್‌ನಲ್ಲಿ ಹದಗೆಡುತ್ತಿರುವ ಬಿಕ್ಕಟ್ಟನ್ನು ಶಮನಗೊಳಿಸುವ ನಿಟ್ಟಿನಲ್ಲಿ ಏಕೀಕೃತ ಕಾರ್ಯತಂತ್ರವನ್ನು ರೂಪಿಸಲು ಜಾಗತಿಕ ಸಮುದಾಯವು ತುರ್ತಾಗಿ ಮುಂದಾಗಬೇಕು.
-ಆಂಟೊನಿಯೊ ಗುಟೆರೆಸ್‌, ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ 
Advertisement

Udayavani is now on Telegram. Click here to join our channel and stay updated with the latest news.

Next