ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಸೆ.17ರಿಂದ ಅ. 2ರವರೆಗೆ ರಾಜ್ಯಾದ್ಯಂತ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ, ಕೃತಕ ಕಾಲು ಜೋಡಣೆ, ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ ಸೇರಿದಂತೆ ವಿವಿಧ ಕಾರ್ಯಗಳ ಸೇವಾ ಪಾಕ್ಷಿಕ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದಂದು ಈ ಬಾರಿ ಮಠ-ದೇವಸ್ಥಾನಗಳಲ್ಲಿ ಪೂಜೆ, ಕೇಕ್ ಕತ್ತರಿಸುವ ಬದಲು ವಿವಿಧ ಸೇವಾ ಕಾರ್ಯ ಹಾಗೂ ಸ್ವತ್ಛತಾ ಕಾರ್ಯಗಳಿಗೆ ಒತ್ತು ನೀಡಲಾಗಿದೆ ಎಂದರು.
ಸೆ.17ರಂದು ಮೋದಿಯವರ ಜನ್ಮದಿನವಾಗಿದ್ದು, ಅಂದು ದೇಶಾದ್ಯಂತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಯುವಮೋರ್ಚಾದಿಂದ ಎಲ್ಲ ಕಡೆಗೆ ರಕ್ತದಾನ ಶಿಬಿರ ನಡೆಸಲಾಗುತ್ತಿದ್ದು, ರಾಜ್ಯದಲ್ಲಿ ಸುಮಾರು 18-20 ಸಾವಿರ ಯುನಿಟ್ ರಕ್ತ ಸಂಗ್ರಹ ಸೇರಿದಂತೆ ದೇಶಾದ್ಯಂತ ಸುಮಾರು 1.20 ಲಕ್ಷ ಯುನಿಟ್ ರಕ್ತ ಸಂಗ್ರಹ ಮೂಲಕ ಗಿನ್ನಿಸ್ ದಾಖಲೆ ನಿರ್ಮಾಣದ ಗುರಿ ಇದೆ. ಇಲ್ಲಿವರೆಗೆ ಒಂದೇ ದಿನದಲ್ಲಿ 61 ಸಾವಿರ ಯುನಿಟ್ ರಕ್ತ ಸಂಗ್ರಹದ ದಾಖಲೆ ಇದ್ದು, ಅದನ್ನು ಮೀರಿಸುವ ಉದ್ದೇಶ ಹೊಂದಿದ್ದೇವೆ ಎಂದು ಹೇಳಿದರು.
ಸೆ.17-18ರಂದು ರಾಜ್ಯದ 39 ಸಂಘಟನಾತ್ಮಕ ಜಿಲ್ಲೆಗಳು, 312 ಮಂಡಲಗಳಲ್ಲಿ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗುತ್ತದೆ. ಕೋವಿಡ್ ಬೂಸ್ಟರ್ ಲಸಿಕೆ ಅಭಿಯಾನವನ್ನು ಕೈಗೊಳ್ಳಲಾಗುತ್ತದೆ. ಸೆ.20-21ರಂದು ಮೋದಿಯವರ ಜೀವನ ಚರಿತ್ರೆ, ಸಾಧನೆಗಳ ಪ್ರದರ್ಶನ ನಡೆಯಲಿದೆ. ಸೆ.21-22ರಂದು ಯುವಮೋರ್ಚಾದಿಂದ ಹಿರಿಯ ನಾಗರಿಕರಿಗೆ ಸನ್ಮಾನ, ಅಂಗವಿಕಲರಿಗೆ ಕೃತಕ ಕಾಲುಗಳ ಜೋಡಣೆ, ಗಾಲಿ ಕುರ್ಚಿಗಳ ವಿತರಣೆ ನಡೆಯಲಿದೆ ಎಂದರು.
ಸೆ.24-25ರಂದು ದೀನದಯಾಳ ಉಪಾಧ್ಯಾಯರ ಜನ್ಮದಿನದ ಅಂಗವಾಗಿ ರಾಜ್ಯದ 58,126 ಬೂತ್ ಗಳಲ್ಲಿ ಕಾರ್ಯಕ್ರಮ ಆಯೋಜನೆ, ಪಕ್ಷದ ಕಾರ್ಯಕರ್ತರು, ಬೆಂಬಲಿಗರ ಮನೆಗಳ ಮೇಲೆ ಪಕ್ಷದ ಧ್ವಜಾರೋಹಣ, ಪ್ರಧಾನಿಯವರ ಮನ್‌ಕೀ ಬಾತ್ ಕಾರ್ಯಕ್ರಮದ ಪ್ರಸಾರ ಕಾರ್ಯಕ್ರಮ ನಡೆಯಲಿವೆ. ಸೆ.25-29ರವರೆಗೆ ಕೇಂದ್ರ-ರಾಜ್ಯ ಸರಕಾರಗಳ ಸೌಲಭ್ಯಗಳನ್ನು ಪಡೆದ ಫಲಾನುಭವಿಗಳ ಸಭೆ ನಡೆಸಲಾಗುತ್ತಿದ್ದು, ಪ್ರಧಾನಿಯವರಿಗೆ ಅಭಿನಂದನಾ ಪತ್ರ ಬರೆಯುವಂತೆ ಫಲಾನುಭವಿಗಳಿಗೆ ಮನವಿ ಮಾಡಲಾಗುತ್ತದೆ ಎಂದು ಹೇಳಿದರು.
ಸೆ.22-23ರಂದು ಅರಳಿಗಿಡ ನೆಡುವ ಕಾರ್ಯಕ್ರಮ, ಸೆ.26-27ರಂದು ಅಮೃತ ಸರೋವರಗಳ ಸ್ವತ್ಛತಾ ಕಾರ್ಯ, ಸೆ.30ರಂದು ರಾಜ್ಯಾದ್ಯಂತ ವಿದ್ಯಾರ್ಥಿಗಳಿಗೆ ಬ್ಯಾಗ್‌ಗಳ ವಿತರಣೆ, ಅ. 2ರಂದು ಗಾಂಧಿ ಜಯಂತಿ ದಿನದಂದು ಸ್ವತ್ಛತಾ ಕಾರ್ಯ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರಿಂದ ಖಾದಿ ಖರೀದಿ ರಾಜ್ಯಾದ್ಯಂತ ನಡೆಯಲಿದೆ ಎಂದರು.
ಮುಖಂಡರಾದ ಸಂಜಯ ಕಪಟಕರ, ಸಿದ್ದು ಮೊಗಲಿಶೆಟ್ಟರ, ವಿಜಯಾನಂದ ಶೆಟ್ಟಿ, ರವಿ ನಾಯ್ಕ ಇನ್ನಿತರಿದ್ದರು.
ಕರಪತ್ರದಲ್ಲಿ ಶೆಟ್ಟರ 7ರಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಭಾವಚಿತ್ರಕ್ಕಿಲ್ಲ ಜಾಗ
ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಸೆ.18ರಂದು ಇಲ್ಲಿನ ಮೂರುಸಾವಿರ ಮಠದ ಆವರಣದಲ್ಲಿ ಬಿಜೆಪಿ ಆಯೋಜಿಸಿರುವ ವೈದ್ಯಕೀಯ ತಪಾಸಣಾ ಶಿಬಿರದ ಕರಪತ್ರದಲ್ಲಿ ಮಾಜಿ ಮುಖ್ಯಮಂತ್ರಿ, ಹಿರಿಯ ನಾಯಕ ಜಗದೀಶ ಶೆಟ್ಟರ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷರ ಭಾವಚಿತ್ರಗಳೇ ಇಲ್ಲವಾಗಿದೆ. ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ ಗುರುವಾರ ಬಿಡುಗಡೆ ಮಾಡಿದ ಕರಪತ್ರದಲ್ಲಿ ಕೇವಲ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರ ಪ್ರಹ್ಲಾದ ಜೋಶಿ ಅವರ ಭಾವಚಿತ್ರ ಮಾತ್ರ ಇದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಗದೀಶ ಶೆಟ್ಟರ ವಹಿಸಲಿದ್ದಾರೆ ಎಂದಿದೆ. ಶೆಟ್ಟರ ಭಾವಚಿತ್ರ ಇಲ್ಲದಿರುವುದು ಬಿಜೆಪಿಯಲ್ಲಿ ಚರ್ಚೆಗೆ ಗುರಿಯಾಗಿದೆ ಎನ್ನಲಾಗುತ್ತಿದೆ.