Advertisement

ಮೋದಿ ಆಡಳಿತ ರೈತ ವಿರೋಧಿ

01:34 PM Apr 26, 2017 | |

ಹುಬ್ಬಳ್ಳಿ: ರೈತರ ನೆರವಿಗೆ ನಾವಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ಕೇಂದ್ರದಲ್ಲಿ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಅನಂತರದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆಯಲ್ಲಿ ಶೇ.26ರಷ್ಟು ಹೆಚ್ಚಳವಾಗಿದೆ.

Advertisement

ಇದು ಅವರ ರೈತವಿರೋಧಿ ನೀತಿಗೆ ಸಾಕ್ಷಿಯಾಗಿದೆ ಎಂದು ಭಾರತ ಕಿಸಾನ್‌ ಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಮಾಜಿ ಸಂಸದ ಹನನ್‌ ಮುಲ್ಲಾ ಆರೋಪಿಸಿದರು. ಇಲ್ಲಿನ ಆರ್‌.ಎನ್‌. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಆಯೋಜಿಸಿರುವ 16ನೇ ರಾಜ್ಯಮಟ್ಟದ ಸಮ್ಮೇಳನದ ಬಹಿರಂಗ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. 

ಪ್ರಧಾನಿ ಮೋದಿ ಲೋಕಸಭೆ ಚುನಾವಣೆ ವೇಳೆ ರೈತರ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ, ರೈತರ  ಹಿತ ಕಾಯುವ ಘೋಷಣೆ ಮಾಡಿದ್ದರು. ಅವರು ಅಧಿಕಾರಕ್ಕೆ ಬಂದು ಮೂರು ವರ್ಷವಾಗುತ್ತಿದ್ದರೂ ಯಾವುದೇ ಕ್ರಮ ಇಲ್ಲದೆ ರೈತರು ಕೋರ್ಟ್‌ ಮೆಟ್ಟಿಲೇರಿದಾಗ ಕೋರ್ಟ್‌ ಸರಕಾರಕ್ಕೆ ಛೀಮಾರಿ ಹಾಕಿತ್ತು.

ಮೋದಿ ರೈತರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇಶದಲ್ಲಿ ಇದುವರೆಗೆ 3.5 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿ ದಿನ ಸರಾಸರಿ 52 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಶೇ.26ರಷ್ಟು ಹೆಚ್ಚಳವಾಗಿದೆ. 

ವಿದೇಶದಲ್ಲಿನ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಜಮೆ ಮಾಡುವುದಾಗಿ ಹೇಳಿದ್ದ ಮೋದಿಯವರು ಇದುವರೆಗೂ 15 ಪೈಸೆ ಕೂಡ ಜಮಾ ಮಾಡಿಲ್ಲ ಎಂದು ಕುಟುಕಿದರು. ಬರದಿಂದ ರೈತರು ಕಂಗೆಟ್ಟಿದ್ದು, ಬೆಳೆ ನಷ್ಟ, ವಿಮಾ ಪರಿಹಾರ ಇನ್ನಿತರ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತಿಲ್ಲವಾಗಿದೆ.

Advertisement

ಕೃಷಿ ಉತ್ಪನ್ನಗಳಿಗೆ ಸಮರ್ಪಕ ಬೆಲೆ ಸಿಗುತ್ತಿಲ್ಲ. ಕೃಷಿ ಉತ್ಪನ್ನಗಳ ಬೆಲೆ ನಿಗದಿ ಇನ್ನಿತರ ವಿಚಾರವಾಗಿ ಎಂ.ಎಸ್‌. ಸ್ವಾಮಿನಾಥನ್‌ ಆಯೋಗ ನೀಡಿದ ವರದಿ ಜಾರಿಗೊಳ್ಳುತ್ತಿಲ್ಲ. ಸರಕಾರಗಳು ಬಹುರಾಷ್ಟ್ರೀಯ ಹಾಗೂ ಕಾರ್ಪೋರೇಟ್‌ ಕಂಪನಿಗಳ ದಲ್ಲಾಳಿ ರೀತಿ ಕಾರ್ಯ ಮಾಡುತ್ತಿವೆ ಆರೋಪಿಸಿದರು. 

ಉದ್ಯೋಗ ಖಾತ್ರಿ ಯೋಜನೆಯಲ್ಲಿಯೂ ಉದ್ಯೋಗಗಳನ್ನು ಕಡಿತಗೊಳಿಸಲಾಗಿದೆ. ಕೇಂದ್ರ ಸರಕಾರ ಯುವ ಜನತೆಗೆ ವರ್ಷಕ್ಕೆ 2 ಕೋಟಿ ಉದ್ಯೋಗ ಕಲ್ಪಿಸುವ ಭರವಸೆ ನೀಡಿತ್ತು. ಆದರೆ 1.35 ಲಕ್ಷ ಮಾತ್ರ ಉದ್ಯೋಗ ಸೃಷ್ಟಿಸಿದೆ. ಕಾರಿಡಾರ್‌ ಹೆಸರಿನಲ್ಲಿ ರೈತರಿಂದ ಬಲವಂತವಾಗಿ ಕೃಷಿ ಭೂಮಿ ವಶಪಡಿಸಿಕೊಳ್ಳಲಾಗುತ್ತಿದೆ.

ಕೇಂದ್ರ ಸರಕಾರ 2013ರ ಭೂಸ್ವಾಧೀನ ಕಾಯ್ದೆ ದುರ್ಬಲಗೊಳಿಸುವ ಪ್ರಯತ್ನ ಮಾಡಿದೆ. ಜೊತೆಗೆ ರಾಜ್ಯ ಸರಕಾರಗಳು ಇದಕ್ಕೆ ಹೊರತಾಗಿಲ್ಲ. ಸಂಘ-ಪರಿವಾರಗಳು ಗೋರಕ್ಷಣೆ ಹೆಸರಿನಲ್ಲಿ ಮಾನವ ಭಕ್ಷಣೆ ಮಾಡುತ್ತಿವೆ. ದೇಶದಲ್ಲಿ ಕೋಮುವಾದ, ಜಾತಿವಾದ ಬಿತ್ತುತ್ತಿದ್ದಾರೆ. ಜನರನ್ನು ಜಾತಿಯ ಹೆಸರಿನಲ್ಲಿ ಇಬ್ಭಾಗಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು. 

ಕೆಪಿಆರ್‌ಎಸ್‌ ಉಪಾಧ್ಯಕ್ಷ, ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಮಾತನಾಡಿ, 2022ರ ವೇಳೆಗೆ ನವ ಭಾರತ ನಿರ್ಮಾಣ ಮಾಡುವುದಾಗಿ ಕೇಂದ್ರ ಸರಕಾರ ಹೇಳುತ್ತಿದೆ. ಆದರೆ ದೇಶದಲ್ಲಿ ಶೇ.62ರಷ್ಟು ಜನಸಂಖ್ಯೆ ಕೃಷಿ ಪ್ರಧಾನವಾಗಿರುವಾಗ ಅದನ್ನು ಕಡೆಗಣಿಸಿ ನವ ಭಾರತ ನಿರ್ಮಾಣ ಅದೇಗೆ ಸಾಧ್ಯ ಎಂದು ಪ್ರಶ್ನಿಸಿದರಲ್ಲದೆ, ರೈತರ ಸಾಲಮನ್ನಾ ಮಾಡಿದರೆ ಆರ್ಥಿಕ ದಿವಾಳಿತನ ಬರಲಿದೆ ಎಂದು ಸರಕಾರ-ಅಧಿಕಾರಿಗಳು ಕಾಪೋìರೆಟ್‌ ಕಂಪನಿಗಳ ತೆರಿಗೆ ರದ್ದು ಮಾಡುತ್ತಿವೆ ಎಂದು ಆರೋಪಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next