ಕಾಸರಗೋಡು: ನಮಗೆ ಎಡ – ಐಕ್ಯರಂಗಗಳು ಬೇಡ. ನಮಗೆ ಮೋದಿಜಿಯವರ ಕೇಂದ್ರ ಸರಕಾರದ ಯೋಜನೆಗಳು ಬೇಕಾಗಿವೆ. ಪಶ್ಚಿಮ ಬಂಗಾಳದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಈ ಬಾರಿ ಅಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಕೇರಳದ ಜನರು ಪ್ರಬುದ್ಧರಾಗಿದ್ದು ಇದರಿಂದ ಇಲ್ಲಿಯೂ ಬದಲಾವಣೆಯುಂಟಾಗಿಲಿದೆ ಎಂದು ಕರ್ನಾಟಕ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಾಸರಗೋಡು ಜಿಲ್ಲಾ ಕಚೇರಿಯಲ್ಲಿ ಜರಗಿದ ಕಾಸರಗೋಡು ವಿಧಾನಸಭಾ ಕ್ಷೇತ್ರದ ಮಹಿಳಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ರೀತಿಯ ಬದಲಾವಣೆಯಲ್ಲಿ ಮಹಿಳೆಯರ ಪಾತ್ರ ಮಹತ್ತರವಾದುದು. ಸಾಮಾಜಿಕ ಬದಲಾವಣೆ ಸ್ತ್ರೀಯರಿಂದ ಸಾಧ್ಯವಿದೆ. ಮಹಿಳೆಯರು ಮನಸ್ಸು ಮಾಡಿದರೆ ಮನೆಯಿಂದ ಪ್ರಾರಂಭಿಸಿ ಇಡೀ ರಾಜ್ಯದಲ್ಲಿ ಬದಲಾವಣೆಯನ್ನುಂಟು ಮಾಡಬಹುದಾಗಿದೆ ಎಂದು ಕರ್ನಾಟಕ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಗ್ರಾಮೀಣ ವಿದ್ಯುತ್ ಯೋಜನೆ, ಉಚಿತ ಅಡುಗೆ ಅನಿಲ, ಕಿಸಾನ್ ಸಮ್ಮಾನ್ ಯೋಜನೆ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಕೇಂದ್ರ ಸರಕಾರವು ರಾಜ್ಯಕ್ಕೆ ಅಪಾರ ಅನುದಾನ ನೀಡಿದೆ. ಕೇರಳದಲ್ಲಿರುವ ಕೋವಿಡ್ ಬಾಧಿತರಿಗೆ ಕೇಂದ್ರ ಸರಕಾರವು ಭಾರೀ ಮೊತ್ತದ ಸಹಾಯಧನವನ್ನು ನೀಡಿದೆ ಎಂದು ಅವರು ವಿವರಿಸಿದರು. ಕಾಸರಗೋಡು ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಕೆ.ಶ್ರೀಕಾಂತ್ ಅವರ ಗೆಲುವಿಗಾಗಿ ಮಹಿಳೆಯರು ಪಣ ತೊಡಬೇಕೆಂದು ಕರೆ ನೀಡಿದರು.
ಮಹಿಳಾ ಮೋರ್ಚಾ ಕಾಸರಗೋಡು ಮಂಡಲಾಧ್ಯಕ್ಷೆ ರಜನಿ ಸಂದೀಪ್ ಅಧ್ಯಕ್ಷತೆ ವಹಿಸಿದ್ದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಮಂಗಳೂರು ಉತ್ತರ ಶಾಸಕ ಡಾ.ಭರತ್ ವೈ.ಶೆಟ್ಟಿ, ನೇತಾರರಾದ ಸತೀಶ್ ಕುಂಪಲ, ಎಂ.ಸುಧಾಮ ಗೋಸಾಡ, ಎಂ.ಜನನಿ, ಶೈಲಜಾ ಎಂ.ಭಟ್, ಹರೀಶ್ ನಾರಂಪಾಡಿ, ಪಿ.ಆರ್.ಸುನೀಲ್, ಸುಕುಮಾರ ಕುದ್ರೆಪ್ಪಾಡಿ, ಎಂ.ಹರಿಶ್ಚಂದ್ರ ಮಂಜೇಶ್ವರ, ಸವಿತಾ ಟೀಚರ್ ಮೊದಲಾದವರು ಉಪಸ್ಥಿತರಿದ್ದರು. ಪುಷ್ಪಾ ಗೋಪಾಲನ್ ಸ್ವಾಗತಿಸಿ, ಗೀತಾ ವಂದಿಸಿದರು.