Advertisement

ಕೋಮುಗಲಭೆ ಸೃಷ್ಟಿಗೆ ಮೋದಿ ಆದ್ಯತೆ: ರಾಹುಲ್‌ ಗಾಂಧಿ

06:55 AM Aug 17, 2017 | Team Udayavani |

ಬೆಂಗಳೂರು: “ಪ್ರಧಾನಿ ನರೇಂದ್ರ ಮೋದಿ ಕೋಮು ಗಲಭೆ ಸೃಷ್ಟಿಸಿ, ಅಭಿವೃದ್ಧಿ ವಿಷಯದಲ್ಲಿ ಸುಳ್ಳು ಭರವಸೆಗಳನ್ನು ಕೊಟ್ಟು ದೇಶದ ಜನತೆಯ ದಿಕ್ಕು ತಪ್ಪಿಸುತ್ತಿದ್ದಾರೆ. ಕಳೆದ ಮೂರೂವರೆ ವರ್ಷದಿಂದ ಅವರು ಯುಪಿಎ ಸರ್ಕಾರದ ಯೋಜನೆಗಳ ಹೆಸರು ಬದಲಾಯಿಸಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ’ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

Advertisement

ಬೆಂಗಳೂರಿನ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಸಾರ್ಥಕ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಮೋದಿಯ ನಿಲುವುಗಳನ್ನು ಕಟುವಾಗಿ ಟೀಕಿಸಿದರು. ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಪ್ರಧಾನಿ ಮಾತನಾಡುವಾಗ, “ನಿರುದ್ಯೋಗ ಸಮಸ್ಯೆ, ಸಾಮಾನ್ಯ ಜನರ ಆರೋಗ್ಯ ರಕ್ಷಣೆ, ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಮಕ್ಕಳ ಸಾವಿನ ಬಗ್ಗೆ ಪ್ರಸ್ತಾಪ ಮಾಡಲಿಲ್ಲ. ಕಳೆದ ವರ್ಷ ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿಯೇ ಅತಿ ಉದ್ದವಾದ ಭಾಷಣ ಮಾಡಿದ್ದರು. ಈ ವರ್ಷ ಅದರ ಅರ್ಧದಷ್ಟು ಭಾಷಣ ಮಾಡಿದ್ದಾರೆ. ಮುಂದಿನ ವರ್ಷ 15 ನಿಮಿಷಕ್ಕೆ ನಿಲ್ಲಿಸುತ್ತಾರೆ. ಆಮೇಲೆ ಪ್ರಧಾನಿಗೆ ದೇಶದ ಬಗ್ಗೆ ಹೇಳಲಿಕ್ಕೆ ಏನೂ ಇರುವುದಿಲ್ಲ. ಪ್ರಧಾನಿ ಸ್ವತ್ಛ ಭಾರತದ ಬಗ್ಗೆ ಮಾತನಾಡುತ್ತಾರೆ. ಆದರೆ, ನಾವು ಸತ್ಯ ಭಾರತದ ಬಗ್ಗೆ ಮಾತನಾಡುತ್ತೇವೆ. ಅವರಿಗೆ ಸತ್ಯದ ಬಗ್ಗೆ ನಂಬಿಕೆ ಇಲ್ಲ ‘ ಎಂದು ವಾಗ್ಧಾಳಿ ನಡೆಸಿದರು.

ಮೋದಿ ಅಧಿಕಾರಕ್ಕೆ ಬಂದ ತಕ್ಷಣ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಠಿಸುವುದಾಗಿ ಹೇಳಿದ್ದರು. ಆದರೆ, ಕಳೆದ ವರ್ಷ ಒಂದು ಲಕ್ಷಕ್ಕಿಂತಲೂ ಕಡಿಮೆ ಉದ್ಯೋಗ ಸೃಷ್ಠಿಸಿದ್ದಾರೆ. ಕರ್ನಾಟಕ ರಾಜ್ಯವೊಂದೇ 30 ಸಾವಿರ ಉದ್ಯೋಗ ಸೃಷ್ಠಿಸಿದೆ. ಕರ್ನಾಟಕ ಸರ್ಕಾರ ರೈತರ ಸಾಲ ಮನ್ನಾ ಮಾಡುವ ವಿಷಯದಲ್ಲಿ ನನ್ನೊಂದಿಗೆ ಚರ್ಚಿಸಿದ 48 ಗಂಟೆಯಲ್ಲಿಯೇ ನಿರ್ಧಾರ ತೆಗೆದುಕೊಂಡು ರೈತರ ನೆರವಿಗೆ ಧಾವಿಸಿದೆ. ಅದೇ ರೀತಿ ಪಂಜಾಬ್‌ ಸರ್ಕಾರ ಕೂಡ ರೈತರ ಸಾಲ ಮನ್ನಾ ಮಾಡುವ ನಿರ್ಧಾರ ಮಾಡಿತು ಎಂದರು.

ಆದರೆ, ಉತ್ತರ ಪ್ರದೇಶ ಸರ್ಕಾರ ಸಾಲ ಮನ್ನಾ ಮಾಡಲು ನಾವು ಸಾಕಷ್ಟು ಹೋರಾಟಗಳನ್ನು ಮಾಡಬೇಕಾಯಿತು. ಲೋಕಸಭೆಯಲ್ಲೂ ಕಾಂಗ್ರೆಸ್‌ ಹೋರಾಟ ಮಾಡಿತು. ಆದರೆ, ಕೇಂದ್ರದ ಹಣಕಾಸು ಸಚಿವ ಅರುಣ್‌ ಜೇಟ್ಲಿ ಸಾಲ ಮನ್ನಾ ಮಾಡಲು ನಿರಾಕರಿಸಿದರು. ಆದರೆ, ನಮ್ಮ ಹೋರಾಟಕ್ಕೆ ಮಣಿದು ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಸರ್ಕಾರ ಸಾಲ ಮನ್ನಾ ಮಾಡುವ ಘೋಷಣೆ ಮಾಡಿದವು ಎಂದರು.

ವಿದೇಶಾಂಗ ನೀತಿ ವಿಫ‌ಲ: ವಿದೇಶಾಂಗ ನೀತಿಯಲ್ಲಿಯೂ ಕೇಂದ್ರ ಸರ್ಕಾರ ವಿಫ‌ಲವಾಗಿದೆ. ಕೇಂದ್ರದ ತಪ್ಪು ನೀತಿಯಿಂದಾಗಿ ಡೋಕ್ಲೋಮಾದಲ್ಲಿ ಚೀನಾ ಸೈನಿಕರು ಗಡಿ ಪ್ರವೇಶಿಸುವಂತಾಗಿದೆ. ನಮ್ಮ ಪ್ರಧಾನಿ ಚೀನಾ ಪ್ರಧಾನಿಯನ್ನು
ಕರೆದು ಅಪ್ಪಿಕೊಳ್ಳುತ್ತಾರೆ. ಅದೇ ಸಮಯದಲ್ಲಿ ಸಾವಿರಕ್ಕೂ ಹೆಚ್ಚು ಚೀನಾ ಸೈನಿಕರು ಗಡಿಯೊಳಗೆ ನುಸುಳಿದ್ದಾರೆ. ಕಾಶ್ಮೀರ ವಿಷಯದಲ್ಲಿಯೂ ಬಿಜೆಪಿ ಯಾವಾಗಲೂ ಅಲ್ಲಿ ದ್ವೇಷದ ವಾತಾವರಣ ಇರುವಂತೆ ನೋಡಿಕೊಳ್ಳುತ್ತಿದೆ. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ 10 ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ನೋಡಿಕೊಂಡು ಬಂದಿತ್ತು. ಮೋದಿ ಬಂದು ಒಂದೇ ದಿನದಲ್ಲಿ ವಾತಾವರಣವನ್ನು ಹಾಳು ಮಾಡಿದರು ಎಂದರು.’

Advertisement

ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರಷ್ಯಾ ದೇಶ ಪಾಕಿಸ್ತಾನಕ್ಕೆ ಆಯುಧಗಳನ್ನು ಪೂರೈಸುವಂತಹ ಪ್ರಸಂಗ ನಿರ್ಮಿಸಿದೆ. ಭಾರತ ಹಾಗೂ ಭೂತಾನ್‌ ಯಾವಾಗಲೂ ಸ್ನೇಹದಿಂದ ಇದ್ದು, ಭೂತಾನ್‌ಗೆ ಏನಾದರೂ ಸಮಸ್ಯೆಯಾದರೆ, ಭಾರತ ಅವರ ರಕ್ಷಣೆಗೆ ಇರುತ್ತದೆ ಎಂದು ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲಾಗಿದೆ. ಈಗ ಚೀನಾ ಸೈನಿಕರು ಭೂತಾನ್‌ ಗಡಿ ಪ್ರವೇಶ ಮಾಡಿದ್ದೇಕೆ ಎಂಬುದನ್ನು ಮೋದಿ ದೇಶದ ಜನತೆಗೆ ತಿಳಿಸಬೇಕು. 
– ರಾಹುಲ್‌ ಗಾಂಧಿ,
ಎಐಸಿಸಿ ಉಪಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next