ಬಾಗಲಕೋಟೆ: “ಪ್ರಧಾನಿ ಮೋದಿ ವಿಶ್ವ ಪರ್ಯಟನೆ ಮಾಡಿದ್ದಾರೆ. ಈಗ ಉಳಿದಿರುವುದು ಮಂಗಳ, ಚಂದ್ರಲೋಕ ಮಾತ್ರ. ಅನೇಕ ರಾಷ್ಟ್ರಗಳಿಗೆ ಭೇಟಿ ಕೊಡುವ ಪ್ರಧಾನಿ, ಚಂದ್ರ ಯಾನ ವೀಕ್ಷಣೆಗೆ ಬೆಂಗಳೂರಿಗೆ ಬಂದರೂ ರಾಜ್ಯ ದ ಪ್ರವಾಹ ಪರಿಸ್ಥಿತಿ ಕುರಿತು ಜನರ ಕಷ್ಟ ಕೇಳಲಿಲ್ಲ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ರಾಜಧಾನಿಗೆ ಬಂದರೂ ಪ್ರವಾಹ ಸಂತ್ರಸ್ತರು ಇದ್ದೀರೋ, ಸತ್ತಿದ್ದೀರೋ, ನೀರಲ್ಲಿ ಮುಳುಗಿದವರು ಹೊರಗಡೆ ಬಂದಿದ್ದೀರೋ, ಇಲ್ಲವೋ ಎಂದೂ ಕೇಳಲಿಲ್ಲ. ಕನಿಷ್ಟ ಪಕ್ಷ ರಾಜ್ಯದ ನಾಯಕರನ್ನು ಕರೆಸಿ ಪರಿಸ್ಥಿತಿ ಅವಲೋಕಿಸಲಿಲ್ಲ. ಅವರ ಮುಖ್ಯಮಂತ್ರಿಯನ್ನೂ ಕರೆಸಿಕೊಳ್ಳಲಿಲ್ಲ ಎಂದರು. ವಿಧಾನಸಭೆಯಲ್ಲಿ ಮಾಧ್ಯಮಗಳನ್ನು ಹೊರಗಿಟ್ಟಿದ್ದು ಸರಿಯಲ್ಲ.
ಮಾಧ್ಯಮ ಸ್ವಾತಂತ್ರದ ಹಕ್ಕನ್ನು ಮೊಟಕು ಮಾಡುವ ಕೆಲಸವಿದು. ವಿಧಾನಪರಿಷತ್‌ನಲ್ಲಿ ನಮ್ಮ ಸಭಾಪತಿಗಳು ಎಲ್ಲ ಮಾಧ್ಯಮದವರಿಗೆ ಅವಕಾಶ ಕಲ್ಪಿಸಿದ್ದಾರೆ. ಜನರಿಂದ ಆಯ್ಕೆಯಾದ ನಾವು, ಜನರ ಒಳಿತಿಗಾಗಿ ಹೇಗೆ ಕೆಲಸ ಮಾಡುತ್ತೇವೆ ಎನ್ನುವುದು ಜನತೆ ಗಮನಿಸುತ್ತಾರೆ. ಮಾಧ್ಯಮಗಳ ಕಣ್ಣಿಗೆ ಬಟ್ಟೆ ಕಟ್ಟಿ ಹೊರಗಿಡುವುದು ಸರಿಯಲ್ಲ ಎಂದರು.
2ನೇ ಬಾರಿಗೆ ನನ್ನನ್ನು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನ್ನಾಗಿ ಹೈಕಮಾಂಡ್ ಆಯ್ಕೆ ಮಾಡಿದೆ. ಸಿದ್ದರಾಮಯ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿದ್ದಾರೆ. ವಿಧಾನಸಭೆ, ವಿಧಾನಪರಿಷತ್ ವಿರೋಧ ಪಕ್ಷಗಳ ನಾಯಕ ಸ್ಥಾನಗಳು ಬಾಗಲಕೋಟೆ ಜಿಲ್ಲೆಗೆ ಸಿಕ್ಕಿರುವುದು ಚರಿತ್ರಾರ್ಹ.
-ಎಸ್.ಆರ್. ಪಾಟೀಲ, ವಿಧಾನ ಪರಿಷತ್ ವಿಪಕ್ಷ ನಾಯಕ