Advertisement

ಮೋದಿ, ನಮ್ಮ ಸಂಸ್ಕೃತಿ-ಸಂಪ್ರದಾಯದ ಪ್ರತೀಕ

10:05 AM Jan 20, 2020 | Lakshmi GovindaRaj |

ಬೆಂಗಳೂರು: ಭಾರತೀಯ ಸಂಸ್ಕೃತಿಯ ಬಾವುಟವನ್ನು ವಿಶ್ವಮಟ್ಟದಲ್ಲಿ ಎತ್ತಿ ಹಿಡಿಯುವ ಪ್ರಧಾನಿ ನಮಗೆ ಸಿಕ್ಕಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಂಡಾಡಿದರು. ನಗರದ ಅರಮನೆ ಮೈದಾನದಲ್ಲಿ ವೇದಾಂತ ಭಾರತಿ ಸಂಸ್ಥೆ ಶನಿವಾರ ಹಮ್ಮಿಕೊಂಡಿದ್ದ ವಿವೇಕಾ ದೀಪಿನಿ ಮಹಾಸಮರ್ಪಣೆ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ಶಾ ಅವರ ಭಾಷಣದ ಭಾವಲಹರಿ ಹೀಗಿತ್ತು…

Advertisement

ಮೋದಿ ಗುಣಗಾನ
* ಬಹಳ ವರ್ಷಗಳ ನಂತರ ನಮಗೆ ಭಾರತೀಯ ಸಂಸ್ಕೃತಿಯ ಧ್ವಜವನ್ನು ವಿಶ್ವದಲ್ಲಿ ಎತ್ತಿ ಹಿಡಿಯುವ ಪ್ರಧಾನಿ ಸಿಕ್ಕಿದ್ದಾರೆ.

* ದೇಶದ ಯಾವ ಪ್ರಧಾನಿಯೂ ಪ್ರಮಾಣವಚನ ಪೂರ್ವದಲ್ಲಿ ಕಾಶಿಯಲ್ಲಿ ಗಂಗಾರತಿ ಮಾಡಿ, ನಂತರ, ಪ್ರಮಾಣವಚನ ಸ್ವೀಕಾರ ಮಾಡಿದ ಉದಾಹರಣೆ ಇಲ್ಲ. ಆದರೆ, ಮೋದಿಯವರು ಪ್ರಮಾಣವಚನ ಸ್ವೀಕಾರಕ್ಕೆ ಮೊದಲು ವಾರಣಾಸಿಯಲ್ಲಿ ಗಂಗಾರತಿ ಮಾಡುವ ಸಂಪ್ರದಾಯ ಪಾಲನೆ ಮಾಡಿದರು.

* ಮೋದಿಯವರು ನಮ್ಮ ದೇಶದ ಸಂಸ್ಕೃತಿ, ಪರಂಪರೆಯನ್ನು ವಿಶ್ವಕ್ಕೆ ತಿಳಿಸುವ ಸಂದೇಶವಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ಸಂಸ್ಕೃತಿಯ ವಾಹಕರಾಗಿ ಪ್ರಪಂಚ ಪರ್ಯಟಣೆ ಮಾಡುತ್ತಿದ್ದಾರೆ. ಇದರಿಂದ ವಿಶ್ವವೇ ಭಾರತವನ್ನು ಗುರುತಿಸುವಂತೆ ಮಾಡಿದ್ದಾರೆ ಹಾಗೂ ಭಾರತೀಯತೆ ಏನು ಎಂಬುದನ್ನು ತೋರಿಸಿ ಕೊಡುತ್ತಿದ್ದಾರೆ.

ಲಕ್ಷ ವಿದ್ಯಾರ್ಥಿಗಳಿಂದ ವಿವೇಕಾ ದೀಪಿನೀ ಪಠಣ: ವೇದಾಂತ ಭಾರತಿ ಸಂಸ್ಥೆ ಅರಮನೆ ಮೈದಾನದಲ್ಲಿ ಹಮ್ಮಿ ಕೊಂಡಿದ್ದ ವಿವೇಕಾ ದೀಪಿನೀ ಮಹಾಸಮರ್ಪಣೆ ಕಾರ್ಯಕ್ರಮ ದಲ್ಲಿ ನಗರದ ಸಾವಿರಕ್ಕೂ ಅಧಿಕ ಶಾಲೆಯ ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಏಕಕಾಲದಲ್ಲಿ ಸುಮಾರು 12 ನಿಮಿಷಗಳ ಕಾಲ ವಿವೇಕಾ ದೀಪಿನೀ ಪಠಣ ಮಾಡಿದರು. ನಗರದ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ಶೈಕ್ಷಣಿಕ ವರ್ಷದ ಆರಂಭದಿಂದಲೇ ದಿನಕ್ಕೆ 15 ನಿಮಿಷದಂತೆ ಅಥವಾ ವಾರದಲ್ಲಿ ಒಂದು ಅಥವಾ ಎರಡು ಭಾರಿ ವಿವೇಕಾ ದೀಪಿನೀಯನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡಲಾಗುತ್ತಿತ್ತು. ಕನ್ನಡ ಮತ್ತು ಇಂಗ್ಲಿಷ್‌ ಸೇರಿ ವಿವಿಧ ಭಾಷೆಗಳಲ್ಲಿ ಮುದ್ರಿಸಿರುವ ವಿವೇಕಾ ದೀಪಿನೀ ಯನ್ನು ವಿದ್ಯಾರ್ಥಿಗಳಿಗೆ ಹಂಚಲಾಗಿತ್ತು.

Advertisement

ಆದಿ ಶಂಕರಾಚಾರ್ಯರ ಸ್ಮರಣೆ
* ಹಿಂದೂ ಧರ್ಮದಲ್ಲಿನ ಮತಾಂತರ, ಒಳ ಸಂಘರ್ಷ ಹಾಗೂ ಅನೇಕ ವರ್ಷಗಳ ಕೆಟ್ಟ ಪದ್ಧತಿಗಳನ್ನು ಹೋಗಲಾಡಿಸಿ, ಎಲ್ಲರನ್ನೂ ಸರಿದಾರಿಯಲ್ಲಿ ಕರೆದೊಯ್ಯುವ ಪ್ರಯತ್ನವನ್ನು ಆದಿ ಶಂಕರಾಚಾರ್ಯರು ಮಾಡಿದ್ದರು. ಆದಿ ಶಂಕರಾಚಾರ್ಯರು ತಮ್ಮ ಅಲ್ಪಾವಧಿಯ ಜೀವನದಲ್ಲಿ ಹಿಂದೂ ಧರ್ಮದ ಕೆಟ್ಟ ಆಚರಣೆಗಳನ್ನು ದೂರ ಮಾಡಿ, ಧರ್ಮವನ್ನು ಮುನ್ನಡೆಸುವ ಕಾರ್ಯ ಮಾಡಿದ್ದಾರೆ. ದೇವರನ್ನು ಕಾಣುವ ಮುಕ್ತಿ ಮಾರ್ಗ ಒಂದೇ ಎಂಬುದನ್ನು ಸಾರಿ ಹೇಳಿದ್ದಾರೆ.

* ಆದಿ ಶಂಕರಾಚಾರ್ಯರು ದೇಶವನ್ನು 7 ಬಾರಿ ಕಾಲ್ನಡಿಗೆಯಲ್ಲಿ ಸಂಚಾರ ಮಾಡಿದ್ದಾರೆ. ಲೋಕಕಲ್ಯಾಣಕ್ಕಾಗಿ ದೇಶದ ನಾಲ್ಕು ಮೂಲೆಗಳಲ್ಲಿ ನಾಲ್ಕು ಮಠಗಳ ಸ್ಥಾಪನೆ ಮಾಡಿದ್ದಾರೆ. ಈಗಿನ ಉತ್ತರಾಖಂಡ್‌ನ‌ಲ್ಲಿರುವ ಜೋರ್ತಿಮಠ, ದ್ವಾರಕಾದ ಕಲಿಕಾಪೀಠ, ಶೃಂಗೇರಿ ಶಾರದಾಪೀಠ, ಪುರಿಯಲ್ಲಿ ಗೋವರ್ಧನ ಪೀಠ ಸ್ಥಾಪನೆ ಮಾಡಿದ್ದರು. ಆದಿ ಶಂಕರಾಚಾರ್ಯರ ಅನೇಕ ಗ್ರಂಥಗಳು ಇಂದಿಗೂ ಪ್ರಸ್ತುತವಾಗಿವೆ. ಭಕ್ತಿ ಮಾರ್ಗದ ಮೂಲಕವೂ ಮುಕ್ತಿ ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ.

* ವಿಶ್ವದ ಎಲ್ಲ ಸಮಸ್ಯೆಗಳಿಗೂ ಶಂಕರಾಚಾರ್ಯರ ಪ್ರಶ್ನೋತ್ತರ ರತ್ನಮಾಲಿಕೆಯಲ್ಲಿ ಪರಿಹಾರ ಸಿಗುತ್ತದೆ. ಶಂಕರರು ಜ್ಞಾನ ಮಾರ್ಗವನ್ನು ತೋರಿಸಿ ಕೊಟ್ಟಿದ್ದಾರೆ. ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯೋಣ.

* ಜ್ಞಾನದ ಮಾರ್ಗವನ್ನು ಪ್ರತಿಯೊಬ್ಬರಿಗೂ ತಲುಪಿಸುವ ಮತ್ತು ಆದಿಶಂಕರಾಚಾರ್ಯರ ಪರಂಪರೆಯನ್ನು ಮುಂದುವರಿಸುವ ಕಾರ್ಯವನ್ನು “ವೇದಾಂತ ಭಾರತಿ’ ಮಾಡುತ್ತಿದೆ. ಎರಡು ಲಕ್ಷಕ್ಕೂ ಅಧಿಕ ಮಕ್ಕಳು ಏಕಕಾಲದಲ್ಲಿ ವಿವೇಕಾದೀಪಿನೀಯನ್ನು ಉಚ್ಛಾರ ಮಾಡಬಹುದಾದ ಅತ್ಯುತ್ತಮ ವಾತಾವರಣವನ್ನು ಈ ಸಂಸ್ಥೆ ನಿರ್ಮಾಣ ಮಾಡಿದೆ. ಶಂಕರಾಚಾರ್ಯರ ಪ್ರಶ್ನೋತ್ತರ ರತ್ನ ಮಾಲಿಕೆಯನ್ನು ಅತ್ಯಂತ ಸರಳ ರೂಪದಲ್ಲಿ ವಿವೇಕಾದೀಪಿನೀಯಲ್ಲಿ ರೂಪಿಸಲಾಗಿದೆ.

* ಒಂದೇ ಸ್ಥಳದಲ್ಲಿ, ಒಂದೇ ಸ್ವರದಲ್ಲಿ, ಲಕ್ಷಕ್ಕೂ ಅಧಿಕ ಮಕ್ಕಳು ಶ್ಲೋಕ ಉಚ್ಛಾರಣೆ ಮಾಡುವುದನ್ನು ಕೇಳಿದರೆ ಮನಸ್ಸು ತುಂಬಿ ಬರುತ್ತದೆ. ಹೃದಯ ಸ್ವಚ್ಛವಾಗುತ್ತದೆ. ಆದಿ ಶಂಕರಾಚಾರ್ಯರ ಪ್ರಶ್ನೋತ್ತರ ರತ್ನಮಾಲಿಕೆಯನ್ನು ಅಭ್ಯಾಸ ಮಾಡುವುದರಿಂದ ನಮ್ಮ ಜೀವನವೇ ಬದಲಾಗುತ್ತದೆ. ಈ ಶ್ಲೋಕಗಳ ಒಳಾರ್ಥ ತಿಳಿಯಬೇಕು. ಅದರಿಂದ ನಾವು ಎಂದೂ ಕೆಟ್ಟ ಹಾದಿ ತುಳಿಯುವುದಿಲ್ಲ. ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ. ಇದರಿಂದ ಜೀವನದ ಉದ್ದೇಶ ಸಾರ್ಥಕವಾಗುತ್ತದೆ.

* ಇಂದಿನ ದಿನಗಳಲ್ಲಿ ಆಧ್ಯಾತ್ಮಿಕ ಪ್ರಸ್ತುತತೆಯನ್ನು ಅರಿತ ಪ್ರಧಾನಿ ಮೋದಿಯವರು, ಪ್ರಶ್ನೋತ್ತರ ರತ್ನ ಮಾಲಿಕೆಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಮೂಲಕ ದೇಶದ 24 ಭಾಷೆಗಳಲ್ಲಿ ಅನುವಾದಿಸುವ ಕಾರ್ಯ ಮಾಡಿದ್ದಾರೆ.

ರಾಜ್ಯದ ಶಾಲೆಗಳಲ್ಲಿ ವಿವೇಕಾ ದೀಪಿನೀ ಬೋಧಿಸಲು ಸರ್ಕಾರ ಅನುಮತಿ ನೀಡಿದೆ. ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳಾಗಿ ಬೆಳೆಯಲು ನೈತಿಕ ಶಿಕ್ಷಣದ ಅವಶ್ಯವಿದೆ. ವೇದಾಂತ ಭಾರತಿ ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ನೈತಿಕತೆ ಕಲಿಸುತ್ತಿರುವುದನ್ನು ಸ್ವಾಗತಿಸುತ್ತೇನೆ.
-ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

ಸಮಾಜವನ್ನು ಉತ್ತಮ ದಾರಿಯಲ್ಲಿ ಕೊಂಡೊಯ್ಯಲು ವಿವೇಕಾ ದೀಪಿನೀ ಸಹಾಯವಾಗಲಿದೆ. ಸಮಾಜದ ಪ್ರತಿಯೊಬ್ಬರೂ ಇದನ್ನು ಜೀವನಪೂರ್ತಿ ಅಳವಡಿಸಿ ಕೊಳ್ಳಬೇಕಿದೆ. ವಿದ್ಯಾರ್ಥಿಗಳು ವೇದ-ಉಪನಿಷತ್ತು ಹಾಗೂ ವಿವೇಕಾ ದೀಪಿನೀಯನ್ನು ಪಠಣ ಮಾಡಿದರೆ ಸಾಲದು. ಜೀವನದಲ್ಲಿ ಅಳವಡಿಸಿಕೊಂಡಾಗ ಸಾರ್ಥಕತೆ ಕಾಣಲಿದೆ.
-ಶಂಕರಭಾರತೀ ಸ್ವಾಮೀಜಿ, ಕೆ.ಆರ್‌.ನಗರದ ಯಡತೊರೆ -ಯೋಗಾನಂದೇಶ್ವರ ಸರಸ್ವತಿ ಮಠದ ಪೀಠಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next