ದಾಂಡೇಲಿ : ಕೇವಲ ಉಚಿತವಾಗಿ ನೀಡುವಂತಹ ವಸ್ತುಗಳ ಆಸೆಯಿಂದ ಜನಪ್ರತಿನಿಧಿಗಳ ಆಯ್ಕೆ ಮಾಡುತ್ತಿರುವುದು ದುರ್ದೈವದ ಸಂಗತಿ ಕರ್ನಾಟಕ ಸರಕಾರದ ಬಿಟ್ಟಿ ಭಾಗ್ಯದಿಂದ ರಾಜ್ಯದ ಆರ್ಥಿಕ ಸ್ಥಿತಿ ತೀವ್ರ ಕಂಗೆಟ್ಟಿದೆ. ರೈಲಿನಲ್ಲಿ ಉಚಿತ ಪ್ರಯಾಣ ಎಂಬ ಬಿಟ್ಟಿಭಾಗ್ಯದ ಆಸೆಯನ್ನು ತೋರಿಸಿದರೂ ರಾಹುಲ್ ಪ್ರಧಾನಿಯಾಗಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿಯವರನ್ನು ಈ ದೇಶದ ಜನತೆ ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲಿದ್ದಾರೆ.
ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬ ಸಂಕಲ್ಪದಡಿ ನಮೋ ಭಾರತ್ ಅಭಿಯಾನವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ನಮೋ ಭಾರತ್ 2.0 ಅಭಿಯಾನದ ರೂವಾರಿ ಚಕ್ರವರ್ತಿ ಸೂಲಿಬೆಲೆಯವರು ಹೇಳಿದರು
ಅವರು ಸೋಮವಾರ ನಗರದ ಕುಳಗಿ ರಸ್ತೆಯಲ್ಲಿರುವ ಶ್ರೀ.ವಿದ್ಯಾಧಿರಾಜ ಸಭಾ ಭವನದಲ್ಲಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಜನರನ್ನು ಜಾಗೃತಗೊಳಿಸಿ ರಾಷ್ಟ್ರದಲ್ಲಿ ಮೋದಿ ಸರಕಾರದ ಮೊದಲಿನ ಭಾರತಕ್ಕೂ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಈಗಿನ ಭಾರತದ ನಡುವಿನ ವ್ಯತ್ಯಾಸವನ್ನು ಜನತೆಗೆ ಮನದಟ್ಟು ಮಾಡುವ ನಿಟ್ಟಿನಲ್ಲಿ ಅಭಿಯಾನವನ್ನು ನಡೆಸಲಾಗುತ್ತಿದೆ. ಕೋಟಿ ಕೋಟಿ ಹಿಂದೂಗಳ ಮಹೋನ್ನತ ಕನಸಾಗಿದ್ದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣವು ಬಿಜೆಪಿಯ ಪ್ರಯತ್ನದಿಂದ ಸಾಧ್ಯವಾಗಿದೆ. ನಮ್ಮ ದೇಶವನ್ನು ಕಡೆಗಣಿಸುತ್ತಿದ್ದ ಜಗತ್ತಿನ ರಾಷ್ಟ್ರಗಳು ಮೋದಿಯವರ ಸಮರ್ಥ ನಾಯಕತ್ವದ ಪರಿಣಾಮದಿಂದಾಗಿ ಇಂದು ರಾಜ ಮರ್ಯಾದೆಯನ್ನು ನೀಡುವಂತಾಗಿದೆ. ಬರಲಿರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಮೋದಿ ಎಂದು ಮತ ಹಾಕಿ ಮೋದಿಯವರನ್ನು ಗೆಲ್ಲಿಸಿ ಭಾರತವನ್ನು ವಿಶ್ವ ಗುರು ಸ್ಥಾನದಲ್ಲಿ ನಿಲ್ಲಿಸುವ ಮಹತ್ವದ ಸಂಕಲ್ಪ ನಮ್ಮೆಲ್ಲರದ್ದಾಗಬೇಕೆಂದು ಕರೆ ನೀಡಿದರು.
ಹಿಂದೂ ಸಮಾಜೋತ್ಸವ ಸಮಿತಿಯ ಅಧ್ಯಕ್ಷರಾದ ವಾಸುದೇವ ಪ್ರಭು ಅವರು ಸ್ವಾಗತಿಸಿ, ವಂದಿಸಿದರು