Advertisement

ಮೋದಿ, ಷಾರ ಗಿಮಿಕ್‌ ರಾಜ್ಯದಲ್ಲಿ ನಡೆಯಲ್ಲ

12:40 PM Oct 04, 2017 | |

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರ ಗಿಮಿಕ್‌ ರಾಜ್ಯದಲ್ಲಿ ನಡೆಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್‌ ನೀಡಿದರು. ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳೊವ ಸಲುವಾಗಿ ಮಂಗಳವಾರ ನಗರಕ್ಕಾಗಮಿಸಿದ ವೇಳೆ ಮಂಡಕಳ್ಳಿ ವಿಮಾನನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ಅಮಿತ್‌ ಷಾ ಹಾಗೂ ನರೇಂದ್ರ ಮೋದಿ ಅವರ ಆಗಮನದಿಂದ ರಾಜ್ಯದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ಅವರ ಪ್ರಚಾರಕ್ಕೆ ರಾಜ್ಯದ ಜನರು ಸಹ ಮರಳಾಗುವುದಿಲ್ಲ. ಅಲ್ಲದೆ ರಾಜ್ಯದ ಜನರಿಗೆ ನಮ್ಮ ಸರ್ಕಾರದ ಆಡಳಿತ ಬಗ್ಗೆ ಸಮಾಧಾನವಿದೆ. ಜನರ ಒಲವು ಕಾಂಗ್ರೆಸ್‌ ಪಕ್ಷದ ಪರವಿದೆ. ಅಲ್ಲದೆ ಮುಂದೆಯೂ ನಮೊಂದಿಗಿರುತ್ತಾರೆಂಬ ವಿಶ್ವಾಸವಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಮಂಗಳೂರಿಗೆ ಆಗಮನದ ಕುರಿತು  ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಭ್ರಮಾಲೋಕ: ಮುಂದಿನ ದಸರಾವನ್ನು ನಾವೇ ಉದ್ಘಾಟಿಸುತ್ತೇವೆಂಬ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ ಸಿಎಂ, 2018ರ ಚುನಾವಣೆಯಲ್ಲೂ ನಮ್ಮದೇ ಸರ್ಕಾರ ಆಡಳಿತಕ್ಕೆ ಬರಲಿದ್ದು, ದಸರೆಯಲ್ಲಿ ನಮ್ಮವರೇ ಪೂಜೆ ಮಾಡುತ್ತೇವೆ ಎಂದು ಹೇಳಿದ್ದೇನೆ, ಇದರಲ್ಲಿ ತಪ್ಪೇನಿದೆ? ಎಂದರು.

ಆದರೆ ಕೆಲವರಿಗೆ ಮಾತನಾಡಲು ಯಾವುದೇ ವಿಷಯಗಳಿಲ್ಲದ ಸಂದರ್ಭ ಇಂತಹ ವಿಷಯಗಳ ಬಗ್ಗೆ ಚರ್ಚೆಗಳು ಸಹಜ. ಹೀಗಾಗಿ ತಮ್ಮ ಹೇಳಿಕೆಯನ್ನು ಬೇರೆ ರೀತಿಯಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ. ಬಿ.ಎಸ್‌. ಯಡಿಯೂರಪ್ಪ ಸೇರಿ ಹಲವರು ಸಿಎಂ ಆಗುವ ಭ್ರಮೆಯಲ್ಲಿದ್ದು ತಮ್ಮ ಸುತ್ತಲೂ ಭ್ರಮೆ ಹಾಗೂ ಆಶಾಗೋಪುರವನ್ನೇ ಕಟ್ಟುಕೊಂಡಿದ್ದಾರೆ. ಅವರಿಗೆ ತಮ್ಮ ಹೇಳಿಕೆಯನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದರು.

ನಮ್ಮ ಪಾತ್ರವೇನು ಇಲ್ಲ: ಗೌರಿ ಲಂಕೇಶ್‌ ಪತ್ರಕರ್ತೆ, ಸಮಾಜಮುಖೀ ಹೋರಾಟಗಾರ್ತಿಯಾಗಿದ್ದು, ಹೀಗಾಗಿ ಅವರ ಹತ್ಯೆಯನ್ನು ಖಂಡಿಸಿ ಪತ್ರಕರ್ತರು, ಚಿಂತಕರು, ವಿಚಾರವಾದಿಗಳು ಹೋರಾಟ ನಡೆಸುತ್ತಿದ್ದಾರೆ. ಆದರೆ ಗೌರಿ ಹತ್ಯೆ ಖಂಡಿಸಿ ನಡೆಯುತ್ತಿರುವ ಹೋರಾಟ, ಪ್ರತಿಭಟನೆಗಳ ಹಿಂದೆ ನಮ್ಮ ಪಾತ್ರವೇನಿಲ್ಲ. ಈ ಬಗ್ಗೆ ಬಿಜೆಪಿಯವರು ಮಾಡುವ ಆರೋಪಗಳು ಸತ್ಯಕ್ಕೆ ದೂರವಾಗಿದೆ. ಗೌರಿ ಲಂಕೇಶ್‌ ಹತ್ಯೆ ತನಿಖೆ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ತನಿಖೆಯಲ್ಲಿ ಪ್ರಗತಿ ಆಗಿರುವುದು ಸತ್ಯ ಎಂದರು.

Advertisement

ಕೆಎಸ್‌ಒಯು ಮಾನ್ಯತೆ ಬಗ್ಗೆ ಮಾತನಾಡಿ, ಈ ಬಗ್ಗೆ ಈಗಾಗಲೇ ಪತ್ರ ಬರೆಯಲಾಗಿದ್ದು, ಅಲ್ಲದೆ ದೆಹಲಿಗೆ ತೆರಳಿ ಜವಡೇಕರ್‌ ಅವರನ್ನು ಖುದ್ದು ಬೇಟಿ ಮಾಡುವುದಾಗಿ ತಿಳಿಸಿದರು. ಅಲ್ಲದೆ ಮಾಜಿ ಶಾಸಕ ಚಿಕ್ಕಣ್ಣ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ಸಂಧರ್ಭದಲ್ಲಿ ಆಯಾರಾಂ ಗಯಾರಾಂ ಇದ್ದದ್ದೆ, ಹೀಗಾಗಿ ರಾಜಕಾರಣಿಗಳು ಪಕ್ಷದಿಂದ ಪಕ್ಷ ಬದಲಿಸುವುದರಿಂದ ಯಾವುದೇ ಪ್ರಯೋಜನ ಇಲ್ಲ. ಇದರ ಬದಲಿಗೆ ಮತದಾರರು ಒಂದು ಪಕ್ಷದ ಪರ ಬರಬೇಕು ಎಂದು ಹೇಳಿದರು.

ಪಕ್ಷ ತ್ಯಜಿಸಿದವರ ಪರಿಸ್ಥಿತಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗಿಮಿಕ್‌ ಮೇಲೆ ಆಡಳಿತ ನಡೆಸುತ್ತಿದ್ದು, ಹೀಗಾಗಿ ಜನರನ್ನು ಹೆಚ್ಚು ದಿನ ಭಾವನಾತ್ಮಕ ಅಂಶಗಳ ಮೇಲೆ ಹಿಡಿದಿಡಲು ಸಾಧ್ಯವಿಲ್ಲ. ಮೋದಿ ಅವರು ಎಷ್ಟೇ ಮನ್‌ ಕಿ ಬಾತ್‌ ಹೇಳಿಕೊಂಡಿದ್ದರೂ ಏನೂ ಆಗುವುದಿಲ್ಲ.

ಅಲ್ಲದೆ ಮೋದಿ ಆಡಳಿತ ಬಗ್ಗೆ ಬಿಜೆಪಿ ಮುಖಂಡರೇ ಮಾತನಾಡುತ್ತಿದ್ದು, ಸುಬ್ರಹ್ಮಣ್ಯಯಸ್ವಾಮಿ, ಸಿನ್ಹಾ, ಎಸ್‌.ಎಂ.ಕೃಷ್ಣ ಸೇರಿದಂತೆ ಎಲ್ಲರೂ ಮಾತನಾಡುತ್ತಿದ್ದಾರೆ. ಬಿಜೆಪಿಗೆ ಹೋದ ಮೇಲೆ ಎಸ್‌.ಎಂ.ಕೃಷ್ಣ ಅವರಿಗೆ ಅಲ್ಲಿನ ಪರಿಸ್ಥಿತಿಯೇನು ಎಂಬುದು ಅರ್ಥವಾಗುತ್ತಿದ್ದು, ಹೊರಗಿದ್ದಾಗ ಅರ್ಥವಾಗಿರಲಿಲ್ಲ ಎಂದು ಮೋದಿ ಬಗೆಗಿನ ಎಸ್‌.ಎಂ.ಕೃಷ್ಣ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next