ಮೈಸೂರು: ಸರ್ಕಾರಿ ಸೌಲಭ್ಯಗಳನ್ನು ಉಚಿತವಾಗಿ ಪಡೆಯಬೇಕೆಂಬ ದೇಶದ ಜನರ ಮನಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿ ದೂರ ಮಾಡಿದ್ದಾರೆ ಎಂದು ಸಂಸದ ಪ್ರತಾಪ್‌ಸಿಂಹ ಹೇಳಿದರು. ಕೇಂದ್ರ ಸರ್ಕಾರ ಮೂರು ವರ್ಷ ಪೂರೈಸಿರುವ ಹಿನ್ನೆಲೆ ಭಾರತೀಯ ದೂರ ಸಂಪರ್ಕ ನಿಗಮ(ಬಿಎಸ್‌ಎನ್‌ಎಲ್) ಮೈಸೂರು ವೃತ್ತದ ವತಿಯಿಂದ ಮಂಗಳವಾರ ನಗರದ ಕಲಾಮಂದಿರದಲ್ಲಿ ಆಯೋಜಿಸಿದ್ದ ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಕಳೆದ 70 ವರ್ಷಗಳಿಂದ ಮತ ಬ್ಯಾಂಕ್ ರಾಜಕೀಯದ ಪರಿಣಾಮ ಜನರನ್ನು ಓಲೈಸಲು ತಂತ್ರಗಾರಿಕೆಯಿಂದ ಎಲ್ಲವನ್ನೂ ಉಚಿತವಾಗಿ ನೀಡುವ ಮನಸ್ಥಿತಿ ಬೆಳೆಸಲಾಗಿತ್ತು. ಇದರ ಪರಿಣಾಮ ದೇಶದ ಜನತೆ ಸರ್ಕಾರ ನಮ್ಮದು, ಸರ್ಕಾರ ಇರುವುದೇ ನಮಗೆ ಯೋಜನೆಗಳನ್ನು ನೀಡಲು, ನಾವು ಹುಟ್ಟಿರುವುದೇ ಸರ್ಕಾರದಿಂದ ಪಡೆದುಕೊಳ್ಳಲು ಎಂಬ ಭಾವನೆ ನಿರ್ಮಾಣವಾಗಿದ್ದರಿಂದ ನಮ್ಮಲ್ಲಿ ಕೈ ಚಾಚುವ ಮನಸ್ಥಿತಿಯೇ ಹೆಚ್ಚಾಗಿತ್ತು ಎಂದರು.
ಆದರೆ ಮೊದಲ ಬಾರಿಗೆ ಗಿವ್ ಇಟ್ ಅಪ್ ಎಂಬ ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಉಳ್ಳವರು ಗ್ಯಾಸ್ ಸಬ್ಸಿಡಿ ಬಿಟ್ಟುಕೊಡುವಂತೆ ಮನವಿ ಮಾಡುವ ಮೂಲಕ ಜನರಲ್ಲಿ ಬಿಟ್ಟುಕೊಡುವ ಔಧಾರ್ಯತೆ ಜಾಗೃತಗೊಳಿಸಿದರು. ಈ ನಿಟ್ಟಿನಲ್ಲಿ ಪ್ರಧಾನಿ ಕರೆಗೆ ಸ್ಪಂದಿಸಿ 1.10 ಕೋಟಿ ಜನರು ಗ್ಯಾಸ್‌ಸಬ್ಸಿಡಿ ಹಣ ಬಿಟ್ಟುಕೊಟ್ಟ ಪರಿಣಾಮ ಗ್ರಾಮೀಣ ಭಾಗದ 2 ಕೋಟಿ ಜನರಿಗೆ ಉಚಿತವಾಗಿ ಗ್ಯಾಸ್ ಸಂಪರ್ಕ ನೀಡಲಾಗಿದೆ ಎಂದು ತಿಳಿಸಿದರು.
ಅಭಿವೃದ್ಧಿಗೆ ಆದ್ಯತೆ: ದೇಶದಲ್ಲಿ 5 ಲಕ್ಷ ಕಿ.ಮೀ. ರಸ್ತೆ ಇದ್ದು, ಇದರಲ್ಲಿ 96 ಸಾವಿರ ಕಿ.ಮೀ.ಗಳು ಮಾತ್ರ ರಾಷ್ಟ್ರೀಯ ಹೆದ್ದಾರಿಯಾಗಿದ್ದು, ಈ ರಸ್ತೆಗಳಲ್ಲಿ ನಿಗದಿಗಿಂತ ಹೆಚ್ಚಿನ ಪ್ರಮಾಣದ ವಾಹನ ದಟ್ಟಣೆ ಇತ್ತು. ಹಿಂದಿನ ಸರ್ಕಾರ ದೇಶದಲ್ಲಿ 427 ರಾಷ್ಟ್ರೀಯ ರಸ್ತೆಗಳ ನಿರ್ಮಾಣ ಯೋಜನೆಯನ್ನು ಕೇವಲ ಘೋಷಣೆ ಮಾಡಿತ್ತು, ಆದರೆ ನರೇಂದ್ರ ಮೋದಿ ಇದಕ್ಕೆ ಒಪ್ಪಿಗೆ ನೀಡಿದ್ದು, ಸದ್ಯ ದೇಶದೆಲ್ಲೆಡೆ ಹೆದ್ದಾರಿಗಳ ನಿರ್ಮಾಣವಾಗುತ್ತಿದೆ. ಈ ಎಲ್ಲಾ ಅಭಿವೃದ್ಧಿ ಕೆಲಸಗಳಿಗೆ ಕೇಂದ್ರ ಸರ್ಕಾರವೇ ಅನುದಾನ ನೀಡುತ್ತಿದ್ದು, ಆ ಮೂಲಕ ಮೋದಿ ಅವರು ದೇಶದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದು ಹೇಳಿದರು.
ಗುಲಾಮಗಿರಿ ಮನಸ್ಥಿತಿ: ಬ್ರಿಟಿಷರು ನೂರಾರು ವರ್ಷಗಳ ದೇಶದಲ್ಲಿ ಆಡಳಿತ ನಡೆಸಿದ್ದರಿಂದ ನಾವು ಗುಲಾಮಗಿರಿ ಮನಸ್ಥಿತಿಯಲ್ಲೇ ಸಿಲುಕಿ, ಹೊರಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ದೇಶದ ಪ್ರಜೆಯಾಗಿ ನಾವು ನಮ್ಮ ಜವಾಬ್ದಾರಿಯನ್ನೇ ಮರೆತಿದ್ದೆವು, ಆದರೆ ಪ್ರಧಾನಿ ಮೋದಿ ಈ ಮನಸ್ಥಿತಿಯನ್ನು ಹೋಗಲಾಡಿಸಿದ್ದಾರೆ ಎಂದರು. ಇದಕ್ಕೂ ಮುನ್ನ ಕೇಂದ್ರ ಸರ್ಕಾರದ ಮೂರು ವರ್ಷಗಳ ಸಾಧನೆಯ ಮಾಹಿತಿ ನೀಡುವ ವೀಡಿಯೋ ಪ್ರದರ್ಶಿಸಲಾಯಿತು. ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಅಧ್ಯಕ್ಷ ಡಾ.ಆರ್.ಬಾಲಸುಬ್ರಹ್ಮಣ್ಯಂ, ಬಿಎಸ್‌ಎನ್‌ಎಲ್ ಮಹಾಪ್ರಬಂಧಕ ಕೆ.ಎಲ್.ಜಯರಾಂ ಹಾಜರಿದ್ದರು.
ಯಾರ್ದೊ ದುಡ್ಡು ಎಲ್ಲಮ್ಮನ ಜಾತ್ರೆ: ಗೃಹಬಳಕೆ ಎಲ್‌ಇಡಿ ಬಲ್ಬ್ಗಳಿಗೆ ಕೇಂದ್ರ ಸರ್ಕಾರ ಸಂಪೂರ್ಣ ಹಣ ನೀಡುತ್ತಿದ್ದರೂ ಬಲ್ಬ್ಗಳ ಮೇಲೆ ಸ್ಟಿಕ್ಕರ್‌ಗಳನ್ನು ಬೇರೆಯವರು ಅಂಟಿಸಿಕೊಂಡಿದ್ದಾರೆ. ಇದು ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂಬಂತಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿದರು.
ಕೇಂದ್ರ ಸರ್ಕಾರ 32 ರೂ.ಗಳಿಗೆ ಅಕ್ಕಿ ಖರೀದಿಸಿ ರಾಜ್ಯ ಸರ್ಕಾರಕ್ಕೆ 3 ರೂ.ಗಳಿಗೆ ಮತ್ತು 29 ರೂ.ಗಳಿಗೆ ಗೋಧಿ ಖರೀದಿಸಿ, ರಾಜ್ಯ ಸರ್ಕಾರಕ್ಕೆ 2 ರೂ.ಗಳಿಗೆ ನೀಡುತ್ತಿದ್ದು, ಇದರಲ್ಲಿ ಕೇಂದ್ರ ಸರ್ಕಾರವೇ ಹೆಚ್ಚಿನ ಹಣ ನೀಡುತ್ತಿದೆ. ಹೀಗಿದ್ದರೂ ಯಾರಧ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂಬಂತೆ ಕೇಂದ್ರ ಸರ್ಕಾರದ ಯೋಜನೆಯನ್ನು ಕೆಲವರು ಅನ್ನಭಾಗ್ಯದ ಹೆಸರಿನಲ್ಲಿ ನಮ್ಮ ಕಾರ್ಯಕ್ರಮ ಎಂದು ಬಿಂಬಿಸಿಕೊಳ್ಳುತ್ತಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.