Advertisement
“ಜನಸಂಖ್ಯೆಗೆ ಅನುಗುಣವಾಗಿಯೇ ಹಕ್ಕುಗಳು ಸಲ್ಲಬೇಕು ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷವು ದೇಶದ ಅಲ್ಪಸಂಖ್ಯಾಕರ ಹಕ್ಕುಗಳನ್ನು ಕಸಿದುಕೊಳ್ಳಲು ಮುಂದಾಗಿದೆಯೇ?’ ಎಂದು ಮೋದಿಯವರು ಪ್ರಶ್ನಿಸಿದ್ದಾರೆ.
Related Articles
ಇನ್ನೊಂದೆಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ದೇಶಾದ್ಯಂತ ಜಾತಿಗಣತಿ ನಡೆಯಬೇಕು ಎಂದು ಆಗ್ರಹಿಸುವುದರ ಜತೆಗೆ, “ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ’ (ಜಿತ್ನಾ ಆಬಾದಿ, ಉತ್ನಾ ಹಕ್) ಎಂಬ ಹೊಸ ಉದ್ಘೋಷದ ಮೂಲಕ ಚರ್ಚೆಗೆ ನಾಂದಿ ಹಾಡಿದ್ದಾರೆ. ಆದರೆ ಈ ಕುರಿತು ಪಕ್ಷದೊಳಗೆ ಕೆಲವರಿಂದ ಭಿನ್ನ ರಾಗ ಕೇಳಿಬಂದಿದೆ. ಮಂಗಳವಾರ ಟ್ವೀಟ್ ಮಾಡಿದ ಕಾಂಗ್ರೆಸ್‌ನ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿ, “ಅವಕಾಶಗಳಲ್ಲಿ ಸಮಾನತೆಯು ಎಂದಿಗೂ ಫಲಿತಾಂಶದ ಸಮಾನತೆಗೆ ಸಮಾನವಾಗಿರುವುದಿಲ್ಲ. ಜನಸಂಖ್ಯೆ ಆಧರಿತ ಪ್ರಾತಿನಿಧ್ಯ ಎನ್ನುವವರು ಮೊದಲು ಅದರಿಂದಾಗುವ ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳಬೇಕು. ಇದು ಅಂತಿಮವಾಗಿ ಬಹುಸಂಖ್ಯಾಕವಾದದೊಂದಿಗೆ ಕೊನೆಗೊಳ್ಳುತ್ತದೆ’ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಜೈರಾಂ ರಮೇಶ್, “ಸಿಂಘ್ವಿ ಅವರ ಹೇಳಿಕೆಯು ಅವರ ವೈಯಕ್ತಿಕ ಅಭಿಪ್ರಾಯ ವಾಗಿದೆ. ಅದು ಕಾಂಗ್ರೆಸ್ ಪಕ್ಷದ ನಿಲುವನ್ನು ಪ್ರತಿಬಿಂಬಿಸುವುದಿಲ್ಲ’ ಎಂದಿದ್ದಾರೆ. ಇದರ ಬೆನ್ನಲ್ಲೇ ಸಿಂಘ್ವಿ ಅವರು ತಮ್ಮ ಪೋಸ್ಟ್ ಅಳಿಸಿದ್ದಾರೆ.
Advertisement
ಈ ನಡುವೆ ಬಿಹಾರದ ಜಾತಿಗಣತಿ ವರದಿ ಸುಪ್ರೀಂ ಕೋರ್ಟ್ ಅಂಗಳ ತಲುಪಿದೆ. ಸಿಎಂ ನಿತೀಶ್ ನಡೆಯನ್ನು ಪ್ರಶ್ನಿಸಿ ಸಲ್ಲಿಕೆ ಯಾಗಿ ರುವ ಅರ್ಜಿ ಯನ್ನು ಅ. 6ರಂದು ವಿಚಾರಣೆಗೆ ಕೈಗೆತ್ತಿ ಕೊಳ್ಳುವು ದಾಗಿ ನ್ಯಾಯಪೀಠ ಮಂಗಳವಾರ ಹೇಳಿದೆ.
ವರದಿ ಬಿಡುಗಡೆಯ ಧೈರ್ಯ ಮಾಡಿ: ರಾಜ್ಯದಲ್ಲೂ ಮುಂದುವರಿದ ಆಗ್ರಹಬಿಹಾರದಲ್ಲಿ ಸಿಎಂ ನಿತೀಶ್ ಕುಮಾರ್ ಅವರು ಜಾತಿಗಣತಿ ವರದಿ ಬಹಿರಂಗಪಡಿಸಿದಂತೆ ಕರ್ನಾಟಕ ಸರಕಾರವೂ ಈಗಾಗಲೇ ಸಿದ್ಧವಾಗಿರುವ ವರದಿಯನ್ನು ಬಹಿರಂಗಪಡಿಸುವ ಧೈರ್ಯ ಮಾಡಬೇಕು ಎಂದು ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಆಗ್ರಹಿಸತೊಡಗಿದ್ದಾರೆ. ವರದಿ ಬಿಡುಗಡೆಯಾದರೆ ಯಾವ ಸಮುದಾಯಕ್ಕೆ ಯಾವ ರೀತಿಯ ಕಾರ್ಯಕ್ರಮ ರೂಪಿಸಬೇಕು, ಯಾರಿಗೆ ಹೆಚ್ಚಿನ ಅನುದಾನ ಕೊಡಬೇಕು ಎನ್ನುವುದು ಗೊತ್ತಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ವರದಿಯನ್ನು ಸರಕಾರ ತತ್‌ಕ್ಷಣವೇ ಸ್ವೀಕರಿಸದಿದ್ದರೆ ದೊಡ್ಡ ಮಟ್ಟದಲ್ಲಿ ಜನಾಂದೋಲನ ನಡೆಸಲಾಗುವುದು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ. ಎಲ್ಲರಿಗೂ ಸಮಾನ ಸೌಲಭ್ಯ ದೊರಕಲು ಕೇಂದ್ರ ಸರಕಾರವೂ ಜಾತಿಗಣತಿ ನಡೆಸಬೇಕು ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ.