ಜಗಳೂರು: 55 ವರ್ಷ ಆಳ್ವಿಕೆ ನಡೆಸಿದ ಕಾಂಗ್ರೆಸ್ ಸರಕಾರ ಮಾಡದೇ ಇರುವ ಸಾಧನೆಯನ್ನು ಮೋದಿಯವರು ಪ್ರಧಾನಿಯಾಗಿ ಕೇವಲ 50 ತಿಂಗಳಲ್ಲಿ ಮಾಡಿದ್ದಾರೆ. ದೇಶದ ಹೆಚ್ಚಿನ ಅಭಿವೃದ್ಧಿಗೆ ಮತ್ತೆ ಮೋದಿ ಪ್ರಧಾನ ಮಂತ್ರಿಯಾಗಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಶನಿವಾರ ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ತಾಲೂಕು ಬಿಜೆಪಿ ಘಟಕ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯನ್ನು ಸಸಿಗೆ ನೀರೆರೆದು ಉದ್ಘಾಟಿಸಿ ಮಾತನಾಡಿದ ಅವರು, ಚಹಾ ಮಾರುತ್ತಿದ್ದ ಸಾಮಾನ್ಯ ವ್ಯಕ್ತಿ ಪ್ರಧಾನಿಯಾಗಲು ಅವಕಾಶ ಮಾಡಿಕೊಟ್ಟಿದ್ದು ಭಾರತೀಯ ಜನತಾ ಪಾರ್ಟಿ. ಈ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತ ಸಹ ಉನ್ನತ ಹುದ್ದೆ ಹೊಂದಲು ಅವಕಾಶವಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಂತೆ ಕುಟುಂಬ ರಾಜಕಾರಣ ಇಲ್ಲಿ ನಡೆಯುವುದಿಲ್ಲ ಎಂದರು.
ಮೋದಿಯವರು ಅಧಿಕಾರ ವಹಿಸಿಕೊಂಡ ನಂತರ ದೇಶದ ಚಿತ್ರಣವೇ ಬದಲಾಗಿದೆ.ನೂರಾರು ಯೋಜನೆಗಳನ್ನು ಜಾರಿಗೆ ತಂದು ಪ್ರತಿಯೊಂದು ಸಮುದಾಯದ ಅಭಿವೃದ್ಧಿಗೆ ಒತ್ತು ನೀಡಿರುವ ಏಕೈಕ ಪ್ರಧಾನಿ ಇವರಾಗಿದ್ದಾರೆ. ಮೋದಿಯವರನ್ನು ಮತ್ತೆ ಪ್ರಧಾನಿಯಾಗಿಸಲು ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಹಗಲಿರುಳು ಶ್ರಮಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಶಾಸಕ ಎಸ್.ವಿ ರಾಮಚಂದ್ರ ಮಾತನಾಡಿ, ಸಮ್ಮಿಶ್ರ ಸರಕಾರ ಅನುದಾನ ನೀಡುವಲ್ಲಿ ತಾರತಮ್ಯ ಧೋರಣೆ ತೋರುತ್ತಿದೆ. ಇಂತಹ ಸಂದರ್ಭದಲ್ಲಿ ತಾಲೂಕಿನ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ನಾನೇ ಸ್ವತಃ 200 ರಿಂದ 250 ಕೊಳವೆಬಾವಿಗಳನ್ನು ಕೊರೆಸಿದ್ದು, ಅದರಲ್ಲಿ 120ರಲ್ಲಿ ನೀರು ಸಿಕ್ಕಿದೆ. ಸರಕಾರ ಅನುದಾನ ಕೊಡದಿದ್ದರೂ ಜನರ ನೀರಿನ ಸಮಸ್ಯೆ ಪರಿಹರಿಸುವುದು ನನ್ನ ಕರ್ತವ್ಯವಾಗಿದೆ ಎಂದರು.
ತಾಲೂಕಿಗೆ ಭದ್ರಾ ನೀರಾವರಿ ಯೋಜನೆ ನನ್ನ ಕನಸಾಗಿದ್ದು, ಸಿದ್ದೇಶ್ವರ್ ಅವರನ್ನು ಗೆಲ್ಲಿಸಿದರೆ ಯೋಜನೆ ಜಾರಿಗೆ ಅನುಕೂಲವಾಗುತ್ತದೆ ಎಂದರು. ಅರಸಿಕೇರೆ ದೇವೇಂದ್ರಪ್ಪ ಮಾತನಾಡಿ, ಮೋದಿಯವರು ಮತ್ತೆ ಪ್ರಧಾನಿಯಾದರೆ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ. ನಾನು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದು, ಬಳ್ಳಾರಿ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಹೇಳಿದರು.
ಬಿಜೆಪಿ ಮುಖಂಡರಾದ ಜಯಲಕ್ಷ್ಮೀ ಮಹೇಶ್, ಅನಿತ್ ಕುಮಾರ್, ಡಿ.ವಿ. ನಾಗಪ್ಪ, ಜೆ.ವಿ. ನಾಗರಾಜ್, ಸವಿತಾ, ಮಂಜುನಾಥ್, ಶಾಂತಕುಮಾರಿ, ಸೊಕ್ಕೆ ನಾಗರಾಜ್, ಹನುಮಂತಪ್ಪ, ಗುರುಮೂರ್ತಿ, ಸಿದ್ದೇಶ್, ತಿಪ್ಪೇಸ್ವಾಮಿ, ದೇವರಾಜ್, ನವೀನ್ ಕುಮಾರ್, ಬಿಸ್ತುವಳ್ಳಿ ಬಾಬು, ಪಣಿಯಪುರ ಲಿಂಗರಾಜ್ ಇತರರು ಇದ್ದರು.