ಪುತ್ತೂರು: ಚುನಾವಣ ರಾಜಕಾರಣ ದಿಂದ ದೂರ ಉಳಿದು ಬಿಜೆಪಿ ಪ್ರಗತಿಗೆ ಕೆಲಸ ಕಾರ್ಯಗಳನ್ನು ಮಾಡಲು ನಿರ್ಧರಿಸಿರುವುದಾಗಿ ಕೇಂದ್ರದ ಮಾಜಿ ಸಚಿವ, ಸಂಸದ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ.
ರವಿವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ರಾಜ್ಯ ಬಿಜೆಪಿಯಲ್ಲಿ ಶಿಸ್ತು ಮತ್ತು ಪ್ರಾಮಾಣಿಕವೆಂದು ಹೇಳುವ ಶಬ್ದಗಳಿಗೆ ಅರ್ಥ ಕಳೆದು ಕೊಳ್ಳುವ ರಾಜನೀತಿ ಇದೆ. ಇದು ನೋವಿನ ಸಂಗತಿ. ಚುನಾವಣೆಯ ತನಕ ಆ ನೋವನ್ನು ನುಂಗಿಕೊಂಡು ಚುನಾವಣೆಯ ಅನಂತರ ಮೋದಿಯವರ ಬಿಜೆಪಿ ಕರ್ನಾಟಕದಲ್ಲಿ ಬರಬೇಕು. ಅದಕ್ಕಾಗಿ ನಮ್ಮ ಹೋರಾಟವನ್ನು ನಿರಂತರ ಮಾಡುತ್ತೇವೆ ಎಂದು ಡಿ.ವಿ. ಸದಾನಂದ ಗೌಡ ಹೇಳಿದರು.
ನನ್ನ ಸಚ್ಚಾರಿತ್ರ್ಯದ ರಾಜಕಾರಣಕ್ಕೆ ಯಾರ ಪ್ರಮಾಣಪತ್ರವೂ ಬೇಕಾಗಿಲ್ಲ. ಗುಂಪುಗಾರಿಕೆಯ ರಾಜಕಾರಣ ನಾನು ಮಾಡಿಯೂ ಇಲ್ಲ, ಮಾಡುವುದೂ ಇಲ್ಲ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ವೇಳೆ ದಿಲ್ಲಿ ಗುಂಪು, ಕರ್ನಾಟಕ ಗುಂಪು ಇತ್ತು. ಆದರೆ ನಾವೆಲ್ಲ ಬಿಜೆಪಿ ಗುಂಪಿನಲ್ಲಿದ್ದೆವು. ಗುಂಪುಗಾರಿಕೆಯಿಂದಾಗಿ ನಾವು ಬಿಜೆಪಿಗೆ ಓಟು ಕೊಡುವುದಿಲ್ಲ ಎಂದು ಜನ ಸ್ಪಷ್ಟವಾಗಿ ಹೇಳಿದ್ದರು. ಇಂತಹ ಗುಂಪುಗಾರಿಕೆಯನ್ನು ನಿಲ್ಲಿಸಲು ಶುದ್ಧೀಕರಣ ಮುಂದಿನ ಭಾಗವಾಗಿದೆ ಎಂದರು.
ಮೋದಿ ಗೆಲ್ಲಿಸುವುದೇ ಗುರಿ
ಮುಂದಿನ ಬಾರಿಯೂ ಮೋದಿಯವರನ್ನು ಗೆಲ್ಲಿಸುವ ಚುನಾವಣೆಯೊಂದೇ ನಮ್ಮ ಮುಂದಿರುವುದು. ಪಕ್ಷ ನನಗೆ ಎಲ್ಲ ಕೊಟ್ಟಿದೆ. ಪಕ್ಷಕ್ಕೆ ನಾನು ಕೊಡಬೇಕಾಗಿದೆ. ಮುಂದೆ ಪಕ್ಷದ ಅಭಿವೃದ್ಧಿಗಾಗಿ ದುಡಿಯುವೆ ಎಂದರು.
ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ಬಿಜೆಪಿ ನಗರ ಯುವ ಮೋರ್ಚಾದ ಅಧ್ಯಕ್ಷ ಸಚಿನ್ ಶೆಣೈ, ದರ್ಣಪ್ಪ ಗೌಡ, ಪವನ್ ಕುಮಾರ್‌ಉಪಸ್ಥಿತರಿದ್ದರು.